ಸಾರಾಂಶ
ಶಿರಸಿ: ಮುಡಾ ಪ್ರಕರಣದ ನೆಪದಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಳಿಸಲು ಅವರ ಪಕ್ಷದವರೇ ಪ್ರಯತ್ನಿಸುತ್ತಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಟಾಂಗ್ ನೀಡಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯೇಂದ್ರ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಂಡು ತಮ್ಮ ಹಗರಣಗಳನ್ನು ಸಾರ್ವಜನಿಕರಿಗೆ ತಿಳಿಸಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಲು ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಪ್ರತಾಪ ಸಿಂಹ್ ನೇತೃತ್ವದಲ್ಲಿ ತಯಾರಿ ನಡೆಸುತ್ತಿದ್ದಾರೆ. ಯಡಿಯೂರಪ್ಪ ಹಾಗೂ ಅವರ ಮಕ್ಕಳ ವಿರುದ್ಧ ಹರಿಹಾಯುತ್ತಿದ್ದ ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಅವರಿಗೆ ಚನ್ನಪಟ್ಟಣ ಟಿಕೆಟ್ ಪಡೆಯಲು ಯಡಿಯೂರಪ್ಪ ಕಾಲಿಗೆ ಬಿದ್ದಿದ್ದಾರೆ. ಈಗ ತತ್ವ, ಸಿದ್ಧಾಂತ ಎಲ್ಲಿ ಹೋದವು ಎಂದು ಪ್ರಶ್ನಿಸಿದರು.
ಬಿಜೆಪಿಯವರು ಬಕಾಸುರರಾಗಿದ್ದು, ಮುಂದಿನ ದಿನಗಳಲ್ಲಿ ಜೆಡಿಎಸ್ ನುಂಗಿ ಹಾಕುತ್ತಾರೆ ಎಂದ ಅವರು, ಸಿ.ಪಿ. ಯೋಗೇಶ್ವರ ಕಾಂಗ್ರೆಸ್ ಸೇರುತ್ತಾರೆ ಎಂಬುದು ಮೊದಲು ಗೊತ್ತಿತ್ತು. ಉಪ ಚುನಾವಣೆಯಲ್ಲಿ ಚನ್ನಪಟ್ಟಣ ಹೊರತುಪಡಿಸಿ, ಉಳಿದ ೨ ಕಡೆಗಳಲ್ಲಿ ಉತ್ತಮ ವಾತಾವರಣವಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಹಾಗೂ ಉಳಿದ ಸಚಿವರ ಪ್ರಯತ್ನದಲ್ಲಿ ಚನ್ನಪಟ್ಟಣವನ್ನು ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮಸ್ಯೆ ನಿವಾರಣೆಗೆ ಪ್ರಯತ್ನ: ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡದ ಬಗರ್ ಹುಕ್ಕುಂ ಹಾಗೂ ಅರಣ್ಯ ಅತಿಕ್ರಮಣದಾರರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ವಿರೋಧ ವ್ಯಕ್ತಪಡಿಸಿ, ನಮ್ಮ ನಿಲುವನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಬಗರ್‌ಹುಕುಂ ಸಾಗುವಳಿ ರೈತರಿಗೆ ನೋಟಿಸ್ ಬರುತ್ತಿದೆ. ಕೆಲವರು ಕಾನೂನನ್ನು ಸ್ವಾರ್ಥಕ್ಕಾಗಿ ಉಪಯೋಗಿಸಿಕೊಳ್ಳುತ್ತಿದ್ದು, ಕಾನೂನಾತ್ಮಕ ಹೋರಾಟ ಮಾಡಿ ಆ ಎಲ್ಲ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದರು.
ಶರಾವತಿ ಭಾಗದ ಜನರು ರಾಜ್ಯಕ್ಕೆ ಬೆಳಕು ನೀಡಿದ್ದಾರೆ. ಆದರೆ, ಅವರೇ ಕತ್ತಲೆಯಲ್ಲಿದ್ದಾರೆ. ಅವರ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ನಾನು ಸಚಿವನಾದ ಬಳಿಕ ಪರೀಕ್ಷಾ ಶುದ್ಧೀಕರಣ ಮಾಡಿದ್ದೇವೆ. ಕಲಿಕೆಗೆ ಹೆಚ್ಚು ಒತ್ತು ನೀಡಿದ್ದು, ಮಕ್ಕಳಲ್ಲಿ ಸಂವಿಧಾನ ಪೀಠಿಕೆ ಅಭ್ಯಾಸ ಮಾಡಿಸಲಾಗುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ೧೩,೫೦೦ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡು ಶಿಕ್ಷಕರ ಕೊರತೆ ನೀಗಿಸುತ್ತಿದೆ ಎಂದರು.
ಕಾನೂನು ಹೋರಾಟದಲ್ಲಿ ಸೈಲ್ ಗೆಲ್ತಾರೆ: ಮಧು ವಿಶ್ವಾಸ
ಬೇಲೆಕೇರಿ ಅದಿರು ಪ್ರಕರಣದಲ್ಲಿ ಜೈಲು ಸೇರಿರುವ ಕಾಂಗ್ರೆಸ್ ಶಾಸಕ ಸತೀಶ ಸೈಲ್ ಕುರಿತು ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ, ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ. ಕಾನೂನು ಹೋರಾಟದಲ್ಲಿ ಅವರಿಗೆ ಗೆಲುವು ಸಾಧ್ಯವಾಗುತ್ತದೆ ಎಂದರು.
ಶರಾವತಿ ನದಿ ತಿರುವು ಯೋಜನೆಗೆ ವಿರೋಧವಿಲ್ಲ?:
ಶಿರಸಿ, ಸಿದ್ದಾಪುರ, ಸೊರಬ ಭಾಗಕ್ಕೆ ಶರಾವತಿ ನೀರು ನೀಡಬೇಕು ಎಂಬ ಪ್ರಸ್ತಾವನೆ ಇದೆ. ಇಲ್ಲಿನ ಜನರಿಗೆ ಮೊದಲು ನೀರು ನೀಡಬೇಕು. ಆ ಮೇಲೆ ಬೇರೆ ಕಡೆ ತೆಗೆದುಕೊಂಡು ಹೋಗುವುದು. ಬೆಂಗಳೂರಿಗೆ ಕಾವೇರಿ ನೀರು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗುತ್ತಿದ್ದು, ಕುಡಿಯುವ ನೀರಿನ ಯೋಜನೆಗೆ ವಿರೋಧ ಮಾಡುವುದು ಸರಿಯಾದ ಕ್ರಮವಲ್ಲ ಎಂದರು.
ಈ ವೇಳೆ ಶಾಸಕ ಭೀಮಣ್ಣ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಪ್ರಮುಖರಾದ ಜ್ಯೋತಿ ಪಾಟೀಲ್, ದೀಪಕ್ ದೊಡ್ಡೂರು, ಎಸ್.ಕೆ. ಭಾಗ್ವತ್ ಸಿರ್ಸಿಮಕ್ಕಿ ಮತ್ತಿತರರು ಇದ್ದರು.
ಹೆಬ್ಬಾರ ಶೀಘ್ರ ಕಾಂಗ್ರೆಸ್ ಸೇರ್ಪಡೆ
ಬಿಜೆಪಿಯ ಎಂಟಲ್ಲ, ಹದಿನೆಂಟು ಶಾಸಕರು ಕಾಂಗ್ರೆಸ್ ಸೇರಲಿದ್ದು, ಅವರೊಂದಿಗೆ ಯಲ್ಲಾಪುರ ಶಾಸಕ ಶಿವರಾಜ ಹೆಬ್ಬಾರ ಸಹ ಸದ್ಯದಲ್ಲಿಯೇ ಕಾಂಗ್ರೆಸ್ ಸೇರಲಿದ್ದಾರೆ. ಹೆಬ್ಬಾರ್ ಮೂಲ ಕಾಂಗ್ರೆಸಿಗರು. ಅವರು ಬಂದರೆ ಬರಲಿ. ನಮ್ಮ ಅಭ್ಯಂತರವಿಲ್ಲ. ಬಿಜೆಪಿ ಸೇರ್ಪಡೆಗೊಂಡ ಎಲ್ಲ ಶಾಸಕರು ಪುನಃ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ. ನೇರವಾಗಿ ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಹಣದಿಂದ ಶಾಸಕರನ್ನು ಖರೀದಿಸಿಯೇ ಅಧಿಕಾರಕ್ಕೆ ಬಂದಿದೆ ಎಂದು ಮಧು ಬಂಗಾರಪ್ಪ ಹೇಳಿದರು.ಅಡಕೆ ಬೆಳೆಗಾರರಿಗೆ ಪರಿಹಾರ ನೀಡಬೇಕಿದ್ದು ಮುಂಚೂಣಿಯಲ್ಲಿ ಹೋರಾಟ ಮಾಡುತ್ತೇನೆ. ಕೊಳೆ, ಎಲೆಚುಕ್ಕೆ ರೋಗಕ್ಕೆ ಪರಿಹಾರ ನೀಡಲು ವಿಜ್ಞಾನಗಳ ಸಲಹೆ ಪಡೆದು, ಕ್ಯಾಬಿನೆಟ್‌ನಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಮಧು ಬಂಗಾರಪ್ಪ ಹೇಳಿದರು.