- ಭೋವಿ ಸೇರಿದಂತೆ ಪರಿಶಿಷ್ಟ ಜಾತಿಗಳಿಗೆ ಕಾಂಗ್ರೆಸ್ ಸರ್ಕಾರದ ಅನ್ಯಾಯ - ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶ್ರೀನಿವಾಸ ದಾಸಕರಿಯಪ್ಪ ಪರ ಮತದಾರ ಒಲವು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರೆಯಲ್ಲಿ ಅಭಿವೃದ್ಧಿ ಕೆಲಸಗಳು ಬಿಜೆಪಿ ಅವಧಿಯಲ್ಲಿ ಮಾಡಿದ್ದ ಕೆಲಸ, ಕಾರ್ಯ, ಬಿಡುಗಡೆ ಮಾಡಿದ್ದ ಅನುದಾನದಲ್ಲಿ ಆಗಿವೆ. ನಗರ, ಜಿಲ್ಲೆ ಅಭಿವೃದ್ಧಿಗೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ದಿವಂಗತ ಶಾಮನೂರು ಶಿವಶಂಕರಪ್ಪನವರ ಕೊಡುಗೆ ಶೂನ್ಯ ಎಂದು ವಿಧಾನ ಪರಿಷತ್ತು ವಿಪಕ್ಷದ ಉಪ ನಾಯಕ ಸುನೀಲ್ ವಲ್ಯಾಪುರೆ ಹೇಳಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮಾತ್ರವಲ್ಲ, ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಸಚಿವ ಮತ್ತು ಶಾಸಕರಿಂದ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಭದ್ರಾ ನಾಲೆಗಳ ಆಧುನೀಕರಣಕ್ಕೆ ₹950 ಕೋಟಿ, ತುಂಗಭದ್ರಾ ನದಿಯಿಂದ 22 ಕೆರೆಗಳನ್ನು ತುಂಬಿಸುವ ಯೋಜನೆಗೆ ₹150 ಕೋಟಿ, ಪಾಲಿಕೆಗೆ ಸಿಎಂ ವಿಶೇಷಾನುದಾನ ಪ್ರತಿ ವರ್ಷ ₹100 ಕೋಟಿಯಂತೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಇಲ್ಲಿನ ಜನರಿಗೆ ನೀಡಿದ್ದ ಭರವಸೆಯಂತೆ ಸ್ಮಾರ್ಟ್ ಸಿಟಿ ಯೋಜನೆಯಡಿ ₹600 ಕೋಟಿ ನೀಡಿದ್ದು. ನಮ್ಮ ಸರ್ಕಾರಗಳು ನೀಡಿದ್ದ ಅನುದಾನದಲ್ಲೇ ಇಲ್ಲಿ ಅಭಿವೃದ್ಧಿ ಕೆಲಸ, ಕಾರ್ಯಗಳಾಗಿರುವುದು ಎಂದು ಸ್ಪಷ್ಟಪಡಿಸಿದರು.
ಸ್ಮಾರ್ಟ್ ಸಿಟಿ ಕಾಮಗಾರಿಗಳ ನಂತರ ಕಾಂಗ್ರೆಸ್ಸಿನ ಸಚಿವರು, ಶಾಸಕರ ಕೊಡುಗೆ ಏನು? ಕಾಂಗ್ರೆಸ್ ಸರ್ಕಾರ ದಾವಣಗೆರೆ ನಗರ, ಜಿಲ್ಲೆಯ ಅಭಿವೃದ್ಧಿಗಾಗಿ ಯಾವುದೇ ಅನುದಾನ ನೀಡಿಲ್ಲ. ಯಾವುದೇ ವಿಶೇಷ ಯೋಜನೆ ಘೋಷಿಸಿಲ್ಲ. ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ₹100 ಕೋಟಿ ಘೋಷಣೆ ಮಾಡಿದ್ದಾರಷ್ಟೇ. ಈ ಸರ್ಕಾರದ ಆಳ್ವಿಕೆ ಬಗ್ಗೆ ಸಾರ್ವಜನಿಕ ವಲಯದಲ್ಲೇ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದಿಂದ ಭೋವಿ ಸಮಾಜಕ್ಕೆ ಬಹಳಷ್ಟು ಅನ್ಯಾಯವಾಗಿದೆ. ಪರಿಶಿಷ್ಟ ಜಾತಿಯಲ್ಲಿರುವ ಭೋವಿ ಸಮಾಜವನ್ನು 59 ಜಾತಿಗಳೊಂದಿಗೆ ಸಿ ಗುಂಪಿನಲ್ಲಿ ಸೇರಿಸಲಾಗಿದೆ. ಶಿಕ್ಷಣ, ಉದ್ಯೋಗ ಇತರೆಯದಕ್ಕೆ ಭೋವಿ, ವಡ್ಡರ ಸಮುದಾಯದವರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಎ, ಬಿ, ಸಿ ಗುಂಪುಗಳನ್ನು ಮಾಡಿರುವ ಕಾರಣದಿಂದಾಗಿ ಭೋವಿ ಸಮಾಜ ಮಾತ್ರವಲ್ಲ ಪರಿಶಿಷ್ಟ ಜಾತಿ ಪಟ್ಟಿಯ ಎಲ್ಲ ಸಮುದಾಯಗಳಿಗೂ ತೀವ್ರ ಅನ್ಯಾಯವಾಗುತ್ತಿದೆ ಎಂದು ಅವರು ದೂರಿದರು.ನಮ್ಮ ಸರ್ಕಾರದ ಅವದಿಯಲ್ಲಿ ಭೋವಿ ಅಭಿವೃದ್ಧಿ ನಿಗಮದಲ್ಲಿ ಯಾವುದೇ ಅವ್ಯವಹಾರಗಳೂ ನಡೆದಿಲ್ಲ. ಇದು ಸಿಒಡಿ, ಇ.ಡಿ. ತನಿಖೆಯಲ್ಲೂ ಸಾಬೀತಾಗಿದೆ. ಆದರೂ, ಬಿಜೆಪಿ ಹೆಸರನ್ನು ಕೆಡಿಸಬೇಕೆಂಬ ಕಾರಣಕ್ಕೆ ನಮ್ಮವರನ್ನೇ ಎತ್ತಿಕಟ್ಟಲಾಗಿತ್ತು. ಕಾಂಗ್ರೆಸ್ ಸರ್ಕಾರದ ವಿರುದ್ಧ ಭೋವಿ ಸಮಾಜ ಜಾಗೃತಗೊಂಡಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಪರವಾಗಿ ನಮ್ಮ ಸಮುದಾಯದ ಮನೆ ಮನೆಗೂ ಭೇಟಿ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಸಿ.ಎನ್. ವೀರಭದ್ರಪ್ಪ ಆದಾಪುರ, ಗೋ ರಕ್ಷಾ ಸಮಿತಿ ಮುಖಂಡ ಬಿ.ಟಿ.ಸಿದ್ದಪ್ಪ, ಎಸ್‌ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಮಾಯಕೊಂಡ ಜಿ.ಎಸ್. ಶ್ಯಾಮ್, ಪಾಲಿಕೆ ಮಾಜಿ ಸದಸ್ಯ ಆರ್.ಶಿವಾನಂದ, ಓದೋ ಗಂಗಪ್ಪ, ಎಸ್.ಜಿ. ಸೋಮಶೇಖರ, ಮಂಜುನಾಥ ನಲ್ಲಿ, ಹನುಮಂತಪ್ಪ ಇತರರು ಇದ್ದರು.- - -
(ಬಾಕ್ಸ್) * ಮತದಾರರು ಬಿಜೆಪಿ ಅಭ್ಯರ್ಥಿಗೆ ಆಶೀರ್ವದಿಸಲು ಮನವಿ ದಕ್ಷಿಣ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಸರಳ, ಸಜ್ಜನಿಕೆಯ ವ್ಯಕ್ತಿ. ಸಂಘಟನೆ ಮೂಲಕ ಬೆಳೆದ, ಕೆಳವರ್ಗದಿಂದ ಬಂದ ಯುವಕ. ಕಡುಬಡತನವನ್ನೂ ಅನುಭವಿಸಿರುವ ಶ್ರೀನಿವಾಸ ಪರ ಎಲ್ಲೆಡೆ ಜನರ ಒಲವು ವ್ಯಕ್ತವಾಗುತ್ತಿದೆ ಎಂದು ಸುನಿಲ್ ವಲ್ಯಾಪುರೆ ಹೇಳಿದರು.ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಹುಟ್ಟುತ್ತಲೇ ಚಿನ್ನದ ಚಮಚದಲ್ಲಿ ಕುಡಿದವರು. ನಮ್ಮ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಧ್ಯೆ ಅಜಗಜಾಂತರ ವ್ಯತ್ಯಾಸವಿದೆ. ಸ್ವತಃ ದಕ್ಷಿಣ ಕ್ಷೇತ್ರದ ಜನರೇ ಈ ಮಾತುಗಳನ್ನು ಹೇಳುತ್ತಿದ್ದಾರೆ. ಸಚಿವರ ಪುತ್ರ ಜನರ ಕಷ್ಟ-ನಷ್ಟಕ್ಕೆ ಆಗುವುದಿಲ್ಲ ಎಂಬುದು ಎಲ್ಲರಿಗೂ ಅರಿವಿದೆ ಎಂದು ಅವರು ಹೇಳಿದರು. ಜನರಿಗೆ ಸ್ಪಂದಿಸುವವರಿಗೆ ಅದೇ ಜನರು ಸ್ಪಂದಿಸುತ್ತಾರೆ. ಕೂಲಿ ಆಳಿನಂತೆ ನಾವು. ಬಿಜೆಪಿ ಪರ ಮತ ಕೇಳಲು ಹೋದಾಗ ಕಾಂಗ್ರೆಸ್ಸಿನ ವೈಫಲ್ಯದ ಬಗ್ಗೆ ಜನರೇ ಹೇಳುತ್ತಿದ್ದಾರೆ. ನಮ್ಮ ಭೋವಿ ಸಮಾಜ ಹಾಗೂ ದಕ್ಷಿಣ ಕ್ಷೇತ್ರದ ಸಮಸ್ತ ಮತದಾರರು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪಗೆ ಆಶೀರ್ವದಿಸಲಿ ಎಂದು ಮನವಿ ಮಾಡಿದರು.
- - --30ಕೆಡಿವಿಜಿ5, 6: ದಾವಣಗೆರೆಯಲ್ಲಿ ಸೋಮವಾರ ವಿಧಾನ ಪರಿಷತ್ತು ವಿಪಕ್ಷದ ಉಪ ನಾಯಕ ಸುನೀಲ್ ವಲ್ಯಾಪುರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.