ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಜನಪ್ರತಿನಿಧಿಗಳಾಗಿ ಆಯ್ಕೆಗೊಂಡಿರುವ ಜಿಲ್ಲೆಯ ಕಾಂಗ್ರೆಸ್ ಶಾಸಕರ ಇಲ್ಲಿಯವರೆಗೆ ಮಾಡಿರುವಂತಹ ಅಭಿವೃದ್ಧಿ ಕಾರ್ಯಗಳ ಕುರಿತು ಮಾಹಿತಿ ನೀಡುವಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಜನಪರವಾಗಿ ಪ್ರಶ್ನಿಸಿರುವುದನ್ನು ಕಾಂಗ್ರೆಸ್ಸಿನ ಮಾಜಿ ವಿಧಾನ ಪರಿಷತ್ ಸದಸ್ಯೆ ಬಿಜೆಪಿಯ ಚುನಾವಣಾ ಗಿಮಿಕ್ ಎಂದು ಹೇಳಿರುವುದು ಹಾಸ್ಯಾಸ್ಪದ ಸಂಗತಿ ಎಂದು ಜಿಲ್ಲಾ ಬಿಜೆಪಿ ತಿರುಗೇಟು ನೀಡಿದೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ವಕ್ತಾರ ಕಿಶೋರ್ ಕುಮಾರ್ ಮತ್ತು ಪ್ರಮುಖರು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷವಾಗುತ್ತಿದ್ದರೂ, ಕೊಡಗಿನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಹಿಂದಿನ ಬಿಜೆಪಿ ಶಾಸಕರು ಮಂಜೂರು ಮಾಡಿಸಿರುವ ಅಭಿವೃದ್ಧಿ ಕೆಲಸಗಳಿಗೆ ಭೂಮಿಪೂಜೆ ಮಾಡುವುದು, ಒಂದೇ ರಸ್ತೆಯನ್ನು ಎರಡೆರಡು ಬಾರಿ ಉದ್ಘಾಟನೆ ಮಾಡುತ್ತಿರುವುದು ಮಾತ್ರ ಕಂಡು ಬರುತ್ತಿದೆ ಎಂದರು.ಕೊಡಗಿನ ಹಾಲಿ ಶಾಸಕರು ಕೇವಲ ಕಾಂಗ್ರೆಸ್ ಶಾಸಕರಲ್ಲ, ಅವರು ಎಲ್ಲಾ ಜನರಿಗೂ ಶಾಸಕರು. ಆದ್ದರಿಂದ ಅವರನ್ನು ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಜವಾಬ್ದಾರಿ ಸ್ಥಾನದಲ್ಲಿದ್ದ ವೀಣಾ ಅಚ್ಚಯ್ಯ ಅವರು ಇದನ್ನು ಅರ್ಥ ಮಾಡಿಕೊಳ್ಳದಿರುವುದು ಕಾಂಗ್ರೆಸ್‌ನ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದರು.ಬಿಜೆಪಿ ಯಾವತ್ತೂ ದ್ವೇಷದ ರಾಜಕೀಯ ಮಾಡಲ್ಲ, ನಮ್ಮದು ನುಡಿದಂತೆ ನಡೆಯುವ ಪಕ್ಷವಾಗಿದ್ದು, ಅಭಿವೃದ್ಧಿಯ ಬಗ್ಗೆ ಪ್ರಶ್ನೆ ಮಾಡಿದರೆ ವೀಣಾ ಅಚ್ಚಯ್ಯ ಅವರಿಗೆ ನೋವಾಗುವುದು ಯಾಕೆ ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಅವಧಿಯಲ್ಲಿ ಏನೆಲ್ಲ ಅಭಿವೃದ್ಧಿ ಕೆಲಸಗಳಾಗಿದೆ ಎಂಬುದು ಆ ಸಂದರ್ಭ ವಿಧಾನ ಪರಿಷತ್ ಸದಸ್ಯರಾಗಿದ್ದ ವೀಣಾ ಅಚ್ಚಯ್ಯ ಅವರಿಗೂ ಚೆನ್ನಾಗಿ ತಿಳಿದಿದೆ. ಆದರೆ ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಕಾಂಗ್ರೆಸ್ಸಿಗರು ಬಿಜೆಪಿ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ ಆರೋಪಿಸಿದರು.ಸಂಸದ ಪ್ರತಾಪ್ ಸಿಂಹ ಅವರು ಬೆಂಗಳೂರು- ಮೈಸೂರು, ಮೈಸೂರು- ಕುಶಾಲನಗರ ಚತುಷ್ಪಥ ರಸ್ತೆ, ಮಡಿಕೇರಿ-ಸಂಪಾಜೆ ಹೆದ್ದಾರಿ ಅಭಿವೃದ್ಧಿಯಾಗಿದೆ. ಜಿಲ್ಲೆಯ ಹಲವಾರು ಸಹಕಾರ ಸಂಘಗಳ ಅಭಿವೃದ್ಧಿ, ಶಾಲಾ ಸಭಾಂಗಣಗಳು, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ, ಸಮುದಾಯ ಭವನಗಳಿಗೆ, ದೇವಾಲಯಗಳ ಜೀರ್ಣೋದ್ದಾರಕ್ಕೆ ಸಂಸದರು ಸಾಕಷ್ಟು ಅನುದಾನ ನೀಡಿದ್ದಾರೆ. ಇದು ವೀಣಾ ಅಚ್ಚಯ್ಯ ಅವರಿಗೆ ತಿಳಿದಿಲ್ಲವೇ ಎಂದು ಪ್ರಶ್ನಿಸಿದ ಪ್ರಮುಖರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಒಪ್ಪಿಕೊಂಡಿರುವ ಮತದಾರರು ಬಿಜೆಪಿ ಪರ ಇರುವುದನ್ನು ಸಹಿಸದೆ ಕಾಂಗ್ರೆಸ್ಸಿಗರು ಆರೋಪಿಸಿದರು.ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗಲಿದ್ದಾರೆ, ಇದೇ ಕಾರಣಕ್ಕೆ ಕಾಂಗ್ರೆಸ್ಸಿಗರು ಬಿಜೆಪಿ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದು, ಇದನ್ನು ಅವರು ತಕ್ಷಣ ನಿಲ್ಲಿಸಬೇಕು ಎಂದರು.ವಕ್ತಾರರಾದ ಟಿ.ಎ.ಕಿಶೋರ್ ಕುಮಾರ್, ಸುಬ್ರಹ್ಮಣ್ಯ ಉಪಾಧ್ಯಾಯ, ಬಿ.ಕೆ.ಅರುಣ್ ಕುಮಾರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಕಾರ್ಯದರ್ಶಿ ಪ್ರಶಾಂತ್ ಹಾಗೂ ಮಡಿಕೇರಿ ನಗರ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ ಸುದ್ದಿಗೋಷ್ಠಿಯಲ್ಲಿದ್ದರು.