ಅಭ್ಯರ್ಥಿಗಳಿದ್ರೂ ನಾಮಪತ್ರ ಸಲ್ಲಿಸದ ಬಿಜೆಪಿ

| Published : Feb 11 2025, 12:48 AM IST

ಸಾರಾಂಶ

ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷರಾಗಿ ಗೌಡ್ರ ಮಧು, ಉಪಾಧ್ಯಕ್ಷರಾಗಿ ಅಣ್ಣಯ್ಯಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್‌ ಕುಮಾರ್‌ ತವರು ಕ್ಷೇತ್ರವಾದ ಗುಂಡ್ಲುಪೇಟೆಯಲ್ಲಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ, ಉಪಾಧ್ಯಕ್ಷ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಿ.ಎಸ್.ನಿರಂಜನ್‌ ಕುಮಾರ್‌ ತವರಲ್ಲಿ ಪಕ್ಷದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಲ್ಲಿ ಅಭ್ಯರ್ಥಿಗಳಿದ್ದರೂ ನಾಮಪತ್ರ ಸಲ್ಲಿಸಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಪ್ರಬಲವಾಗಿದ್ದ ಆಡಳಿತ ಪಕ್ಷ ಅಧಿಕಾರವನ್ನು ಎಚ್ಚರಿಕೆಯಿಂದ ನಡೆಸುತ್ತದೆ ಎಂಬ ಮಾತಿದೆ. ಆದರೆ ಗುಂಡ್ಲುಪೇಟೆ ಪುರಸಭೆಯಲ್ಲಿ ಅಧ್ಯಕ್ಷ ಸ್ಥಾನ ಬಿಸಿಎಂ (ಬಿ), ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.

ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪುರಸಭೆ ಸದಸ್ಯ ನಾಗೇಶ್‌ ಇದ್ದು, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಕಾರಣ ಬಿಜೆಪಿ ಎಲ್ಲ ಸದಸ್ಯರೂ ಸ್ಪರ್ಧಿಸಲು ಅವಕಾಶವಿತ್ತು. ಆದರೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಿಬ್ಬರು ಅವಿರೋಧ ಆಯ್ಕೆಯಾಗಲು ಬಿಜೆಪಿ ಸಹಕಾರ ನೀಡಿದ್ದೇಕೆ ಎಂಬ ಪ್ರಶ್ನೆ ಬಿಜೆಪಿ ವಲಯದಲ್ಲಿ ಕೇಳಿ ಬಂದಿದೆ. ಸೋಲು ಗೆಲುವು ಸಹಜ. ವಿರೋಧ ಪಕ್ಷವಾಗಿ ಕಾಂಗ್ರೆಸ್‌ ಪಕ್ಷದ ವಿರುದ್ಧ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಬೇಕಿತ್ತು ಎಂದು ಬಿಜೆಪಿ ಹಿರಿಯ ಮುಖಂಡರೊಬ್ಬರು ಅಸಮಧಾನ ವ್ಯಕ್ತಪಡಿಸಿದ್ದಾರೆ.ಪುರಸಭೆಯಲ್ಲಿ ನಮಗೆ ಬಹುಮತ ಇರಲಿಲ್ಲ. ವ್ಯರ್ಥ ಪ್ರಯತ್ನ ಯಾಕೆ ಅಂತ ನಾಮಪತ್ರ ಸಲ್ಲಿಸಿಲ್ಲ. ಜನರ ಕಷ್ಟ, ಸುಖಗಳಿಗೆ ಸ್ಪಂದಿಸಿಕೊಂಡು ವಾರ್ಡ್‌ಗಳ ಅಭಿವೃದ್ಧಿ ಕೆಲಸ ಮಾಡೋದು ನನ್ನ ಕೆಲಸ.-ಪಿ.ಗಿರೀಶ್‌, ಮಾಜಿ ಅಧ್ಯಕ್ಷ, ಸದಸ್ಯ, ಗುಂಡ್ಲುಪೇಟೆ

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಇದೆ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಅಭ್ಯರ್ಥಿ ಹಾಕಬೇಕೋ, ಬೇಡವೋ ಎಂದು ಜಿಲ್ಲಾಧ್ಯಕ್ಷರು ಪುರಸಭೆ ಸದಸ್ಯರ ಸಭೆ ಕರೆಯಲಿಲ್ಲ.

-ಹೆಸರೇಳಲಿಚ್ಚಿಸದ ಬಿಜೆಪಿ ಮುಖಂಡ, ಗುಂಡ್ಲುಪೇಟೆ

ಮಧುಸೂಧನ ಪುರಸಭೆ ನೂತನ ಅಧ್ಯಕ್ಷಪುರಸಭೆ ಅಧ್ಯಕ್ಷರಾಗಿ ಪುರಸಭೆ ಕಾಂಗ್ರೆಸ್‌ ಸದಸ್ಯ ಮಧುಸೂದನ್‌, ಉಪಾಧ್ಯಕ್ಷರಾಗಿ ಕಾಂಗ್ರೆಸ್‌ ಹಿರಿಯ ಸದಸ್ಯ ಅಣ್ಣಯ್ಯಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪುರಸಭೆ ಅಧ್ಯಕ್ಷ ಕಿರಣ್‌ ಗೌಡ, ಉಪಾಧ್ಯಕ್ಷೆ ಹೀನಾ ಕೌಸರ್‌ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಧುಸೂದನ್‌, ಉಪಾಧ್ಯಕ್ಷ ಸ್ಥಾನಕ್ಕೆ ಅಣ್ಣಯ್ಯಸ್ವಾಮಿ ನಾಮಪತ್ರ ಸಲ್ಲಿಸಿದ್ದರು. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಅವಧಿ ಮುಗಿವ ತನಕ ಇತರೆ ಯಾರೂ ನಾಮಪತ್ರ ಸಲ್ಲಿಸಲಿಲ್ಲ. ಚುನಾವಣಾಧಿಕಾರಿ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಅಧ್ಯಕ್ಷರಾಗಿ ಮಧುಸೂದನ್‌, ಉಪಾಧ್ಯಕ್ಷರಾಗಿ ಅಣ್ಣಯ್ಯಸ್ವಾಮಿ ಅವಿರೋಧರಾಗಿ ಆಯ್ಕೆಯಾದರು ಎಂದು ಘೋಷಿಸಿದರು.

ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗುತ್ತಿದ್ದಂತೆಯೇ ಕಾಂಗ್ರೆಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ, ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ಗೆ ಜೈಕಾರ ಮೊಳಗಿಸಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌, ಅವಿರೋಧ ಆಯ್ಕೆ ಮಾಡಿದ ೨೩ ಮಂದಿ ಪುರಸಭೆ ಸದಸ್ಯರು ಹಾಗೂ ಅವಿರೋಧ ಆಯ್ಕೆಗೆ ಸಹಕರಿಸಿದ ವಿಪಕ್ಷದ ಸದಸ್ಯರಿಗೂ ಧನ್ಯವಾದ ಸಲ್ಲಿಸಿದರು. ಪತ್ರಕರ್ತರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆಯಾಗಿದೆ. ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಮುಂದಿನ ದಿನಗಳಲ್ಲಿ ತೀರ್ಮಾನಿಸುತ್ತೇವೆ ಎಂದರು.

ಸಂಸದ ಸುನೀಲ್‌ ಬೋಸ್‌ ಮಾತನಾಡಿ, ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು ಸದಸ್ಯರು ಹಾಗೂ ನಾಗರಿಕರ ವಿಶ್ವಾಸಕ್ಕೆ ಪಡೆದು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಮುಂದಾಗಿ ಎಂದು ಶುಭ ಹಾರೈಸಿದರು. ಪುರಸಭೆ ನೂತನ ಅಧ್ಯಕ್ಷ ಮದುಸೂದನ್‌ ಮಾತನಾಡಿ, ಶಾಸಕರ ಶ್ರಮದಿಂದ ₹೮೫ ಕೋಟಿ ವೆಚ್ಚದಲ್ಲಿ ಯುಜಿಡಿ ಸಮಸ್ಯೆಗೆ ಪರಿಹಾರ ದೊರಕಲಿದೆ ಹಾಗೂ ಪಟ್ಟಣವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸುವ ಕನಸು ಹೊಂದಿದ್ದೇನೆ ಎಂದರು.

ಈ ಸಮಯದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್‌, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್‌, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ನಟೇಶ್, ಪುರಸಭೆ ಸದಸ್ಯರಾದ ಮಹಮದ್‌ ಇಲಿಯಾಸ್‌, ಪಿ.ಶಶಿಧರ್‌ (ದೀಪು), ಎನ್.ಕುಮಾರ್‌, ಎಲ್.ನಿರ್ಮಲ, ಶ್ರೀನಿವಾಸ್‌(ಕಣ್ಣಪ್ಪ), ರಾಜಗೋಪಾಲ್‌, ಜಿಪಂ ಮಾಜಿ ಸದಸ್ಯ ಬಿ.ಕೆ.ಬೊಮ್ಮಯ್ಯ, ಪುರಸಭೆ ಮಾಜಿ ಅಧ್ಯಕ್ಷ ಭಾಗ್ಯಮ್ಮ, ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪಿ.ಸುರೇಂದ್ರ, ಮುಖಂಡರಾದ ಜಿಕೆಎನ್‌ ವಿಶ್ವ, ಬಸವರಾಜು, ನವೀದ್‌ ಖಾನ್‌, ಕೆ.ಶಿವಸ್ವಾಮಿ, ಗಾಂಧಿ, ಮಾಧು ನಾಯಕ, ಲಿಂಗರಾಜು ಸೇರಿದಂತೆ ಹಲವರಿದ್ದರು.