ಸಾರಾಂಶ
ವಿಐಎಸ್‍ಎಲ್ ಕಾರ್ಖಾನೆಯನ್ನು ಕೋಮಸ್ಥಿತಿಗೆ ತಂದಿದ್ದು ಅಲ್ಲದೇ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಇನ್ನೂ ಜೀವಂತವಾಗಿರುವುದಕ್ಕೇ ಕಾರಣವೇ ಬಿಜೆಪಿ ಸರ್ಕಾರ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ತಿರುಗೇಟು ನೀಡಿದರು.
ಶಿವಮೊಗ್ಗ: ವಿಐಎಸ್‍ಎಲ್ ಕಾರ್ಖಾನೆಯನ್ನು ಕೋಮಸ್ಥಿತಿಗೆ ತಂದಿದ್ದು ಅಲ್ಲದೇ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಇನ್ನೂ ಜೀವಂತವಾಗಿರುವುದಕ್ಕೇ ಕಾರಣವೇ ಬಿಜೆಪಿ ಸರ್ಕಾರ. ಇದು ಗೊತ್ತಿಲ್ಲದೆ ಶಾಸಕ ಎಸ್.ಎನ್.ಚನ್ನಬಸಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ತಿರುಗೇಟು ನೀಡಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಎಸ್.ಎನ್.ಚನ್ನಬಸಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರು ವಿಐಎಸ್‍ಎಲ್ ಹಾಗೂ ಶರಾವತಿ ಮುಳುಗಡೆ ಸಂತ್ರಸಸ್ತರ ಸಮಸ್ಯೆಗೆ ಸಂಬಂಧಿಸಿದಂತೆ ಯಾವ ವಿವರಗಳು ಇಲ್ಲದೆ, ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ವಿಐಎಸ್‍ಎಲ್‍ನ್ನು ಉಳಿಸುವ ಹಿನ್ನೆಲೆಯಲ್ಲಿ ರಾಜೀವ್‌ಗಾಂಧಿ ಅವರು ಪ್ರಧಾನಮಂತ್ರಿಯಾಗಿದ್ದಾಗ ಅದನ್ನು ಸೈಲ್‍ಗೆ ಹಸ್ತಾಂತರ ಮಾಡಿದ್ದರು. 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಣಿಗೆ ಅವಕಾಶ ಕೊಟ್ಟಿದ್ದರು. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ವಿಐಎಸ್‍ಎಲ್‍ನ್ನು ಜೀವಂತವಾಗಿ ಇಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಿಜೆಪಿಯವರಿಗೆ ವಿಐಎಸ್‌ಎಲ್ ಮೇಲೆ ಅಗಾಧ ಪ್ರೀತಿ ಬರುತ್ತದೆ. ಆಮೇಲೆ ಅದು ಇವರಿಗೆ ಬೇಡದ ಕೂಸಾಗುತ್ತದೆ. ಕಳೆದ 10 ವರ್ಷದ ಆಡಳಿತದಲ್ಲಿ ವಿಐಎಸ್‍ಎಲ್‍ನ್ನು ಕೋಮಸ್ಥಿತಿಗೆ ತಂದವರು ಅವರೇ ಎಂದು ದೂರಿದರು.
ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಸ್ಥಿತಿ ಬಂದರೂ ಏನೂ ಮಾಡದ ಸಂಸದ ಬಿ.ವೈ.ರಾಘವೇಂದ್ರ ಅವರು ಈಗ ವಿಐಎಸ್‌ಎಲ್ ಕಾರ್ಖಾನೆ ಇಂದಿನ ಸ್ಥಿತಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇನ್ನು ಶರಾವತಿ ಮುಳುಗಡೆ ಸಮಸ್ಯೆ ಬಗ್ಗೆ ಮಾತನಾಡಿ ಇದು ಕಾಂಗ್ರೆಸ್‍ನ ಪಾಪದ ಕೂಸು ಎಂದು ಆರೋಪಿಸಿದ್ದಾರೆ. ಆದರೆ , ಈ ಸಮಸ್ಯೆಗೆ ಕೇಂದ್ರ ಸರ್ಕಾರ ಕಾರಣ ಎನ್ನುವುದು ಅವರಿಗೆ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ. ಶರಾವತಿ ಸಂತ್ರಸ್ತರಿಗೆ ಹಕ್ಕು ಪತ್ರ ಕೊಡುವ ಪ್ರಯತ್ನಗಳಾಗಿವೆ. ಈಗಲೂ ಕಾಂಗ್ರೆಸ್ ಸರ್ಕಾರ ಈ ವಿಚಾರವನ್ನು ಇಟ್ಟುಕೊಂಡು ಸುಪ್ರೀಂ ಕೋರ್ಟ್‍ಗೆ ಅರ್ಜಿ ಹಾಕಿದೆ. ಇದು ಗೊತ್ತಿಲ್ಲದೆ ಅವರು ಮಾತನಾಡುತ್ತಾರೆ ಎಂದು ಕುಟುಕಿದರು.
ಆಶ್ರಯ ಬಡಾವಣೆ ಅಭಿವೃದ್ಧಿಯಾಗಲಿಲ್ಲ ಏಕೆ ? :
ಆಶ್ರಯಮನೆ ಕಾಂಗ್ರೆಸ್ ಸರ್ಕಾರದ ಕೊಡುಗೆ. ಇದು ಆಶ್ರಯಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ಬಡಾಯಿ ಕೊಚ್ಚಿಕೊಳ್ಳುತ್ತಿರುವ ಶಾಸಕ ಎಸ್.ಎನ್.ಚನ್ನಬಸಪ್ಪ ಅವರಿಗೆ ಗೊತ್ತಿಲ್ಲ. ಈ ಹಿಂದೆ ಆಶ್ರಯ ಮನೆ ಹಂಚಿಕೆ ಮಾಡಿದ್ದು ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಎಂದು ಹೇಳಿದರು.
ಈ ಹಿಂದೆ ಬಡವರ ಪರ ಮಾತನಾಡುತ್ತಿರುವ ಬಿಜೆಪಿಯವರು ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಯಾಕೆ ಆಶ್ರಯಮನೆಗಳನ್ನು ಅಭಿವೃದ್ಧಿ ಪಡಿಸಲಿಲ್ಲ. ಬಿಜೆಪಿಯ ಅಧಿಕಾರದ ಅವಧಿಯಲ್ಲಿ ಏಕೆ ಹಂಚಲಿಲ್ಲ? ಈಗ ಅಲ್ಲಿ ಯಾವುದೇ ಸೌಲಭ್ಯ ಇಲ್ಲದೇ ಮನೆಗಳನ್ನು ಹಂಚುವುದಾದರು ಹೇಗೆ ? ಕೊನೆ ಪಕ್ಷ ಅಲ್ಲಿ ವಿದ್ಯುತ್ ಕೂಡ ಇಲ್ಲ. ತರಾತುರಿಯಲ್ಲಿ ಹೇಗೆ ಮನೆಗಳನ್ನು ಹೇಗೆ ಹಂಚಬೇಕು ಎಂದು ಪ್ರಶ್ನಿಸಿದರು.
ಇನ್ನು ಸಚಿವ ಮಧು ಬಂಗಾರಪ್ಪ ವಿರುದ್ಧ ಶಾಸಕ ಚನ್ನಬಸಪ್ಪ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಚಿವರ ಬಗ್ಗೆ ಅಗೌರವದ ಮಾತನಾಡುವುದು ಶಾಸಕರಿಗೆ ಶೋಭೆ ತರುವುದಿಲ್ಲ. ಅವರು ಮಾತನಾಡುವ ರೀತಿ ನೋಡಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಆಗುತ್ತದೆ ಎಂದು ಲೇವಡಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಪ್ರಮುಖರಾದ ಜಿ.ಡಿ.ಮಂಜುನಾಥ್, ರಮೇಶ್ ಹೆಗಡೆ, ಎಸ್.ಟಿ.ಹಾಲಪ್ಪ, ಶಿವಣ್ಣ, ಶಿ.ಜು.ಪಾಶ ಇದ್ದರು.