ಸಾರಾಂಶ
ಹಿಂದೂ ಎನ್ನುವ ಪದ ಹಿಂದೂಗಳನ್ನೇ ಒಂದೂಗುಡಿಸಲು ಆಗುತ್ತಿಲ್ಲ
ಗದಗ: ದೇಶದಲ್ಲಿನ ಸಾಮ್ರಾಜ್ಯಶಾಹಿ ಆಡಳಿತ ಹೊಡೆದೊಡಿಸಿ ನಮ್ಮದೇ ಆದ ಸಂವಿಧಾನ ರಚನೆ ಮಾಡಿ ಸಂಸದೀಯ ಪ್ರಜಾಪ್ರಭುತ್ವ ಜಾರಿಗೊಳಿಸಲಾಗಿದೆ. ಭಾರತ ಸಾರ್ವಭೌಮ, ಸರ್ವ ಸ್ವಾತಂತ್ರ್ಯ ರಾಷ್ಟ್ರ ಅಂತ ಘೋಷಣೆ ಮಾಡಲಾಯಿತು. ಆದರೆ, ಹಿಂದುತ್ವದ ಹೆಸರಿನಲ್ಲಿ ಕೆಲವು ಶಕ್ತಿಗಳು ದೇಶವನ್ನು ಪ್ರಾಚೀನ ಕಾಲಕ್ಕೆ ನೂಕುವ ಪ್ರಯತ್ನ ಮಾಡುತ್ತಿವೆ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಆರೋಪಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಪ್ರಯಾಗರಾಜ್ ಮಹಾಕುಂಭಮೇಳದಲ್ಲಿ ಹಿಂದೂ ರಾಷ್ಟ್ರಕ್ಕೆ,ಹಿಂದೂ ಸಂವಿಧಾನ ಜಾರಿಗೊಳಿಸಲು ಕುತಂತ್ರ ನಡೆಯುತ್ತಿದೆ.ಹಾಗಾದರೆ ಈಗಿರುವ ಸಂವಿಧಾನ ವಿರೋಧ ಮಾಡುವುದು ಏಕೆ? ಹಿಂದೂ ಎನ್ನುವ ಪದ ಹಿಂದೂಗಳನ್ನೇ ಒಂದೂಗುಡಿಸಲು ಆಗುತ್ತಿಲ್ಲ. ಹಿಂದೂಯೇತರ ಎಲ್ಲ ಧರ್ಮಗಳು ತನ್ನ ಧರ್ಮದಲ್ಲಿ ಎಲ್ಲರನ್ನು ಸಮಾನವಾಗಿ ಕಾಣುತ್ತವೆ. ಆದರೆ, ಹಿಂದೂತ್ವದಲ್ಲಿ ಬ್ರಾಹ್ಮಣ ಶಾಹಿ ಹಿಡಿತದಲ್ಲಿ ಎಲ್ಲ ವರ್ಗದವರನ್ನು ಕೀಳಾಗಿ ಕಾಣುತ್ತದೆ. ಬ್ರಾಹ್ಮಣತ್ವದ ಅಧಿಪತ್ಯ ಸಾಧಿಸಲು ಹಿಂದೂ ಸಂವಿಧಾನ ಜಾರಿಗೊಳಿಸಲು ಹೊರಟಿದೆ. ಹೊಸ ಸಂವಿಧಾನ ರಚಿಸುವುದು ಸುಲಭವಲ್ಲ. ಭಾರತದ ಸಂವಿಧಾನ ರಚಿಸಲು 290 ಸದಸ್ಯರು ವರ್ಷಾನುಗಟ್ಟಲೇ ಚರ್ಚೆ ಮಾಡಿ ಸಂವಿಧಾನ ರಚಿಸಿದ್ದಾರೆ. ಹಿಂದೂ ಸಂವಿಧಾನದಲ್ಲಿ ಸಂಸದರಾಗಲು ವೇದಗಳ ಅಧ್ಯಯನ ಮಾಡಬೇಕಾಗುತ್ತದೆ. ದೇಶದ ಶೇ. 90%ಮತದಾರರು ಚುನಾವಣೆಗೆ ಸ್ಪರ್ಧಿಸಲು ಅರ್ಹರಲ್ಲ. ಸಾಕಷ್ಟು ಹೋರಾಟದ ನಂತರ ಸ್ವಾತಂತ್ರ್ಯ ಬಂದಿದೆ. ಆದರೆ, ಆ ಸ್ವಾತಂತ್ರ್ಯ ಮತ್ತೆ ಕಸಿದುಕೊಳ್ಳುವ ಹುನ್ನಾರ ನಡೆಯುತ್ತದೆ ಎಂದು ಹೇಳಿದರು.ಮೊದಲ ಬಾರಿ ನರೇಂದ್ರ ಮೋದಿ ಪ್ರಧಾನಿಯಾದಾಗ ಸಂಸತ್ತಿನ ಮೆಟ್ಟಿಲುಗಳಿಗೆ ಹಾಗೂ ಸಂವಿಧಾನಕ್ಕೆ ನಮಸ್ಕರಿಸಿದ್ದರು. ಆದರೆ, ಅವರ ಕೆಲ ಬೆಂಬಲಿಗರು ಹಾಗೂ ಹಿಂದೂ ಶಕ್ತಿಗಳು ಹಿಂದೂ ಸಂವಿಧಾನ ರಚನೆ ಮಾಡಲು ಹೊರಟಿದ್ದಾರೆ. ಈ ಬಗ್ಗೆ ನರೇಂದ್ರ ಮೋದಿ ಒಂದೆ ಒಂದೇ ಮಾತನಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶರೀಪ ಬಿಳೆಯಲಿ, ಶೇಖಣ್ಣ ಕವಳಿಕಾಯಿ, ಬಾಲರಾಜ ಅರಬರ, ಬಸವರಾಜ ಪೂಜಾರ, ಆನಂದ ಶಿಂಗಾಡಿ, ನಾಗರಾಜ ಗೋಕಾವಿ, ಶಿವಾನಂದ ತಮ್ಮಣ್ಣನವರ, ಪರಸುರಾಮ ಕಾಳೆ ಉಪಸ್ಥಿತರಿದ್ದರು.