ಕಾರ್ಯಕರ್ತರ ಪರಿಶ್ರಮ, ಸಂಘಟನಾ ಶಕ್ತಿ ಮತ್ತು ನಿಸ್ವಾರ್ಥ ಸೇವೆಯೇ ಪಕ್ಷ ದೇಶದಾದ್ಯಂತ ಬಲಿಷ್ಠವಾಗಿ ಬೆಳೆಯಲು ಕಾರಣವಾಗಿದೆ

ಯಲಬುರ್ಗಾ: ಭಾರತದಲ್ಲಿ ಕಾರ್ಯಕರ್ತರ ಸಂಘಟನೆಯಿಂದಲೇ ಬಿಜೆಪಿ ಬಲಿಷ್ಠವಾಗಿ ಬೆಳೆದಿದೆ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಚಿಕ್ಕಮ್ಯಾಗೇರಿ-ಯಲಬುರ್ಗಾ-ಮುಧೋಳ ಮಹಾಶಕ್ತಿ ಕೇಂದ್ರಗಳ ಬಿಎಲ್ಎ-೨ ಹಾಗೂ ಬೂತ್ ಅಧ್ಯಕ್ಷರ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಭಾರತೀಯ ಜನತಾ ಪಕ್ಷದ ಯಶಸ್ಸಿನ ಹಿಂದಿರುವ ಶಕ್ತಿ ಕಾರ್ಯಕರ್ತರದ್ದಾಗಿದೆ. ಕಾರ್ಯಕರ್ತರ ಪರಿಶ್ರಮ, ಸಂಘಟನಾ ಶಕ್ತಿ ಮತ್ತು ನಿಸ್ವಾರ್ಥ ಸೇವೆಯೇ ಪಕ್ಷ ದೇಶದಾದ್ಯಂತ ಬಲಿಷ್ಠವಾಗಿ ಬೆಳೆಯಲು ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಜಗತ್ತಿನ ಪ್ರಮುಖ ರಾಷ್ಟ್ರಗಳ ಜತೆ ಗುರುತಿಸಿಕೊಳ್ಳುವಂತಾಗಿದೆ. ದೇಶದ ಆರ್ಥಿಕ ಪ್ರಗತಿಯು ಗಣನೀಯವಾಗಿ ಸಾಧಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಹೊಸ ಆಯಾಮ ತಲುಪಿದೆ. ದೇಶದಲ್ಲಿ ಶಾಂತಿ, ಭದ್ರತೆ ಹಾಗೂ ಸದೃಢ ಆಡಳಿತ ವ್ಯವಸ್ಥೆ ನಿರ್ಮಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ ಎಂದರು.

ಕೇಂದ್ರ ಸರ್ಕಾರವು ಅನೇಕ ಜನಪರ ಯೋಜನೆ ಜಾರಿಗೊಳಿಸಿ ಬಡವರ ಹಿತ ಕಾಪಾಡುತ್ತಿದೆ. ಕೇಂದ್ರದ ಕಾರ್ಯಕ್ರಮ ಜನರಿಗೆ ತಲುಪಿಸುವ ಕಾರ್ಯ ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದರು.

ರಾಜ್ಯ ಸರ್ಕಾರವು ಅನೇಕ ಭ್ರಷ್ಟಾಚಾರ ಪ್ರಕರಣಗಳಲ್ಲಿ ತೊಡಗಿದೆ.ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಹೊಡೆದಿದೆ. ಜನರ ಹಣ ದುರುಪಯೋಗಪಡಿಸಿಕೊಂಡಿದೆ. ಸರ್ಕಾರದ ವೈಫಲ್ಯ ಕಾರ್ಯಕರ್ತರು ಮನೆಮನೆಗೂ ತಲುಪಿಸುವ ಮೂಲಕ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯಲಿದ್ದು, ಬೂತ್ ಮಟ್ಟದ ಕಾರ್ಯಕರ್ತರು ವಿಶೇಷ ಜಾಗ್ರತೆ ವಹಿಸಬೇಕು. ಯಾವುದೇ ಅರ್ಹ ಮತದಾರರ ಹೆಸರು ಕೈಬಿಡದಂತೆ ನೋಡಿಕೊಳ್ಳಬೇಕು. ವಿಶೇಷವಾಗಿ 18 ವರ್ಷ ತುಂಬಿದ ಯುವಕರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಹೊಸ ಮತದಾರರ ಸೇರ್ಪಡೆಯಿಂದ ಪ್ರಜಾಪ್ರಭುತ್ವ ಇನ್ನಷ್ಟು ಬಲಿಷ್ಠವಾಗುತ್ತದೆ ಎಂದರು.

ಪಕ್ಷ ಸಂಘಟನೆಗೆ ಬೂತ್ ಮಟ್ಟದ ಕಾರ್ಯಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪಕ್ಷದ ಸಿದ್ಧಾಂತ,ಕೇಂದ್ರ ಸರ್ಕಾರದ ಸಾಧನೆ ಜನರಿಗೆ ತಲುಪಿಸುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸಬೇಕು. ಅಧ್ಯಕ್ಷತೆ ವಹಿಸಿದ್ದ ಮಂಡಲ ಅಧ್ಯಕ್ಷ ಮಾರುತಿ ಗಾವರಾಳ ಮಾತನಾಡಿದರು.

ಈ ಸಂದರ್ಭದಲ್ಲಿ ಬಸಲಿಂಗಪ್ಪ ಭೂತೆ, ಆರ್‌ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಗೌರಾ ಬಸವರಾಜ, ಶಿವಶಂಕರ ದೇಸಾಯಿ, ವೀರಣ್ಣ ಹುಬ್ಬಳ್ಳಿ, ರತನ್ ದೇಸಾಯಿ, ಶಿವಕುಮಾರ ನಾಗಲಾಪುರಮಠ, ಅಯ್ಯನಗೌಡ ಕೆಂಚಮ್ಮನವರ್, ಸಂತೋಷಿಮಾ ಜೋಶಿ, ಶಕುಂತಲಾದೇವಿ ಮಾಲಿಪಾಟೀಲ, ಶರಣಪ್ಪ ಈಳಿಗೇರ್, ಶಿವಪ್ಪ ವಾದಿ, ಅಮರೇಶ ಹುಬ್ಬಳ್ಳಿ, ಪ್ರಕಾಶ ತಹಸೀಲ್ದಾರ ಸೇರಿದಂತೆ ಬೂತ್ ಅಧ್ಯಕ್ಷರು, ಬಿಎಲ್ಎ-೨ ಕಾರ್ಯಕರ್ತರು ಹಾಗೂ ಪಕ್ಷದ ಪದಾಧಿಕಾರಿಗಳು ಇದ್ದರು.