‘ಧಾರವಾಡದಲ್ಲಿ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ.  ಹೆಚ್ಚಿನ ಹುದ್ದೆ  ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳುತ್ತಿದ್ದೇವೆ. ಆತ್ಮವಿಶ್ವಾಸ ಮತ್ತು ತಾಳ್ಮೆಯಿಂದ ನಿಮ್ಮ ಶಿಕ್ಷಣ, ಕೌಶಲ್ಯ ವೃದ್ಧಿ ಮತ್ತು ಸಿದ್ಧತೆಯ ಮೇಲೆ ಗಮನ ಕೇಂದ್ರೀಕರಿಸಿ’  

ಬೆಂಗಳೂರು : ‘ಧಾರವಾಡದಲ್ಲಿ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಮುಂದಿನ ವರ್ಷಗಳಲ್ಲಿ ಹೆಚ್ಚಿನ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳುತ್ತಿದ್ದೇವೆ. ಆತ್ಮವಿಶ್ವಾಸ ಮತ್ತು ತಾಳ್ಮೆಯಿಂದ ನಿಮ್ಮ ಶಿಕ್ಷಣ, ಕೌಶಲ್ಯ ವೃದ್ಧಿ ಮತ್ತು ಸಿದ್ಧತೆಯ ಮೇಲೆ ಗಮನ ಕೇಂದ್ರೀಕರಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಕರೆ ನೀಡಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರಸ್ತುತ ಉಂಟಾಗಿರುವ ಪರಿಸ್ಥಿತಿಗೆ 2019 ಹಾಗೂ 2023ರ ನಡುವೆ ನಡೆದ ನೇಮಕಾತಿ ಅಕ್ರಮ ಮತ್ತು ಭ್ರಷ್ಟಾಚಾರ, ಹಗರಣಗಳ ಸರಣಿ ಕಾರಣ. ನಾವು ಅಧಿಕಾರಕ್ಕೆ ಬಂದಾಗಲೇ 2.64 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆ ಖಾಲಿ ಇದ್ದವು. ಇದು ಹಿಂದಿನ ಬಿಜೆಪಿ ಸರ್ಕಾರದ ನಿಷ್ಕ್ರಿಯತೆಯ ಫಲ. ಈಗಲೂ ತಮ್ಮ ಸಂಕುಚಿತ ರಾಜಕೀಯ ಹಿತಾಸಕ್ತಿಗಾಗಿ ಮುಗ್ಧ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಪ್ರಯತ್ನವನ್ನು ಬಿಜೆಪಿಗರು ಮಾಡುತ್ತಿದ್ದಾರೆ. ಬಿಜೆಪಿಯವರು ಯುವಕರು, ಉದ್ಯೋಗ ಆಕಾಂಕ್ಷಿಗಳನ್ನು ಪರೀಕ್ಷೆ ಸಿದ್ಧತೆ ಹಾಗೂ ಭವಿಷ್ಯದತ್ತ ಗಮನ ಹರಿಸದಂತೆ ಮಾಡಿ ಅಶಾಂತಿ ಮೂಡಿಸಲು ಯತ್ನಿಸುತ್ತಿದ್ದಾರೆ. ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಹೇಳಿದ್ದಾರೆ.

40 ಸಾವಿರ ಹುದ್ದೆ ನೇಮಕಾತಿ:

ನೇಮಕಾತಿ ಅಕ್ರಮ, ಭ್ರಷ್ಟಾಚಾರ ತಡೆದು ಪಾರದರ್ಶಕತೆ ತರಲು ಪ್ರಯತ್ನಿಸಿದ್ದೇವೆ. ಅದೇ ಸಮಯದಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದ ಕಾನೂನು ಸವಾಲುಗಳು ಎದುರಾಗಿದ್ದರಿಂದ ನೇಮಕಾತಿ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕಾಯಿತು. ಇಂತಹ ರಚನಾತ್ಮಕ ಮತ್ತು ಕಾನೂನುಬದ್ಧ ಅಡೆತಡೆಗಳ ನಡುವೆಯೂ ಕಳೆದ 2.5 ವರ್ಷಗಳಲ್ಲಿ ವಿವಿಧ ಇಲಾಖೆಗಳಲ್ಲಿ 40,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಗಳನ್ನು ಪೂರ್ಣಗೊಳಿಸಲಾಗಿದೆ. ವರ್ಷಗಳಿಂದ ಕಾಯುತ್ತಿರುವ ಆಕಾಂಕ್ಷಿಗಳ ಆತಂಕ ಮನಗಂಡು, ಮುಂಬರುವ ನೇಮಕಾತಿಗಳಿಗಾಗಿ ಸರ್ಕಾರವು ವಯೋಮಿತಿಯನ್ನು 5 ವರ್ಷಗಳವರೆಗೆ ಸಡಿಲಿಸಿದೆ. ಉದ್ಯೋಗಾಕಾಂಕ್ಷಿಗಳ ಆತಂಕ, ಹತಾಶೆ ಮತ್ತು ಅನಿಶ್ಚಿತತೆಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಪ್ರತಿಯೊಂದು ಅರ್ಜಿಯ ಹಿಂದೆ ಒಂದು ಕನಸು, ಒಂದು ಕುಟುಂಬದ ಭರವಸೆ, ವರ್ಷಗಳ ಪರಿಶ್ರಮ ಮತ್ತು ಕರ್ನಾಟಕದ ಸೇವೆ ಮಾಡುವ ಹಂಬಲವಿರುತ್ತದೆ. ನಿಮ್ಮ ಕನಸನ್ನು ನಾವು ರಕ್ಷಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಕಾಲಮಿತಿಯಲ್ಲಿ ನೇಮಕ:

ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯು ನಡೆಯುತ್ತಿದೆ. ಇದನ್ನು ಪಾರದರ್ಶಕ, ವ್ಯವಸ್ಥಿತ ಹಾಗೂ ಕಾಲಮಿತಿಯಲ್ಲಿ ಇನ್ನಷ್ಟು ವೇಗವಾಗಿ ನೇಮಕಾತಿ ನಡೆಸುತ್ತೇವೆ. ​ಇದು ಕೇವಲ ಹುದ್ದೆಗಳನ್ನು ಭರ್ತಿ ಮಾಡುವ ವಿಷಯವಲ್ಲ. ನೇಮಕಾತಿಯಲ್ಲಿ ನ್ಯಾಯವನ್ನು ಮರುಸ್ಥಾಪಿಸುವ ಮತ್ತು ಎಲ್ಲಾ ಪ್ರದೇಶ ಹಾಗೂ ಸಮುದಾಯಗಳ ಪ್ರತಿಯೊಬ್ಬ ಅರ್ಹ ಅಭ್ಯರ್ಥಿಗೂ ಸಮಾನ ಅವಕಾಶ ಸಿಗುವಂತೆ ಮಾಡುವ ಸಂಕಲ್ಪ. ಕರ್ನಾಟಕದ ಯುವಜನತೆಯೇ ನಮ್ಮ ಭವಿಷ್ಯದ ಶಿಲ್ಪಿಗಳು. ನಮ್ಮ ಸರ್ಕಾರ ಕೇವಲ ಮಾತಿನಲ್ಲಿ ಮಾತ್ರವಲ್ಲ, ಕೃತಿಯಲ್ಲಿಯೂ ನಿಮ್ಮೊಂದಿಗೆ ದೃಢವಾಗಿ ನಿಲ್ಲುತ್ತದೆ. ನಿಮ್ಮ ಕನಸುಗಳನ್ನು ರಕ್ಷಿಸುತ್ತೇವೆ ಎಂದು ಹೇಳಿದ್ದಾರೆ. 

ಯುವಕರ ಜೀವನದ ಜತೆ ಸರ್ಕಾರ ಚೆಲ್ಲಾಟ; ಬಿವೈವಿ:

ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಇವತ್ತು ಯುವಜನತೆಯ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಮೀಸಲಾತಿ ಗೊಂದಲ ಬಳಸಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಜನತೆ ಕಳೆದ ಎರಡೂವರೆ ವರ್ಷದಿಂದ ಕಣ್ಣೀರು ಹಾಕುತ್ತಿದ್ದಾರೆ. ಪ್ರತಿಭಟನೆ- ಹೋರಾಟ ಮಾಡುತ್ತಿದ್ದಾರೆ. 

ಇದ್ಯಾವುದನ್ನೂ ಲೆಕ್ಕಿಸದೇ ಬೆಳಗಾವಿಯ ಅಧಿವೇಶನದ ಸಂದರ್ಭದಲ್ಲೂ ಇದೇ ವಿದ್ಯಾರ್ಥಿಗಳ ಒಕ್ಕೂಟ ಪ್ರತಿಭಟನೆ ಮಾಡಿದರೆ ಲಾಠಿ ಚಾರ್ಜ್ ಮಾಡಿದ್ದರು. ಆಗಲೂ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ ಎಂದು ದೂರಿದರು. 

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕುರ್ಚಿ ಕಾಳಗದಲ್ಲಿ ಬ್ಯುಸಿ ಆಗಿದ್ದಾರೆ. ಒಬ್ಬರು ಕುರ್ಚಿ ಉಳಿಸಿಕೊಳ್ಳಲು, ಇನ್ನೊಬ್ಬರು ಕುರ್ಚಿ ಕಸಿದುಕೊಳ್ಳಲು ಮುಂದಾಗಿದ್ದಾರೆಯೇ ವಿನಾ ಈ ಯುವಜನತೆಯ ಸಮಸ್ಯೆ ಆಲಿಸಲು ಇವರಿಗೆ ಸಮಯ ಸಿಗುತ್ತಿಲ್ಲ. ವಿದ್ಯಾರ್ಥಿಗಳ ಒಕ್ಕೂಟದವರು ನನ್ನನ್ನು ಭೇಟಿ ಮಾಡಿದ್ದರು. 2.85 ಲಕ್ಷ ಹುದ್ದೆಗಳು ಇವತ್ತಿಗೂ ಖಾಲಿ ಬಿದ್ದಿವೆ. ಕಾಂಗ್ರೆಸ್ ಸರ್ಕಾರಕ್ಕೆ ಅವುಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಆಗುತ್ತಿಲ್ಲ ಎಂದು ಟೀಕಿಸಿದರು.ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಒಂದೇ ಒಂದು ಹುದ್ದೆಯನ್ನೂ ಭರ್ತಿ ಮಾಡಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರು ರಾಜ್ಯದುದ್ದಕ್ಕೂ ಭಾಷಣ ಬಿಗಿಯುತ್ತಿದ್ದಾರೆ. ಆದರೆ, ನಾಡಿನ ಯುವಜನತೆಗೆ ನ್ಯಾಯ ನೀಡಲು ಸಾಧ್ಯವಾಗಿಲ್ಲ ಎಂದು ಆಕ್ಷೇಪಿಸಿದರು.

 ಮೀಸಲಾತಿ ಗೊಂದಲ ಬಳಸಿಕೊಂಡು ರಾಜ್ಯ ಹೈಕೋರ್ಟ್‌ನಲ್ಲಿ ಸರಿಯಾಗಿ ವಾದ ಮಂಡಿಸದೆ ಕಾಲಹರಣ ಮಾಡಿಕೊಂಡು ಕಾಂಗ್ರೆಸ್ ಸರ್ಕಾರ ಕುಳಿತಿದೆ. ಯುವಜನತೆಯ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಮಾಡುವ ಇಚ್ಛಾಶಕ್ತಿ ಈ ಸರ್ಕಾರದಿಂದ ಕಾಣುತ್ತಿಲ್ಲ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.ನೇಮಕಾತಿ ಪ್ರಕ್ರಿಯೆ ಪ್ರಾರಂಭ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳುತ್ತಾರೆ. ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾಗುತ್ತಿದೆ. ಇಷ್ಟು ಸಮಯ ಮಾಡದವರು ಇನ್ನು ಮಾಡುತ್ತಾರಾ? ಇನ್ನೂ ಎಷ್ಟು ದಿನ ಯುವಜನರ ತಾಳ್ಮೆ ಪರೀಕ್ಷೆ ಮಾಡುತ್ತೀರಿ? ಅವರ ಕಣ್ಣೀರು ಸರಕಾರಕ್ಕೆ ಕಾಣುತ್ತಿಲ್ಲವೇ? ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಕೂಡಲೇ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.