ಶಾಸಕರ ಹೇಳಿಕೆ ತಿರುಚಿ ಬಿಜೆಪಿ ಜನರ ದಿಕ್ಕು ತಪ್ಪಿಸುತ್ತಿದೆ: ಘೋರ್ಪಡೆ

| Published : Aug 30 2024, 01:13 AM IST

ಸಾರಾಂಶ

ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿ ಸರ್ಕಾರ ಅಸ್ಥಿರಗೊಳಿಸಲು ಸಿದ್ಧ

ಗಜೇಂದ್ರಗಡ: ಪಟ್ಟಣದಲ್ಲಿ ಅಹಿಂದ ವರ್ಗದಿಂದ ನಡೆದ ಪ್ರತಿಭಟನೆಯಲ್ಲಿ ಶಾಸಕ ಜಿ.ಎಸ್.ಪಾಟೀಲ ಹಲವಾರು ವಿಚಾರಗಳೊಂದಿಗೆ ಪ್ರಸ್ತಾಪಿಸಿದ ವಿಷಯವನ್ನು ಬಿಜೆಪಿಯವರು ತಿರುಚಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಶಿವರಾಜ ಘೋರ್ಪಡೆ ಹೇಳಿದರು.

ಪತ್ರಿಕಾಗೊಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕೇಂದ್ರ ಸರ್ಕಾರ ರಾಜ್ಯಪಾಲರ ಮೂಲಕ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಿಸಿ ಸರ್ಕಾರ ಅಸ್ಥಿರಗೊಳಿಸಲು ಸಿದ್ಧವಾಗಿದೆ. ಅಸಂವಿಧಾನಿಕವಾಗಿ ಸರ್ಕಾರ ತೆಗೆಯಲು ಪ್ರಯತ್ನ ಮಾಡಿದರೆ ರಾಜ್ಯದ ಜನರು, ಸಿದ್ದರಾಮಯ್ಯ ಅಭಿಮಾನಿಗಳು ಸಹಿಸಿಕೊಳ್ಳಲು ಸಾಧ್ಯವಿಲ್ಲ, ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂಬ ವಿಚಾರ ಪ್ರಸ್ತಾಪ ಮಾಡಿದ್ದಾರೆ ಹೊರತು ಯಾವುದೇ ದುರುದ್ದೇಶದ ಹೇಳಿಕೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖಂಡ ಸಿದ್ದಪ್ಪ ಬಂಡಿ ಮಾತನಾಡಿ, ಬಿಜೆಪಿ ನಾಯಕರು ನಮ್ಮ ಶಾಸಕರ ಹೇಳಿಕೆ ತಿರುಚಿ ಅದನ್ನು ಜನಸಾಮಾನ್ಯರ ತಲೆಯಲ್ಲಿ ತುಂಬುತ್ತಿದ್ದಾರೆ. ವಿಪಕ್ಷಗಳ ನಾಯಕರ ಮೇಲೆ ಇಡಿ,ಸಿಬಿಐ ದಾಳಿ ಮೂಲಕ ಕೇಂದ್ರ ಸರ್ಕಾರ ಅಧಿಕಾರ ದುರಪಯೋಗ ಅತಿಯಾದರೆ ಜನ ದಂಗೆ ಏಳುತ್ತಾರೆ, ನಿಮ್ಮನ್ನು ಹಾಗೆ ಬಿಡುವದಿಲ್ಲ ಎಂದು ಸಾಂದರ್ಭಿಕವಾಗಿ ಹೇಳಿದ್ದಾರೆ ಎಂದರು.

ಮುಖಂಡ ಬಿ.ಎಸ್. ಶೀಲವಂತರ, ವಕೀಲ ಎಚ್.ಎಸ್. ಸೋಂಪುರ ಮಾತನಾಡಿದರು. ವೀರಣ್ಣ ಶೆಟ್ಟರ, ಮುರ್ತುಜಾ ಡಾಲಾಯತ, ಪ್ರಶಾಂತ ರಾಠೋಡ, ಯಲ್ಲಪ್ಪ ಬಂಕದ, ಪ್ರಕಾಶ ದಿವಾಣದ, ಶರಣು ಪೂಜಾರ, ರಾಜು ಸಾಂಗ್ಲೀಕರ, ವೆಂಕಟೇಶ ಮುದಗಲ್, ಅಂದಪ್ಪ ಬಿಚ್ಚೂರ, ಬಸು ಚನ್ನಿ, ಸಿದ್ದು ಗೊಂಗಡಶೆಟ್ಟಿಮಠ ಸೇರಿ ಇತರರು ಇದ್ದರು.