ಜನಾಕ್ರೋಶಕ್ಕೆ ಹೆದರಿ ಸಿಎಂ ರಾಜ್ಯ ಪ್ರವಾಸ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

| N/A | Published : Apr 22 2025, 01:46 AM IST / Updated: Apr 22 2025, 06:35 AM IST

ಜನಾಕ್ರೋಶಕ್ಕೆ ಹೆದರಿ ಸಿಎಂ ರಾಜ್ಯ ಪ್ರವಾಸ : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬೆಲೆ ಏರಿಕೆ ವಿರುದ್ಧ ದಾವಣಗೆರೆಯಲ್ಲಿ ಸೋಮವಾರ ಮೂರನೇ ಹಂತದ ಬಿಜೆಪಿ ಜನಾಕ್ರೋಶ ಯಾತ್ರೆ ನಡೆಯಿತು.

  ದಾವಣಗೆರೆ/ಹಾವೇರಿ : ಜನಾಕ್ರೋಶದ ಬಿಸಿ ಸರ್ಕಾರಕ್ಕೆ ತಟ್ಟಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರು ಬೆಂಗಳೂರನ್ನು ಬಿಟ್ಟು, ಬೆಳಗಾವಿ ಸೇರಿದಂತೆ ಬೇರೆ, ಬೇರೆ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವ್ಯಂಗ್ಯವಾಡಿದರು.

ದಾವಣಗೆರೆಯಲ್ಲಿ ಸೋಮವಾರ ಮೂರನೇ ಹಂತದ ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಮೊದಲ ಹಂತದ ಜನಾಕ್ರೋಶದ ಯಾತ್ರೆ ವೇಳೆಯೇ ನಾನು ಹೇಳಿದ್ದೆ. ಮುಖ್ಯಮಂತ್ರಿ ಅವರು ಕೇವಲ ಬೆಂಗಳೂರಿಗೆ ಸೀಮಿತರಾಗಿದ್ದಾರೆ. ನಂತರ ಸಿಎಂ, ಸಚಿವರು ಎಚ್ಚೆತ್ತುಕೊಂಡಿದ್ದಾರೆ. ಬೆಳಗಾವಿ ಸೇರಿ ರಾಜ್ಯದ ಇತರ ಕಡೆಗೆ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಂದರೆ ಅವರಿಗೆ ಜನಾಕ್ರೋಶದ ಬಿಸಿ ತಟ್ಟಿದೆಯೆಂದೇ ಅರ್ಥ ಎಂದರು.

ಹಿಂದೆ ವೀರಶೈವ-ಲಿಂಗಾಯತ ಧರ್ಮ ಒಡೆಯಲು ಹೋದಾಗ ಜನ ಸಿದ್ದರಾಮಯ್ಯನವರಿಗೆ ತಕ್ಕ ಪಾಠ ಕಲಿಸಿದ್ದರು. ಈಗವರ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರು ಜಾತಿ ಜನಗಣತಿ ವಿಚಾರವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಜಾತಿ- ಜಾತಿಗಳ ಮಧ್ಯೆ, ಧರ್ಮ-ಧರ್ಮಗಳ ಮಧ್ಯೆ ಜಗಳ ಹಚ್ಚುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಈಗ ಸತೀಶ ಜಾರಕಿಹೊಳಿಯವರು ಜಾತಿ ಜನಗಣತಿ ವರದಿ ಜಾರಿಗೆ ಇನ್ನೊಂದು ವರ್ಷ ಬೇಕೆನ್ನುತ್ತಿದ್ದಾರೆ. ಯಾವಾಗ ಮುಖ್ಯಮಂತ್ರಿ ಕುರ್ಚಿ ಅಲುಗಾಡುತ್ತದೆಯೋ, ಆಗ ಇಂತಹ ವಿಚಾರಗಳನ್ನು ಮುನ್ನೆಲೆಗೆ ತರಲಾಗುತ್ತದೆ. ಹಿಂದಿನಿಂದಲೂ ಇದನ್ನೇ ಮಾಡುತ್ತಿದ್ದಾರೆ. ಸಿಎಂ ಕುರ್ಚಿ ಗಟ್ಟಿ ಮಾಡಿಕೊಳ್ಳಲು ಇದು ಸಿದ್ದರಾಮಯ್ಯ ತೋ

ರುತ್ತಿರುವ ದುರ್ಬುದ್ಧಿಯೇ ಹೊರತು, ಸದುದ್ದೇಶದಿಂದ ಕೂಡಿದ್ದಲ್ಲ ಎಂದು ಕಿಡಿ ಕಾರಿದರು.

ಬೆಲೆ ಏರಿಕೆ, ಭ್ರಷ್ಟಾಚಾರ, ವಾಲ್ಮೀಕಿ ನಿಗಮದ ಹಗರಣ, ಮುಡಾ ಸೈಟ್ ಹಗರಣ, ಹನಿಟ್ರ್ಯಾಪ್‌ ಸೇರಿದಂತೆ ಹಗರಣಗಳ ಸುಳಿಯಲ್ಲೇ ಸಿಲುಕಿರುವ ಸಿದ್ದರಾಮಯ್ಯ ಹಾಗೂ ಸಂಪುಟದ ಸಚಿವರು, ಬುರ್ಖಾ ಹಾಕಿಕೊಂಡು ಸುತ್ತಾಡುವ ಸ್ಥಿತಿ ತಲುಪಿದ್ದಾರೆ. ‘ಮಹದೇವಪ್ಪ ನಿನಗೂ ಫ್ರೀ, ಕಾಕಾ ಪಾಟೀಲ ನಿನಗೂ ಫ್ರೀ’ ಅಂದಿದ್ದ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಈಗ ಬಸ್ಸುಗಳನ್ನೇ ಜನ ಹತ್ತುತ್ತಿಲ್ಲ. ಗ್ರಾಮೀಣ ಮಕ್ಕಳು ಶಾಲಾ-ಕಾಲೇಜಿಗೆ ಬಂದು ಹೋಗಲು ಬಸ್ಸುಗಳ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಲು ಪರದಾಡುವುದನ್ನು ಕಾಣುತ್ತಿದ್ದೇವೆ ಎಂದು ದೂರಿದರು.

ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ.4ರಷ್ಟು ಮುಸ್ಲಿಮರಿಗೆ ಮೀಸಲಾತಿ, ಮುಸ್ಲಿಂ ಬಡ ಯುವತಿಯರ ಮದುವೆಗೆ 50 ಸಾವಿರ ರು. ಸಹಾಯಧನ, ಮುಸ್ಲಿಂ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು 30 ಲಕ್ಷ ನೀಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಇಂತಹ ಯೋಜನೆಗಳು ಹಿಂದುಗಳಿಗೆ ಯಾಕಿಲ್ಲ? ಹಿಂದುಗಳಲ್ಲಿ ಬಡ ಹೆಣ್ಣು ಮಕ್ಕಳಿಲ್ಲವೇ? ಹಿಂದುಗಳಲ್ಲಿ ಬಡ ಪ್ರತಿಭಾವಂತ ಮಕ್ಕಳಿಲ್ಲವೇ? ಮುಸ್ಲಿಮರಿಗೆ ನೀಡುವ ಯೋಜನೆ, ಘೋಷಣೆಗಳು ಯಾಕೆ ಹಿಂದುಗಳಿಗೆ ಇಲ್ಲ ಎಂದು ಅವರು ಪ್ರಶ್ನಿಸಿದರು.

ಬರೀ ಮುಸ್ಲಿಮರ ಮತಗಳಿಂದಲೇ ನೀವು ಮುಖ್ಯಮಂತ್ರಿ ಆಗಿಲ್ಲ. ಪದೇಪದೇ ಯಾಕೆ ಹಿಂದುಗಳಿಗೆ ಅವಮಾನ ಮಾಡುತ್ತಿದ್ದೀರಿ ಎಂದು ಕೇಳಿದರೆ ಉತ್ತರ ಕೊಡುವ ಧೈರ್ಯ ಮುಖ್ಯಮಂತ್ರಿ ಸಿದ್ದ

ರಾಮಯ್ಯಗೆ ಇಲ್ಲ. ಹೀಗಾಗಿ, ಜವಾಬ್ಧಾರಿಯುತ ವಿಪಕ್ಷವಾಗಿ ಬಿಜೆಪಿ ಎಲ್ಲಾ ಜಿಲ್ಲೆಗೂ ತೆರಳಿ, ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ರಾಜ್ಯದ ಜನತೆಗೆ ಮೋಸ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲು ಜನಾಕ್ರೋಶ ಯಾತ್ರೆ ಕೈಗೊಂಡಿದ್ದೇವೆ ಎಂದು ವಿಜಯೇಂದ್ರ ಎಚ್ಚರಿಸಿದರು.

ದಾವಣಗೆರೆ-ಹಾವೇರಿಗಳಲ್ಲಿ ಯಾತ್ರೆ:

ಯಾತ್ರೆಯಲ್ಲಿ ಪಾಲ್ಗೊಳ್ಳಲು ದಾವಣಗೆರೆಗೆ ಆಗಮಿಸಿದ ನಾಯಕರಿಗೆ ನಗರದ ಹೊರವಲಯದ ಅಪೂರ್ವ ರೆಸಾರ್ಟ್ ಬಳಿ ಭವ್ಯ ಸ್ವಾಗತ ನೀಡಲಾಯಿತು. ಬಳಿಕ, ನಾಯಕರು ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ, ಜಯದೇವ ವೃತ್ತದಲ್ಲಿ ಬಹಿರಂಗ ಸಭೆ ನಡೆಸುವ ಮೂಲಕ 3ನೇ ಹಂತದ ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಲಾಯಿತು. ಸಮಾವೇಶದ ಬಳಿಕ, ಎಸಿ ಕಚೇರಿಗೆ ತೆರಳಿ ಮನವಿ ಅರ್ಪಿಸಲಾಯಿತು. ನಂತರ, ಹರಿಹರ ಮಾರ್ಗವಾಗಿ ಹಾವೇರಿಗೆ ಬಿಜೆಪಿ ಜನಾಕ್ರೋಶ ಯಾತ್ರೆ ಸಾಗಿತು.

ಹಾವೇರಿಯಲ್ಲಿ ಪುರಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಜೋಡೆತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಲಾಯಿತು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಿಎಂ ಸದಾನಂದ ಗೌಡ, ಸಂಸದ ಗೋವಿಂದ ಕಾರಜೋಳ ಮತ್ತಿತರ ನಾಯಕರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.