ಬಿಜೆಪಿ ರಾಷ್ಟ್ರೀಯವಾದದಿಂದ ಜಾತಿವಾದಕ್ಕೆ ತಿರುಗಿದೆ: ಈಶ್ವರಪ್ಪ

| Published : May 29 2024, 12:53 AM IST

ಬಿಜೆಪಿ ರಾಷ್ಟ್ರೀಯವಾದದಿಂದ ಜಾತಿವಾದಕ್ಕೆ ತಿರುಗಿದೆ: ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ರಾಜ್ಯದ ಬಿಜೆಪಿ ಈಗ ರಾಷ್ಟ್ರೀಯವಾದದಿಂದ ಲಿಂಗಾಯತ ಜಾತೀಯವಾದದ ಕಡೆ ತಿರುಗುತ್ತಿದೆ. ಯಡಿಯೂರಪ್ಪ, ವಿಜಯೇಂದ್ರ ಹಿಂದೆ ಸುತ್ತುವವರಿಗೆ ಪಕ್ಷದಲ್ಲಿ ನೆಲೆ ಸಿಗುತ್ತಿದೆ. ಜನಸಂಘದ, ಆರ್.ಎಸ್.ಎಸ್. ತಪಸ್ಸು ಈ ಕುಟುಂಬಕ್ಕೆ ಬಲಿಯಾಗಿದೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿಬಿಜೆಪಿಯಲ್ಲಿ ಈಗ ದೇಶಕ್ಕೊಂದು, ರಾಜ್ಯಕ್ಕೊಂದು ವ್ಯತಿರಿಕ್ತ ನೀತಿ ಅನುಸರಿಸಲಾಗುತ್ತಿದೆ. ದೇಶದ ಬಿಜೆಪಿ ಹಿಂದುತ್ವದ ಸಿದ್ಧಾಂತದ ಪರ ಕೆಲಸ ಮಾಡುತ್ತದೆ, ಆದರೆ ರಾಜ್ಯ ಬಿಜೆಪಿಯಲ್ಲಿ ಹಿಂದುತ್ವದ ವಿಚಾರಕ್ಕೆ ತಿಲಾಂಜಲಿ ಬಿಡಲಾಗುತ್ತಿದೆ. ಅಪ್ಪಮಕ್ಕಳ ಕೈಗೆ ಬಿಜೆಪಿ ಸಿಕ್ಕಿಬಿಟ್ಟಿದೆ, ಇಲ್ಲಿ ಪಕ್ಷನಿಷ್ಠೆಗೆ ಬೆಲೆಯಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮತ್ತೆ ಯಡಿಯೂರಪ್ಪ ಕುಟುಂಬ ವಿರುದ್ಧ ಹರಿಹಾಯ್ದಿದ್ದಾರೆ.

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಈಗ ರಾಷ್ಟ್ರೀಯವಾದದಿಂದ ಲಿಂಗಾಯತ ಜಾತೀಯವಾದದ ಕಡೆ ತಿರುಗುತ್ತಿದೆ. ಯಡಿಯೂರಪ್ಪ, ವಿಜಯೇಂದ್ರ ಹಿಂದೆ ಸುತ್ತುವವರಿಗೆ ಪಕ್ಷದಲ್ಲಿ ನೆಲೆ ಸಿಗುತ್ತಿದೆ. ಜನಸಂಘದ, ಆರ್.ಎಸ್.ಎಸ್. ತಪಸ್ಸು ಈ ಕುಟುಂಬಕ್ಕೆ ಬಲಿಯಾಗಿದೆ. ಹಿಂದೆ ಬಿಜೆಪಿ ಸಾಮೂಹಿಕ ನೇತೃತ್ವ ಇತ್ತು. ಈಗ ಕುಟುಂಬದ ಕೈಗೆ ಪಕ್ಷ ಹೋಗಿದೆ. ವಿಜಯೇಂದ್ರ ಒಬ್ಬ ಬಚ್ಚಾ, ಅವನಿಗೆ ಯಾವ ರಾಜಕೀಯ ಜ್ಞಾನ ಇದೆ? ಆರು ತಿಂಗಳಲ್ಲಿ ಅಧ್ಯಕ್ಷನಾಗಲು ಬೇರೆ ನಾಯಕರು ಸಿಗಲಿಲ್ವೇ? ಕೇಂದ್ರ ನಾಯಕರಿಗೆ ಕರ್ನಾಟಕದಲ್ಲಿ ಯಡಿಯೂರಪ್ಪ ಮಾತ್ರ ಎನ್ನುವ ಭ್ರಮೆಯಲ್ಲಿದ್ದಾರೆ ಎಂದವರು ತೀವ್ರ ವಾಗ್ದಾಳಿ ನಡೆಸಿದರು.

ಕುಟುಂಬದ ಕೈಗೆ ಪಕ್ಷವನ್ನು ಬಲಿಕೊಡಬೇಕಾ? ಕಾರ್ಯಕರ್ತರು ಚಿಂತಿಸಬೇಕು. ವಿಧಾನ ಪರಿಷತ್ ಚುನಾವಣೆಯಲ್ಲಿ 30 ವರ್ಷದಿಂದ ಬಿಜೆಪಿಗೆ ನಿಷ್ಠರಾಗಿದ್ದವರನ್ನು ಪಕ್ಕಕ್ಕೆ ಸರಿಸಿ, ನಕ್ಸಲಿಸ್ಟ್, ಹಿಂದು ವಿರೋಧಿ, ಮುಸಲ್ಮಾನ ಕ್ರೈಸ್ತರ ನಡಿಗೆಯ ನೇತೃತ್ವ ವಹಿಸಿದವನಿಗೆ ಟಿಕೆಟ್ ಕೊಡಲಾಗಿದೆ ಎಂದು ಆರೋಪಿಸಿದರು.

ಲೋಕಸಭಾ ಚುನಾವಣೆಯಲ್ಲಿ ಮಗನಿಗೆ ಉಪಯೋಗ ಆಗಲಿ ಅಂತ ಸಾದರ ಲಿಂಗಾಯತ ಡಾ. ಸರ್ಜಿಗೆ ಪರಿಷತ್ ಟಿಕೆಟ್ ಕೊಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ರಘುಪತಿ ಭಟ್‌ಗೆ ಶಿವಮೊಗ್ಗ ಉಸ್ತುವಾರಿ ಕೊಡಲಾಗಿತ್ತು. 42 ದಿನ ಶಿವಮೊಗ್ಗದ ಹಳ್ಳಿಹಳ್ಳಿಯಲ್ಲಿ ಭಟ್ರನ್ನು ಸುತ್ತಿಸಿ ಪ್ರಚಾರ ಮಾಡಿಸಿದ್ದೀರಿ. ರಘುಪತಿ ಭಟ್, ಹೆಂಡತಿ, ಮಕ್ಕಳನ್ನು ಬಿಟ್ಟು ರಾತ್ರಿ ಹಗಲು ಬಿಜೆಪಿಗೆ ಪ್ರಚಾರ ಮಾಡಿದರು. ನಿಮಗೆ ಪರಿಷತ್ತು ಟಿಕೆಟ್ ಎಂದು ನಂಬಿಸಿ, ಈಗ ಮೋಸ ಮಾಡಿದ್ದಾರೆ ಎಂದು ದೂರಿದರು.

ನಾವು ಭಟ್ರಿಗೆ ಪರಿಷತ್ ಟಿಕೆಟ್ ಕೊಡುತ್ತೇವೆ ಎಂದು ಮಾತು ಕೊಡಲಿಲ್ಲ ಎಂದು ಕೃಷ್ಣಮಠಕ್ಕೆ ಬಂದು ಅಪ್ಪ, ಮಕ್ಕಳು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ ಈಶ್ವರಪ್ಪ, ಜಾತಿ ಮತ್ತು ಹಣಬಲದಿಂದ ಟಿಕೆಟ್ ಡಾ. ಧನಂಜಯ ಸರ್ಜಿ ಪಾಲಾಯಿತು. ಪಕ್ಷನಿಷ್ಠೆಯಲ್ಲಿ ಇವರಿಗೆ ರಘುಪತಿ ಭಟ್ ಅವರ ಎಡಗಾಲಿನಷ್ಟು ಬೆಲೆ ಇಲ್ಲ ಎಂದು ವ್ಯಂಗ್ಯವಾಡಿದರು.

ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿದ್ದು ಯಡಿಯೂರಪ್ಪ ಎಂದು ವಿಜಯೇಂದ್ರ ಹೇಳುತ್ತಿದ್ದಾರೆ. ಕೇರಳ, ತಮಿಳುನಾಡಿನಲ್ಲಿ ಹಲವಾರು ಬಿಜೆಪಿ ನಾಯಕರು ಒದ್ದಾಡುತ್ತಿದ್ದಾರೆ. ತಮಿಳುನಾಡಲ್ಲಿ ಅಣ್ಣಾಮಲೈ ಸಂಘಟನೆಗೆ ಬಿದ್ದು ಒದ್ದಾಡುತ್ತಿದ್ದಾರೆ. ಅಣ್ಣಾಮಲೈಗೆ ಯಾವಾಗ ಏನು ಕಾದಿದ್ಯೊ ಗೊತ್ತಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಶಿವರಾಮ್ ಉಡುಪ, ಉಪೇಂದ್ರ ನಾಯಕ್, ಮಹೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.