ಸಾರಾಂಶ
ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು (ಪಪೂ) ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಹೊಸ ಮಾದರಿಯ ಪ್ರಶ್ನೆ ಪತ್ರಿಕೆಯ ಸ್ವರೂಪ, ನೀಲನಕ್ಷೆ ಮತ್ತು ವಿಷಯಾಧಾರಿತ ತರಬೇತಿ
ಗದಗ: ಮೇಣದ ಬತ್ತಿ ತಾನು ಹತ್ತಿ ಉರಿದಾಗ ಇನ್ನೊಂದು ದೀಪ ಬೆಳಗಿಸುವುದಕ್ಕೆ ಸಾಧ್ಯ. ದೀಪದಿಂದ ದೀಪ ಬೆಳಗಿಸಿ ಬೆಳಕನ್ನು ನೀಡುವಂತೆ ಅಧ್ಯಾಪಕರಾದವರು ತಮ್ಮ ಜ್ಞಾನ ವಿಸ್ತರಿಸಿಕೊಂಡು ಮಕ್ಕಳಿಗೆ ಹಂಚಿದಾಗ ಅವರ ಜ್ಞಾನದ ಬೆಳಕು ಹೆಚ್ಚು ವಿಸ್ತರಿಸುತ್ತದೆ ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ನಗರದ ಎಚ್.ಸಿ. ಇಎಸ್ ಪಪೂ ಕಾಲೇಜಿನಲ್ಲಿ ನಡೆದ 2024-25ನೇ ಸಾಲಿನ ಸರ್ಕಾರಿ ಪಪೂ ಕಾಲೇಜುಗಳ ಬೆಳಗಾವಿ, ಚಿಕ್ಕೋಡಿ, ಹಾವೇರಿ, ಧಾರವಾಡ, ಗದಗ ಜಿಲ್ಲೆಗಳ ಕನ್ನಡ ಮತ್ತು ಸಮಾಜಶಾಸ್ತ್ರ ವಿಷಯದ ಉಪನ್ಯಾಸಕರ ಪುನಶ್ಚೇತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು (ಪಪೂ) ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಹೊಸ ಮಾದರಿಯ ಪ್ರಶ್ನೆ ಪತ್ರಿಕೆಯ ಸ್ವರೂಪ, ನೀಲನಕ್ಷೆ ಮತ್ತು ವಿಷಯಾಧಾರಿತ ತರಬೇತಿ ಹಮ್ಮಿಕೊಂಡಿದ್ದು, ಎರಡೂ ವಿಷಯಗಳ ಉಪನ್ಯಾಸಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಜಿಲ್ಲಾ ಉಪನಿರ್ದೇಶಕ ಸಿದ್ದಲಿಂಗ ಬಂಡು ಮಸನಾಯಕ ಮಾತನಾಡಿ, ಎರಡು ದಿನಗಳ ಈ ಶಿಬಿರದ ಲಾಭ ಪಡೆದುಕೊಂಡು ಇಲಾಖೆಯ ಈ ಯೋಜನೆಯ ಉದ್ದೇಶ ಸಾರ್ಥಕಗೊಳಿಸಬೇಕೆಂದು ಹೇಳಿದರು.ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವಿ ಮೂಲಿಮನಿ ಮಾತನಾಡಿ, ಎಲ್ಲ ವೃತ್ತಿಗಳಲ್ಲಿ ಶ್ರೇಷ್ಠ ವೃತ್ತಿ ಶಿಕ್ಷಕ ವೃತ್ತಿಯಾಗಿದೆ. ಇಂತಹ ಪುನಶ್ಚೇತನ ಶಿಬಿರದ ಮೂಲಕ ಹೊಸ ಆಲೋಚನೆ, ಹೊಸ ದೃಷ್ಟಿಕೋನದಿಂದ ಮಕ್ಕಳಿಗೆ ಪಾಠ ಮಾಡಿ ಸುಭದ್ರ ಸಮಾಜ ನಿರ್ಮಿಸಬೇಕೆಂದರು.
ಈ ವೇಳೆ ಜಿಲ್ಲಾ ಸಂಚಾಲಕ ಪ್ರಾ. ಎಂ.ಸಿ. ಕಟ್ಟಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಜಿ.ಎನ್. ಕುರ್ತಕೋಟಿ, ಪ್ರಾ. ಅಶೋಕ ಅಂಗಡಿ, ಪ್ರಾ. ಬಿ.ಜಿ.ಗಿರಿತಿಮ್ಮಣ್ಣವರ, ಡಾ. ಅರ್ಜುನ ಗೊಳಸಂಗಿ, ಪ್ರಾ. ಐ.ಸಿ. ಹಾದಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಎಚ್.ಎಂ.ದೊಡ್ಡಮನಿ ಪ್ರಾರ್ಥಿಸಿದರು. ಎಸ್.ಪಿ. ಗುಳಗಣ್ಣವರ ಸ್ವಾಗತಿಸಿದರು. ಪ್ರಾ. ಬಿ.ಬಿ.ಪಾಟೀಲ ವಂದಿಸಿದರು.