ಅದ್ಯಾವುದೋ ಕೇಸ್‌ ಇಟ್ಕೊಂಡು ಬಿಜೆಪಿ ಬೆಂಕಿ ಹಚ್ತಾ ಇದೆ-ಅಬ್ಬಯ್ಯ

| Published : Jan 03 2024, 01:45 AM IST

ಅದ್ಯಾವುದೋ ಕೇಸ್‌ ಇಟ್ಕೊಂಡು ಬಿಜೆಪಿ ಬೆಂಕಿ ಹಚ್ತಾ ಇದೆ-ಅಬ್ಬಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

, ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿ ಹೋರಾಟಗಾರರನ್ನು ಬಂಧಿಸಿದ ಪ್ರಕರಣವನ್ನು ದೊಡ್ಡದು ಮಾಡುತ್ತಿದ್ದಾರೆ. ಅದು ಪೊಲೀಸರ ರೂಟಿನ್‌ ಕೆಲಸವಷ್ಟೇ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಅದ್ಯಾವುದೋ ಒಂದು ಕೇಸ್‌ ಅನ್ನು ಇಟ್ಕೊಂಡು ಬಿಜೆಪಿಯವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಎಲೆಕ್ಷನ್‌ ಬಂದರೆ ಏನಾದರೂ ವಿಷಯ ಬೇಕಷ್ಟೇ. ಆ ಕೆಲಸ ಇದೀಗ ಮಾಡುತ್ತಿದೆ ಅಷ್ಟೇ ಎಂದು ಶಾಸಕ ಪ್ರಸಾದ ಅಬ್ಬಯ್ಯ ಕಿಡಿಕಾರಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿ ಹೋರಾಟಗಾರರನ್ನು ಬಂಧಿಸಿದ ಪ್ರಕರಣವನ್ನು ದೊಡ್ಡದು ಮಾಡುತ್ತಿದ್ದಾರೆ. ಅದು ಪೊಲೀಸರ ರೂಟಿನ್‌ ಕೆಲಸವಷ್ಟೇ. ಹಳೇ ಪ್ರಕರಣಗಳನ್ನು ವಿಲೇವಾರಿ ಮಾಡುತ್ತಿದ್ದಾರೆ. ಅವುಗಳಲ್ಲಿ ಇದು ಕೂಡ ಒಪನ್‌ ಆಗಿದೆ. ಹೀಗಾಗಿ, ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ. ಇದೊಂದು ರೂಟಿನ್‌ ಪ್ರೊಸೆಸ್‌ ಅಷ್ಟೇ ಎಂದರು.

ಪೊಲೀಸರ ರೂಟಿನ್ ಕೆಲಸಕ್ಕೆ ಇವರು ಬಣ್ಣ ಹಚ್ಚಿದ್ದಾರೆ. ಬಣ್ಣ ಹಚ್ಚಿ ಜನರ ಕೋಮು ಭಾವನೆ ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಆರ್‌. ಅಶೋಕ ಅವರು ಹುಬ್ಬಳ್ಳಿಗೆ ಬಂದು ಪ್ರತಿಭಟನೆ ನಡೆಸಲಿದ್ದಾರಂತೆ. ರಾಜ್ಯದಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ. ಅಭಿವೃದ್ಧಿ ವಿಷಯಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸಲಿ. ಅದು ಬಿಟ್ಟು ಹೀಗೆ ಎಲೆಕ್ಷನ್‌ ಗಿಮಿಕ್‌ ಮಾಡಲು ಹೊರಟಿದ್ದಾರೆ. ರಾಜ್ಯದೆಲ್ಲೆಡೆ ಹಳೇ ಪ್ರಕರಣಗಳನ್ನು ವಿಲೇವಾರಿ ಮಾಡಲಾಗುತ್ತಿದೆ. ಅದರಲ್ಲಿ ಇದು ಕೂಡ ಒಂದು ಅಷ್ಟೇ. ಇದನ್ನು ದೊಡ್ಡದು ಮಾಡಲು ಹೊರಟಿದ್ದಾರೆ ಎಂದರು.

ಬರಗಾಲ ಬಂದರೂ ನಮ್ಮ ಐದು ಗ್ಯಾರಂಟಿಗಳಿಂದ ಜನ ನೆಮ್ಮದಿಯಿಂದ ಇದ್ದಾರೆ. ಜನರು ನಿಟ್ಟುಸಿರು ಬಿಡುತ್ತಿದ್ದಾರೆ. ಅದನ್ನು ಸಹಿಸಲು ಇವರಿಗೆ ಆಗುತ್ತಿಲ್ಲ. ಹೀಗಾಗಿ, ಅದನ್ನು ಅಳಿಸಿಹಾಕುವ ಯತ್ನ ಬಿಜೆಪಿ ಮಾಡುತ್ತಿದೆ ಎಂದರು.

ಈದ್ಗಾ ವಿಷಯದ ಮೇಲೆ ದೇಶದಲ್ಲಿ ಇವರು ನೆಲೆ ಊರಿದ್ದಾರೆ. ಇದೀಗ ಯಾವ ಇಷ್ಯೂ ಇಲ್ಲ. ಹೀಗಾಗಿ ಇದನ್ನೇ ದೊಡ್ಡದು ಮಾಡಿ ರಾಜಕಾರಣ ಮಾಡುತ್ತಿದ್ದಾರೆ ಎಂದರು.

ಹಳೇ ಹುಬ್ಬಳ್ಳಿಯ ಕೇಸ್‌ ಬೇರೆ. ಅಲ್ಲಿ ಶೇ. 90ರಷ್ಟು ಅಮಾಯಕರೇ ಇದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.