ಬಿಜೆಪಿಯ ಬೇರುಗಳು 1951ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಸ್ಥಾಪಿಸಿದ ಭಾರತೀಯ ಜನ ಸಂಘದಲ್ಲಿದೆ. 1980ರ ಏಪ್ರಿಲ್ 6 ರಂದು ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಅಸ್ತಿತ್ವಕ್ಕೆ ಬಂದಿತು.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾಂಗ್ರೆಸ್‌ಗೆ ಪರ್ಯಾಯವಾಗಿ ರಾಷ್ಟ್ರೀಯವಾದ ಸಿದ್ಧಾಂತದೊಂದಿಗೆ ಪ್ರಾರಂಭವಾದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಇಂದು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಲು ಹಲವು ಹಿರಿಯ ನಾಯಕರ ತ್ಯಾಗ, ಶ್ರಮವೇ ಕಾರಣ ಎಂದು ಮಾಜಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದರು.

ತಾಲೂಕಿನ ಸಾತನೂರು ಗ್ರಾಮದ ಅಚೀವರ್ಸ್‌ ಇಂಟರ್‌ ನ್ಯಾಷನಲ್‌ ಸ್ಕೂಲ್‌ ಆವರಣದಲ್ಲಿ ಪಂ.ದೀನದಯಾಳ್‌ ಉಪಧ್ಯಾಯ ಪ್ರಶಿಕ್ಷಣ ಮಹಾಭಿಯಾನ ನಗರದ ಪ್ರಶಿಕ್ಷಣ ವರ್ಗ ಹಾಗೂ ಕಾರ್ಯಕರ್ತರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಬಿಜೆಪಿಯ ಬೇರುಗಳು 1951ರಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಸ್ಥಾಪಿಸಿದ ಭಾರತೀಯ ಜನ ಸಂಘದಲ್ಲಿದೆ. 1980ರ ಏಪ್ರಿಲ್ 6 ರಂದು ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಅಡ್ವಾಣಿ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಾರ್ಟಿ ಅಸ್ತಿತ್ವಕ್ಕೆ ಬಂದಿತು ಎಂದರು.

1984ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ 2 ಸ್ಥಾನಗಳನ್ನು ಮಾತ್ರ ಗೆಲ್ಲಲು ಶಕ್ತವಾಗಿತ್ತು. 1990ರ ದಶಕದಲ್ಲಿ ಎಲ್.ಕೆ.ಅಡ್ವಾಣಿಯವರ ರಥಯಾತ್ರೆ ಮತ್ತು ರಾಮಜನ್ಮಭೂಮಿ ಚಳವಳಿಯು ಪಕ್ಷಕ್ಕೆ ರಾಷ್ಟ್ರ ಮಟ್ಟದಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿತು ಎಂದರು.

1996ರಲ್ಲಿ ಮೊದಲ ಬಾರಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ನಂತರ ಬಿಜೆಪಿ 1998 ಮತ್ತು 1999ರಲ್ಲಿ ಎನ್‌ಡಿಎ (ಎನ್ ಡಿಎ) ಒಕ್ಕೂಟದ ಮೂಲಕ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿ ದೇಶವನ್ನು ಮುನ್ನಡೆಸಿದರು. 2014ರಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಇತಿಹಾಸ ನಿರ್ಮಿಸಿ 282 ಸ್ಥಾನಗಳೊಂದಿಗೆ ಪೂರ್ಣ ಬಹುಮತದ ಸರ್ಕಾರ ರಚಿಸಿತು ಎಂದು ವಿವರಿಸಿದರು.

ಬಿಜೆಪಿ ಮೈಸೂರು ವಿಭಾಗ ಸಹ ಪ್ರಭಾರಿ ಈ.ಸಿ.ನಿಂಗರಾಜೇಗೌಡ ಮಾತನಾಡಿ, ಬಿಜೆಪಿ ಮಹತ್ವ ಇಡೀ ರಾಜ್ಯದ ಜನೆತೆಗೆ ಗೊತ್ತಾಗಿದೆ. ಈಗ ಜನರಿಗೆ ಬಿಜೆಪಿ ಪಕ್ಷದ ಮೇಲೆ ವಿಶ್ವಾಸ ಮೂಡಿದೆ. ಅದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಕೆಲಸ ಮಾಡಬೇಕು ಎಂದರು.

ಬೇರೆ ರಾಜಕೀಯ ಪಕ್ಷಗಳಲ್ಲಿ ಇಂತಹ ಶಿಬಿರಗಳು ನಡೆಯುವುದಿಲ್ಲ. ಪಕ್ಷದ ಉದ್ದೇಶ ಹಾಗೂ ನಮ್ಮ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವುದನ್ನು ಕಲಿಸಲು ಇಂತಹ ಶಿಬಿರಗಳನ್ನು ನಡೆಸಲಾಗುತ್ತಿದೆ. ಸ್ವಾಮಿ ವಿವೇಕಾನಂದ ಅವರ ವಾಣಿಯಂತೆ ಧ್ಯೇಯ ಇಟ್ಟುಕೊಂಡು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಒಗ್ಗಟ್ಟಿನಂದ ನಡೆಯೋಣ ಎಂದರು.

ಮುಂಬರುವ ಜಿಪಂ, ತಾಪಂ, ಗ್ರಾಪಂ, ಪುರಸಭೆ, ನಗರಸಭೆ, ವಿಧಾನ ಪರಿಷತ್‌ ಚುನಾವಣೆ, ಲೋಕಸಭೆ ಸೇರಿದಂತೆ ಯಾವುದೇ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುವ ಮಟ್ಟಕ್ಕೆ ಬೆಳೆಯಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಅಶೋಕ್‌ ಜಯರಾಂ, ರೈತ ಮೋರ್ಚಾ ಕಾರ್ಯದರ್ಶಿ ಎಚ್‌.ಆರ್‌. ಅಶೋಕ್‌, ನಗರಾಧ್ಯಕ್ಷ ಪ್ರಸನ್ನ ಕುಮಾರ್‌, ಗ್ರಾಮಾಂತರ ಅಧ್ಯಕ್ಷ ಭೀಮೇಶ್‌, ಜಿಲ್ಲಾ ಕಾರ್ಯದರ್ಶಿ ಹನುಮಂತು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿವೇಕ್‌, ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ.ಸದಾನಂದ್‌, ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಮುಖಂಡರಾದ ಆನಂದ್‌, ಸುನೀಲ್‌, ನಿತ್ಯಾನಂದ, ಚಂದ್ರು ಭಾಗವಹಿಸಿದ್ದರು.