ಕನ್ನಡಪ್ರಭ ವಾರ್ತೆ ಹಿರಿಯೂರು

ಭಾರತೀಯ ಜನತಾ ಪಕ್ಷದ ವತಿಯಿಂದ ಹಿರಿಯೂರು ಮಂಡಲದ ಪಕ್ಷದ ಕಚೇರಿಯಲ್ಲಿ ಸೋಮವಾರ ಬಿಜೆಪಿ ಸಂಸ್ಥಾಪನಾ ದಿನವನ್ನು ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು.

ಈ ವೇಳೆ ಮಂಡಲ ಅಧ್ಯಕ್ಷ ಅಭಿನಂದನ್ ಮಾತನಾಡಿ, ಬಿಜೆಪಿ ಪಕ್ಷವು 1980ರಲ್ಲಿ ಸ್ಥಾಪನೆಯಾಗಿದ್ದು ದೇಶದ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಒಂದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ. ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು ಪ್ರತಿಯೊಬ್ಬ ಕಾರ್ಯಕರ್ತನೂ ಜವಾಬ್ದಾರಿಯುತವಾಗಿ ಕೆಲಸ ಮಾಡಿದರೆ ಪಕ್ಷ ಸದಾ ಬಲಿಷ್ಟವಾಗಿ ಬೆಳೆಯುತ್ತದೆ ಎಂದರು.

ನಮ್ಮ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಹುದ್ದೆಗಳನ್ನು ಅಲಂಕರಿಸುವ ಅವಕಾಶವಿದೆ. ಜೆ.ಪಿ.ನಡ್ಡಾ ರಂತಹ ನಾಯಕರೂ ಕಾರ್ಯಕರ್ತರಿಗೆ ಮಾದರಿಯಾಗಿದ್ದಾರೆ. ಅಲ್ಲದೇ ಸಾಮಾನ್ಯ ಕುಟುಂಬದಿಂದ ಬಂದ ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿರುವುದು ಬಿಜೆಪಿ ಪಕ್ಷದಲ್ಲಿ ವಿಶೇಷತೆಯಾಗಿದೆ. ಮುಂಬರುವ ಎಲ್ಲಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಎಲ್ಲರೂ ಶ್ರಮಿಸಬೇಕು ಎಂದರು.

ನಿಕಟ ಪೂರ್ವ ಮಂಡಲ ಅಧ್ಯಕ್ಷ ವಿಶ್ವನಾಥ್ ಮಾತನಾಡಿ, ಇತ್ತೀಚೆಗೆ ನಡೆದ ಮೂರು ದಿನಗಳ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆದಿದ್ದು ಮಂಡಲ ಅಧ್ಯಕ್ಷರ ಶ್ರಮ ಅಭಿನಂದನಾರ್ಹ ಎಂದು ತಿಳಿಸಿದರು.


ಈ ವೇಳೆ ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ್, ಜಿಲ್ಲಾ ಎಸ್‌.ಟಿ.ಮೋರ್ಚಾ ಅಧ್ಯಕ್ಷ ಜೆ.ಬಿ.ರಾಜಣ್ಣ, ಪ್ರಧಾನ ಕಾರ್ಯದರ್ಶಿಗಳಾದ ನಿತಿನ್ ಗೌಡ, ಯೋಗೇಶ್ ಹಾಗೂ ಮುಖಂಡರಾದ ಪ್ರಜ್ವಲ್, ಕೆ.ಟಿ ಹನುಮಂತ್, ಬಸವರಾಜ್, ಏಕಾಂತ್, ಪ್ರದೀಪ್, ದೇವರಾಜ್, ಹರೀಶ್, ಮಾರಣ್ಣ, ಸಿದ್ದೇಶ್, ಕಣುಮಯ್ಯ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.