ಮಳೆ ಮಾಪನ ಕೇಂದ್ರಗಳು ಹಾಳಾಗಲು ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಳೆ ಮಾಪನ ಕೇಂದ್ರಗಳು ಹಾಳಾಗಲು ಹಿಂದಿನ ಬಿಜೆಪಿ ಸರ್ಕಾರವೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಡಿಕೆ ಬೆಳೆಗೆ ಕೊಳೆ ರೋಗ, ಎಲೆ ಚುಕ್ಕೆ ರೋಗಗಳ ಕುರಿತಂತೆ ಸಂಬಂಧಿಸಿದ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ರೈತರು ಬೆಳೆ ವಿಮೆ ಕಂತನ್ನು ಸರಿಯಾದ ಸಮಯದಲ್ಲಿ ತುಂಬಿದ್ದರೂ ಹವಾಮಾನ ವೈಪರೀತ್ಯದಿಂದಾಗಿ ಆದ ಬೆಳೆ ಹಾನಿಗೆ ಪರಿಹಾರ ಬರದೇ ಇರಲು ಹವಾಮಾನ ಯಂತ್ರಗಳು ಕೆಟ್ಟಿರುವುದೇ ಕಾರಣ. ಇದಕ್ಕೆ ಇನ್ಸೂರೆನ್ಸ್ ಕಂಪನಿಗಳೇ ಹೊಣೆಯಾಗುತ್ತವೆ. ಬರುವ ಬುಧವಾರ-ಗುರುವಾರ ಅಭಿವೃದ್ಧಿ ಆಯುಕ್ತರ ಜೊತೆ ಸಭೆ ನಡೆಸುತ್ತೇನೆ. ಈ ಕುರಿತು ಶಿವಮೊಗ್ಗ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ಕರೆದು ರಾಜ್ಯ ಅಭಿವೃದ್ಧಿ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲು ಡಿಸಿ ಗುರುದತ್ತ ಹೆಗಡೆ ಅವರಿಗೆ ಸೂಚಿಸಿದರು.

ಅನೇಕ ಕಡೆ ಗ್ರಾಮ ಪಂಚಾಯತಿಗಳ ಮೇಲ್ಛಾವಣಿಗಳ ಮೇಲೆ ಮಳೆ ಮಾಪನ ಅಳವಡಿಸಲಾಗಿದೆ. ಕಟ್ಟಡ ಸೋರಿಕೆ ತಡೆಯಲು ಮಳೆ ಮಾಪನ ಯಂತ್ರಗಳ ಮೇಲೆಯೇ ತಗಡುಗಳನ್ನು ಮುಚ್ಚಿದ್ದರಿಂದ ಸರಿಯಾದ ದತ್ತಾಂಶ ಸಿಗುತ್ತಿಲ್ಲ. ಈ ಸಾಲಿನಲ್ಲಿ ಸರಿಯಾದ ದತ್ತಾಂಶ ಸಿಗದಿದ್ದರೆ ಮುಂದಿನ ವರ್ಷ ಹೇಗೆ ಬೆಳೆ ವಿಮೆ ಲೆಕ್ಕಾಚಾರ ಹಾಕುತ್ತೀರಿ ಎಂದು ಪ್ರಶ್ನಿಸಿದ ಅವರು, ಮಳೆ ಮಾಪನಗಳ ಮೇಲೆ ತಗಡಿನ ಶೀಟು ಮುಚ್ಚಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಅಡಿಕೆ ಬೆಳೆ ಹಾನಿ ಪರಿಹಾರದ ಮೊತ್ತ 180 ಕೋಟಿ ರುಗಳಾಗಿದ್ದು ಅದರಲ್ಲಿ 60 ಕೋಟಿ ರು. ಶಿವಮೊಗ್ಗದ್ದೇ ಆಗಿದೆ. ಈ ಕುರಿತು ರಾಜ್ಯ ಮುಖ್ಯ ಕಾರ್ಯದರ್ಶಿಗಳು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮಳೆ ಮಾಪನ ನಿರ್ವಹಣೆಗೆ ಗ್ರಾಮ ಪಂಚಾಯಿತಿಗಳಿಗೆ ಪ್ರತಿ ವರ್ಷ ತಲಾ 14 ಸಾವಿರ ರು. ಕೊಡಲಾಗುತ್ತದೆ. ಆದರೂ ಸರಿಯಾದ ನಿರ್ವಹಣೆ ಆಗುತ್ತಿಲ್ಲ ಅಂದರೆ ರೈತರು ಏನು ಮಾಡಬೇಕು? ಇನ್ಸೂರೆನ್ಸ್‌ ಕಂಪನಿ ವಿರುದ್ಧ ನ್ಯಾಯಾಲಯದ ಮೊರೆ ಹೋಗಬೆಕೇ ಎಂಬುದರ ಬಗ್ಗೆಯೂ ಚರ್ಚಿಸಲಾಗುವುದು. ಕೃಷಿ ಸಚಿವ ಕೃಷ್ಣ ಬೈರೇಗೌಡರು ರೈತರಿಗೆ ಅನುಕೂಲವಾಗಲೆಂದು 2000 ಮಳೆ ಯತ್ರಗಳ ಖರೀಧಿಗೆ ಮುಂದಾಗಿದ್ದಾರೆ ಎಂದರು.

ಕಬ್ಬು ಮತ್ತು ಮೆಕ್ಕೆಜೋಳಗಳ ಕನಿಷ್ಟ ಬೆಂಬಲ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ರೈತರಿಗೆ ಅನ್ಯಾಯವಾಗಬಾರದೆಂದು ಮುಖ್ಯಮಂತ್ರಿಗಳು ನಿನ್ನೆಯ ಸಚಿವ ಸಂಪುಟದ ಸಭೆಯಲ್ಲಿ ಕೆಲ ಉತ್ತಮ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ. ಬಿಜೆಪಿಯವರು ಪ್ರತಿಭಟನೆಗೆ ಇಳಿಯುವ ಮುನ್ನ ತಮ್ಮಿಂದಾದ ತಪ್ಪುಗಳ ಬಗ್ಗೆ ಯೋಚಿಸಬೇಕು ಎಂದು ಸಲಹೆ ನೀಡಿದರು.

ಬರುವ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಯ ಒಂದರಿಂದ 12ನೇ ತರಗತಿಯ ಮಕ್ಕಳಿಗೆ ಉಚಿತ ನೋಟ್ ಬುಕ್, ಪುಸ್ತಕ, ಸಮವಸ್ತ್ರ ವಿತರಿಸಲಾಗುವುದು. ಕೇವಲ ಒಂದು ಮಗು ಇರುವ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ ಎಂದು ಪುನರುಚ್ಛರಿಸಿದ ಅವರು 800 ಪಿಯು ಉಪನ್ಯಾಸಕರು, 12 ಸಾವಿರ ಶಿಕ್ಷಕರನ್ನು ನೇಮಕಮಾಡಿಕೊಳ್ಳಲಾಗುವುದು. ಮೂರು ಪರೀಕ್ಷಾ ಪದ್ಧತಿ ಮುಂದುವರಿಯಲಿದೆ ಎಂದರು.

ಆರ್.ಅಶೋಕ್ ಮಾತಿನಿಂದ ಬಿಎಸ್‌ವೈಗೆ ಮುಜುಗುರ: ಸಚಿವ

ಶೇ.63ರಷ್ಟು ಭ್ರಷ್ಟಾಚಾರದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಹೊಟ್ಟೆಕಿಚ್ಚಿಗೆ ಮಾತನಾಡಿರುವುದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮುಜುಗುರ ತರುವುದೇ ಆಗಿದೆ. ಪಾಪ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮುಂದುವರಿಸಲು ಯಡಿಯೂರಪ್ಪ ದೆಹಲಿಗೆ ಹೋಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅಶೋಕ್ ಬೇಕೆಂತಲೇ ಬಿಜೆಪಿ ವಿರುದ್ಧವೇ ಹೇಳಿಕೆ ನೀಡುತ್ತಿದ್ದಾರೆ. ಅಶೋಕ್‌ ಬಹಳ ಬುದ್ದಿವಂತ. ಸಂಸದ ರಾಘವೇಂದ್ರ ಇದನ್ನು ತಿಳಿದುಕೊಳ್ಳಬೇಕು ಎಂದು ಸಚಿವ ಮಧು ಬಂಗಾರಪ್ಪ ಬಿಜೆಪಿಗರ ಕಾಲೆಳೆದರು.