ಶಾಸಕ ಸಂಗಮೇಶ್ವರ್‌ ತೇಜೋವಧೆಗೆ ಬಿಜೆಪಿ, ಜೆಡಿಎಸ್‌ ಪ್ರಯತ್ನ: ಆರೋಪ

| Published : Dec 15 2023, 01:30 AM IST

ಶಾಸಕ ಸಂಗಮೇಶ್ವರ್‌ ತೇಜೋವಧೆಗೆ ಬಿಜೆಪಿ, ಜೆಡಿಎಸ್‌ ಪ್ರಯತ್ನ: ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾವತಿಯಲ್ಲಿ ಬಿಜೆಪಿ, ಜೆಡಿಎಸ್‌ ಅಕ್ರಮ ದಂಧೆಗಳನ್ನು ಪೋಷಿಸುತ್ತಿವೆ. ವೈಯಕ್ತಿಕ ಜಗಳನ್ನು ಕೋಮುಗಲಭೆ ಎಂದು ಬಣ್ಣ ಕಟ್ಟಲು ಬಿಜೆಪಿ ವಿಫಲ ಪ್ರಯತ್ನ ನಡೆಸುತ್ತಿದೆ. ಈ ಹಿಂದೆ ಇಬ್ಬರು ವ್ಯಕ್ತಿಗಳ ನಡುವೆ ನಡೆದ ಗಲಾಟೆಯನ್ನು ಕೋಮುಗಲಭೆಗೆ ತಿರುಗಿಸಲು ಬಿಜೆಪಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರೇ ಭದ್ರಾವತಿಗೆ ಬಂದಿದ್ದರು. ಆದರೆ, ಈ ಜಗಳ ಕೋಮು ಕಾರಣಕ್ಕೆ ನಡೆದ ಗಲಭೆಯಲ್ಲ ಎಂದು ಹಿರಿಯ ಐಪಿಎಸ್ ಅಧಿಕಾರಿ ಅಲೋಕ್‌ಕುಮಾರ್ ಅವರೇ ತನಿಖಾ ವರದಿ ಸಲ್ಲಿಸಿದ್ದರು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಭದ್ರಾವತಿಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್‌ ತೇಜೋವಧೆ ಮಾಡುವ ಪ್ರಯತ್ನ ಬಿಜೆಪಿ -ಜೆಡಿಎಸ್‌ನಿಂದ ನಡೆಯುತ್ತಿದೆ ಎಂದು ಭದ್ರಾವತಿ ನಗರಸಭಾ ಕಾಂಗ್ರೆಸ್ ಸದಸ್ಯ ಬಿ.ಕೆ.ಮೋಹನ್‌ ಆರೋಪಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬಿಜೆಪಿಯ ಗೋಕುಲಕೃಷ್ಣ ಮೇಲೆ ನಡೆದ ಹಲ್ಲೆಗೂ ಶಾಸಕರು, ಕಾಂಗ್ರೆಸ್ ಕಾರ್ಯಕರ್ತರಿಗೂ ಸಂಬಂಧವಿಲ್ಲ. ಭದ್ರಾವತಿಯಲ್ಲಿ ಇಸ್ಪೀಟ್, ಒ.ಸಿ.ಯಂತಹ ಕಾನೂನುಬಾಹಿರ ದಂಧೆಗಳನ್ನು ಶಾಸಕರು ಯಾವುದೇ ಕಾರಣಕ್ಕೂ ಸಹಿಸಲ್ಲ. ಪೊಲೀಸರ ಮೂಲಕ ಇಂತಹ ಸಮಾಜಘಾತುಕ ಕೃತ್ಯಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಇದನ್ನು ಸಹಿಸದೇ ಅವರ ತೇಜೋವಧೆ ಮಾಡಲು ಬಿಜೆಪಿ -ಜೆಡಿಎಸ್ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.

ಗೋಕುಲ ಕೃಷ್ಣನ ಮೇಲಿನ ಹಲ್ಲೆ ಪ್ರಕರಣದಲ್ಲಿ ಅನವಶ್ಯಕವಾಗಿ ಶಾಸಕರು ಮತ್ತು ಕಾಂಗ್ರೆಸ್ ಮುಖಂಡ ಕುಮಾರ್ ಅವರ ಹೆಸರನ್ನು ಎಳೆದು ತರಲಾಗುತ್ತಿದೆ. ಗೋಕುಲ ಕೃಷ್ಣ ಓರ್ವ ರೌಡಿಶೀಟರ್, ಒಸಿ, ಇಸ್ಪೀಟ್ ದಂಧೆ ನಡೆಸುತ್ತಾನೆ. ಬಡವರು, ದಲಿತರ ಮೇಲೆ ನಿರಂತರ ಹಲ್ಲೆ, ದಾಳಿ ನಡೆಸುತ್ತಿದ್ದಾನೆ. ಈತನ ವಿರುದ್ಧವೇ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಭದ್ರಾವತಿಯಲ್ಲಿ ಬಿಜೆಪಿ, ಜೆಡಿಎಸ್‌ ಅಕ್ರಮ ದಂಧೆಗಳನ್ನು ಪೋಷಿಸುತ್ತಿವೆ. ವೈಯಕ್ತಿಕ ಜಗಳನ್ನು ಕೋಮುಗಲಭೆ ಎಂದು ಬಣ್ಣ ಕಟ್ಟಲು ಬಿಜೆಪಿ ವಿಫಲ ಪ್ರಯತ್ನ ನಡೆಸುತ್ತಿದೆ. ಈ ಹಿಂದೆ ಇಬ್ಬರು ವ್ಯಕ್ತಿಗಳ ನಡುವೆ ನಡೆದ ಗಲಾಟೆಯನ್ನು ಕೋಮುಗಲಭೆಗೆ ತಿರುಗಿಸಲು ಬಿಜೆಪಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರೇ ಭದ್ರಾವತಿಗೆ ಬಂದಿದ್ದರು. ಆದರೆ, ಈ ಜಗಳ ಕೋಮು ಕಾರಣಕ್ಕೆ ನಡೆದ ಗಲಭೆಯಲ್ಲ ಎಂದು ಹಿರಿಯ ಐಪಿಎಸ್ ಅಧಿಕಾರಿ ಅಲೋಕ್‌ಕುಮಾರ್ ಅವರೇ ತನಿಖಾ ವರದಿ ಸಲ್ಲಿಸಿದ್ದರು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಕಾಂಗ್ರೆಸ್ ವಕ್ತಾರ ಆಯನೂರು ಮಂಜುನಾಥ್, ಮುಖಂಡರಾದ ಷಡಕ್ಷರಿ, ಚಂದ್ರಭೂಪಾಲ್ ಮತ್ತಿತರರು ಇದ್ದರು.

- - -