ಸಾರಾಂಶ
ಶಾಸಕ ಚನ್ನಬಸಪ್ಪನವರೇ, ಸಿದ್ದರಾಮಯ್ಯ ಅವರನ್ನು ಸಿದ್ರಮುಲ್ಲಾ ಖಾನ್ ಎಂದು ಜರಿದ ನಾಲಿಗೆ ಯಾರದ್ದು ? ಸಿದ್ದರಾಮಯ್ಯನವರ ತಲೆ ಕಡಿತಿವಿ ಎನ್ನುವ ಕ್ರೌರ್ಯದ ಪರಾಕಾಷ್ಟೆಯ ಮಾತುಗಳನ್ನಾಡಿದ ನಾಲಿಗೆ ಯಾರದ್ದು ? ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಪ್ರಶ್ನಿಸಿದರು.
ಶಿವಮೊಗ್ಗ: ನಾಲಿಗೆ ಮೇಲೆ ಹಿಡಿತವಿರಬೇಕು ಎನ್ನುವ ಶಾಸಕ ಚನ್ನಬಸಪ್ಪನವರೇ, ಸಿದ್ದರಾಮಯ್ಯ ಅವರನ್ನು ಸಿದ್ರಮುಲ್ಲಾ ಖಾನ್ ಎಂದು ಜರಿದ ನಾಲಿಗೆ ಯಾರದ್ದು ? ಸಿದ್ದರಾಮಯ್ಯನವರ ತಲೆ ಕಡಿತಿವಿ ಎನ್ನುವ ಕ್ರೌರ್ಯದ ಪರಾಕಾಷ್ಟೆಯ ಮಾತುಗಳನ್ನಾಡಿದ ನಾಲಿಗೆ ಯಾರದ್ದು ? ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಪ್ರಶ್ನಿಸಿದರು.
ಬುಧವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ನಾಲಿಗೆ ಮೇಲೆ ಹಿಡಿತವಿರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಎಚ್ಚರಿಕೆ ಕೊಡುವಷ್ಟು ಶಾಸಕ ಚನ್ನಬಸಪ್ಪ ಅವರು ನಾಗರಿಕರಾಗಿರುವುದು ತಮಗೆ ಸಂತೋಷ ತಂದಿದೆ, ಶಿಷ್ಟಚಾರ ಉಲ್ಲಂಘನೆ ಆಗುತ್ತಿದೆ ಎಂದು ಅವರು ಅಲವತ್ತುಕೊಳ್ಳುತ್ತಿರುವುದು ಖುಷಿ ಕೊಟ್ಟಿದೆ ಎಂದು ವ್ಯಂಗ್ಯವಾಡಿದರು.
ಶಾಸಕ ಚನ್ನಬಸಪ್ಪ ಅವರು, ಸಚಿವರ ವಿರುದ್ಧ ಮಾತನಾಡುತ್ತಾ ನಾಲಿಗೆ ಮೇಲೆ ಹಿಡಿತವಿರಲಿ, ಅಧಿಕಾರದ ಪಿತ್ತ ನೆತ್ತಿಗೇರಿದೆ ಎಂದೆಲ್ಲ ಹೇಳುತ್ತಿರುವುದು ವಿಚಿತ್ರವಾಗಿದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂಬುದಾಗಿ ಅವಮಾನಿಸಿದ್ದಲ್ಲದೆ, ತಲೆ ಕಡಿಯಿರಿ, ಚಂಡರುಂಡಾಡುವೇ, ಮುಗಿಸಿಬಿಡಿ ಎಂದು ಕ್ರೌರ್ಯದ ಪರಾಕಾಷ್ಠೆಯ ಮಾತುಗಳನ್ನು ಹೇಳಿದವರು ತಾವಲ್ಲವೇ ಎಂದು ತಿರುಗೇಟು ನೀಡಿದರು.
ಸಚಿವರಿಗೆ ಅಧಿಕಾರದ ಪಿತ್ತ ನೆತ್ತಿಗೇರಿದೆ, ಅಧಿಕಾರದ ಉದ್ದಟತನ ತೊರುತ್ತಿದ್ದಾರೆಂದು ದೂರುವ ನೀವೇ, ಯಾವ ಬ್ರಹ್ಮ ಬಂದರೂ ಬಡವರಿಗೆ ಮನೆ ಹಂಚುವುದನ್ನು ತಡೆಯೋದಿಕ್ಕೆ ಆಗೋದಿಲ್ಲ ಎಂದು ಹೇಳುವ ನಿಮ್ಮ ಮಾತುಗಳಲ್ಲಿಯೇ ಅದ್ಯಾವ ಪರಿಯ ಅಹಂಕಾರ ಇದೆ ಎಂದು ಯೋಚಿಸಿದ್ದೀರಾ ? ಬ್ರಹ್ಮನಿಗೇ ಸವಾಲು ಹಾಕುವ ನಿಮ್ಮ ಅಹಂಕಾರಿಕೆ ಅದ್ಯಾವ ಮಟ್ಟದ್ದು ಎಂದು ಹೇಳಬಹುದೇ ? ಒಬ್ಬ ಶಾಸಕನಾಗಿಯೇ ನಿಮಗೆ ಈ ಪರಿಯ ಅಹಂ ಇದೇಯಲ್ಲವೇ ಎಂದು ಹರಿಹಾಯ್ದರು
.ಶಿಷ್ಟಚಾರದ ಉಲ್ಲಂಘನೆಯ ಬಗ್ಗೆ ಮಾತನಾಡುತ್ತಿದ್ದೀರಿ, ನೀವು ಎಷ್ಟರ ಮಟ್ಟಿಗೆ ಶಿಷ್ಟಚಾರಗಳನ್ನು ಪಾಲಿಸುತ್ತಿದ್ದೀರಿ ? ಆಶ್ರಯ ಮನೆಗಳ ವಿಚಾರದಲ್ಲಿ ಗ್ರಾಮಾಂತರ ಶಾಸಕರು ಇದ್ದಾರೆ. ಅವರನ್ನು ಯಾವುದಾದರೂ ಸಭೆಗೆ ಕರೆದು ಮಾತನಾಡಿದ್ದೀರಾ ? ಹೋಗಲಿ, ನಿಮ್ಮದೇ ಪಕ್ಷದ ಪರಿಷತ್ ಸದಸ್ಯರನ್ನು ಸಭೆಗೆ ಕರೆಯುವ ಸೌಜನ್ಯ ಇಟ್ಟುಕೊಂಡಿದ್ದೀರಾ? ಈ ಹಿಂದೆ ನೀವು ಕೆ.ಎಸ್.ಈಶ್ವರಪ್ಪ ಅವರು ಮಂತ್ರಿಯಾಗಿದ್ದಾಗ, ಅವರ ಎಡ- ಬಲದಲ್ಲಿಯೇ ಇದ್ದು ಪಕ್ಷದ ಯಾವ ಶಾಸಕರನ್ನು, ಯಾವ ಕಾರ್ಯಕ್ರಮಕ್ಕೆ ಕರೆದಿದ್ದೀರಿ ? ಉಳಿದವರನ್ನು ದೂರವಿಟ್ಟು ಮಂತ್ರಿ ಮಗನನ್ನು ಹೆಗಲ ಮೇಲೆ ಹೊತ್ತು ಮೆರೆಯುವಾಗ ನಿಮಗೆ ಶಿಷ್ಟಚಾರದ ಪಾಲನೆ ಗೊತ್ತಿರಲಿಲ್ಲವೇ ? ಮಾಡಿದ್ದುಣೋ ಮಾರಾಯನ ಹಾಗೆ ನೀವು ಮಾಡಿದ್ದನ್ನೇ ಈಗ ನೀವು ಉಣ್ಣುತ್ತಿದ್ದೀರಿ ಎಂದು ಕುಟುಕಿದರು.ಆಶ್ರಯ ಮನೆ ಹಂಚಿಕೆಗೆ ತರಾತುರಿ ಮಾಡುವ ನಿಮ್ಮ ಕಾಳಜಿಯನ್ನು ಸ್ಮಾರ್ಟ್ ಸಿಟಿ ಅವ್ಯವಹಾರದ ಕಡೆ ತೋರಿಸಿ, ನಿಮಗೆ ಧೈರ್ಯವಿದ್ದರೆ ಸ್ಮಾರ್ಟ್ ಸಿಟಿ ಕಾಮಗಾರಿಗಳ ಅವ್ಯವಾಹಾರದ ಬಗ್ಗೆ ಮಾತನಾಡಿ , ಅವ್ಯವಹಾರದ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸವಾಲು ಹಾಕಿದರು.
ಯಾವಾಗಲೂ ಗೌರವ ಕೊಟ್ಟು ಗೌರವ ತೆಗೆದುಕೊಳ್ಳುವುದನ್ನು ಕಲಿಯಬೇಕಾಗುತ್ತದೆ. ಮೊದಲು ನೀವು ನೆಟ್ಟಗಿರಿ ಆಮೇಲೆ ಎಲ್ಲವೂ ಸರಿಯಾಗುತ್ತದೆ. ಆವೇಶ ಬೇಡ, ಆವೇಶದಲ್ಲಿ ಅಗೌರವ ಪಡೆದುಕೊಳ್ಳಬೇಡಿ, ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವಷ್ಟು ನೀವು ದೊಡ್ಡವರಲ್ಲ. ನಿಮ್ಮ ವರಿಷ್ಠರು ಮಾತನಾಡುತ್ತಾರೆ. ಎಲ್ಲರೂ ಒಟ್ಟಾಗಿ ಹೋದರೆ ಅಭಿವೃದ್ಧಿ ಸಾಧ್ಯ ಎಂದರು.
ಸಚಿವರಿಗೆ ಕೈ ಕೊಡದೆ ಸತಾಯಿಸಿದ್ದು ಉದ್ದಟತನವಲ್ಲವೇ
ಶಿವಮೊಗ್ಗ: ಅಲ್ಲಮಪ್ರಭು ಮೈದಾನದ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ ವೇಳೆ ಸಚಿವರು, ಗೌರವದಿಂದ ಕೈ ಕುಲುಕಲು ಕೈ ಚಾಚಿದರೆ, ನೀವು ಕೈ ಕೊಡದೆ ಸತಾಯಿಸಿದ್ದು ಉದ್ದಟತನವಲ್ಲವೇ ? ಎಂದು ಆಯನೂರು ಮಂಜುನಾಥ್ ಪ್ರಶ್ನಿಸಿದರು.
ಸಚಿವರು ನಿಮಗೆ ಕೈ ಕುಲುಕಲು ಕೈ ಚಾಚಿಸಿದ್ದು ನೀವು ಚನ್ನಬಸಪ್ಪ ಎನ್ನುವ ಕಾರಣಕ್ಕೆ ಅಲ್ಲ, ಒಬ್ಬ ಶಾಸಕರಿಗೆ ಗೌರವ ಕೊಡುವ ಉದ್ದೇಶಕ್ಕೆ ಮಾತ್ರ. ಆದರೆ, ನೀವು ಅದರ ಅರಿವಿಲ್ಲದೆ, ಕೈ ಕೊಡಲು ನಿರಾಕರಿಸಿ ಸತಾಯಿಸಿದ್ದು, ನಿಮ್ಮ ಅಹಂಕಾರಿಕೆ ಅಲ್ಲವೇ ? ಮೊದಲ ಸಲ ಶಾಸಕರಾಗಿದ್ದೀರಿ, ಸಚಿವರಿಗೆ ಗೌರವ ಕೊಡುವುದನ್ನು ಕಲಿಯಿರಿ, ಅವರಿಗಲ್ಲದಿದ್ದರೂ ಅವರ ಸ್ಥಾನಕ್ಕೆ ಗೌರವ ಕೊಟ್ಟು ನಾಗರಿಕರಾಗಿ ಮಾತನಾಡಿ ಎಂದು ಕಿವಿ ಮಾತು ಹೇಳಿದರು.