ಹಾನಗಲ್ಲ: ಎಸ್‌ಐಆರ್ ಸೇರಿದಂತೆ ಹೊಸ ಹೊಸ ಪ್ರಯೋಗಗಳ ಮೂಲಕ ಬಿಜೆಪಿ ಮತದಾನದ ಹಕ್ಕು ಕಸಿಯುವ ಹುನ್ನಾರ ನಡೆಸಿದೆ. ಸಂವಿಧಾನದ ಪರ ಇರುವ ಜಾತ್ಯತೀತರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವುದೇ ಎಸ್‌ಐಆರ್‌ನ ಮೂಲ ಉದ್ದೇಶವಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಕಿಡಿಕಾರಿದರು.ಭಾನುವಾರ ತಾಲೂಕಿನ ನಾಲ್ಕರ ಕ್ರಾಸ್ ಬಳಿಯ ರೋಶನಿ ವ್ಯಸನಮುಕ್ತಿ ಕೇಂದ್ರದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಹಾನಗಲ್ ಮತ್ತು ಅಕ್ಕಿಆಲೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಬೂತ್ ಏಜೆಂಟರಿಗೆ ಆಯೋಜಿಸಿದ್ದ ಎಸ್‌ಐಆರ್ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷ ತನ್ನ ಸಿದ್ಧಾಂತ, ಜನಪರ ಕಾರ್ಯಕ್ರಮ, ಅಭಿವೃದ್ಧಿಯ ಮೇಲೆ ರಾಜಕಾರಣ ಮಾಡುತ್ತಾ ಬಂದಿದೆ ವಿನಃ ವಾಮಮಾರ್ಗಗಳಿಂದಲ್ಲ. ಆದರೆ ಬಿಜೆಪಿ ಶಾಶ್ವತವಾಗಿ ಅಧಿಕಾರದಲ್ಲಿ ಇರಬೇಕು ಎನ್ನುವ ದುರುದ್ದೇಶದಿಂದ ಪ್ರಜಾತಂತ್ರದ ಕೆಗ್ಗೊಲೆಗೆ ಮುಂದಾಗಿದೆ. ಬಿಜೆಪಿಗೆ ಮತ ಹಾಕದವರನ್ನು ಪಟ್ಟಿಯಿಂದಲೇ ಕಿತ್ತು ಹಾಕುವ ಸಂಚು ಎಸ್‌ಐಆರ್ ಮೂಲಕ ಹೂಡಲಾಗಿದೆ. ಕಾಂಗ್ರೆಸ್ ಪಕ್ಷ ಸಂವಿಧಾನ ಬದ್ಧವಾಗಿ ಮತದಾನದ ಹಕ್ಕು ನೀಡಿದರೆ, ಬಿಜೆಪಿ ಅದನ್ನು ಕಿತ್ತುಕೊಳ್ಳಲು ಹೊರಟಿದೆ. ಪ್ರತಿಯೊಬ್ಬ ಬೂತ್ ಏಜೆಂಟರು ಸಹ ಈ ಬಗ್ಗೆ ಜಾಗೃತಿ ವಹಿಸಿ ಎಸ್‌ಐಆರ್ ಮೇಲೆ ನಿಗಾ ವಹಿಸಿ ಅರ್ಹ ಮತದಾರರು ಪಟ್ಟಿಯಿಂದ ಹೊರಹೋಗದಂತೆ ಗಮನ ನೀಡಬೇಕಿದೆ ಎಂದರು.
ಜಾಗೃತ ಕರ್ನಾಟಕದ ಆದಂ ಖಾನ್, ವಿನಯಕುಮಾರ ಮಾತನಾಡಿ, ಪಶ್ಚಿಮ ಬಂಗಾಳ, ಬಿಹಾರ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಸಹ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರು ಕೈ ಬಿಡುವ ಷಡ್ಯಂತ್ರ ನಡೆದಿದೆ. ಇದರಿಂದ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕುವ ಆತಂಕ ಕಾಡಲಾರಂಭಿಸಿದೆ. ಮತಹಕ್ಕನ್ನು ಕಾಪಾಡಲು ಪ್ರತಿಯೊಬ್ಬರೂ ಸಹ ಮುಂದಾಗಬೇಕಿದೆ ಎಂದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಕೇಂದ್ರ ಬಿಜೆಪಿ ಸರಕಾರ ಚುನಾವಣಾ ಆಯೋಗವನ್ನು ಕೈಗೊಂಬೆ ಮಾಡಿಕೊಂಡು ತನ್ನ ರಾಜಕೀಯ ಲಾಭದ ಆಸೆಗೆ ಎಸ್‌ಐಆರ್ ಮೂಲಕ ಸಂಚು ರೂಪಿಸಿದೆ. ಬೇರೆ, ಬೇರೆ ರಾಜ್ಯಗಳಲ್ಲಿ ಈ ಪ್ರಯೋಗದಿಂದ ಪ್ರಯೋಜನ ಪಡೆದುಕೊಂಡು ಇಡೀ ದೇಶದಲ್ಲಿ ಪ್ರಯೋಗ ನಡೆಸಲು ಮುಂದಾಗಿದೆ. ಇದರ ಬಗ್ಗೆ ಪಕ್ಷದ ಕಾರ್ಯಕರ್ತರು ಅರಿವು ಮೂಡಿಸಬೇಕಿದೆ ಎಂದರು.ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಂಕರ ಮೆಹರವಾಡೆ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹನುಮಂತಪ್ಪ ಮರಗಡಿ, ಮಂಜು ಗೊರಣ್ಣನವರ, ನಗರ ಕಾಂಗ್ರೆಸ್ ಅಧ್ಯಕ್ಷ ಮತೀನ್ ಶಿರಬಡಗಿ ಸೇರಿದಂತೆ ಹಲವರು ಇದ್ದರು.ಬಿಜೆಪಿ ಮತದಾನದ ಹಕ್ಕುಕಸಿಯುವ ಹುನ್ನಾರ ನಡೆಸಿದೆ: ಶಾಸಕ ಮಾನೆ
ನಾಲ್ಕರ ಕ್ರಾಸ್ ಬಳಿ ಆಯೋಜಿಸಿದ್ದ ಎಸ್‌ಐಆರ್ ಕಾರ್ಯಾಗಾರದಲ್ಲಿ ಶಾಸಕ ಶ್ರೀನಿವಾಸ ಮಾನೆ ಮಾತನಾಡಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.