ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಹೊಸ್ತಿಲಲ್ಲೇ ತಿಕ್ಕಾಟ ಆರಂಭವಾಗಿದ್ದು, ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಪ್ರತ್ಯೇಕವಾಗಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ.
ಇದಕ್ಕೆ ಕಾರಣವಾಗಿದ್ದು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಜೆಡಿಎಸ್ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಪಿ.ರಂಗನಾಥ್ ಕಣಕ್ಕೆ ಇಳಿಯುತ್ತಿದ್ದಾರೆ ಎಂಬ ಜೆಡಿಎಸ್‌ನ ಬೆಂಗಳೂರು ನಗರ ಘಟಕ ಅಧ್ಯಕ್ಷ ಎಚ್.ಎಂ.ರಮೇಶ್‌ಗೌಡ ಅವರ ಏಕಪಕ್ಷೀಯ ಹೇಳಿಕೆ.
ಗುರುವಾರ ಪಕ್ಷದ ಕಚೇರಿಯಲ್ಲಿ ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ರಮೇಶ್‌ಗೌಡ ಅವರು ಮೈತ್ರಿಕೂಟದ ಅಭ್ಯರ್ಥಿಯಾಗಿ ರಂಗನಾಥ್ ಸ್ಪರ್ಧಿಸುತ್ತಿದ್ದಾರೆ ಎಂದು ಹೇಳಿದ್ದರು.
ಈ ಹೇಳಿಕೆ ಬಿಜೆಪಿ ನಾಯಕರಲ್ಲಿ ಆಕ್ರೋಶ ಉಂಟು ಮಾಡಿದೆ.ಇದರ ಬೆನ್ನಲ್ಲೇ ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪಕ್ಷದ ಹಿರಿಯ ನಾಯಕರೊಂದಿಗೆ ಹಾಗೂ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಬಂಧ ಮುಖ್ಯ ವಕ್ತಾರ ಅಶ್ವಥ್‌ನಾರಾಯಣ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಅವರ ಹೆಸರುಗಳನ್ನು ಕೇಂದ್ರ ಘಟಕಕ್ಕೆ ಶಿಫಾರಸು ಮಾಡುವ ನಿರ್ಧಾರ ಕೈಗೊಂಡರು ಎಂದು ಮೂಲಗಳು ತಿಳಿಸಿವೆ.
ಮೈತ್ರಿ ಬಗ್ಗೆ ಏನೇ ತೀರ್ಮಾನಗಳು ಆಗಬೇಕಾದರೂ ದೆಹಲಿ ಮಟ್ಟದಲ್ಲಿ ಆಗಬೇಕು. ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಯಾರಾಗಬೇಕು? ಮೈತ್ರಿ ಕೂಟದ ಅಭ್ಯರ್ಥಿಯಾಗಬೇಕೆ ಅಥವಾ ಬೇಡವೆ ಎಂಬುದು ಇನ್ನೂ ಚರ್ಚೆಯೇ ಆಗಿಲ್ಲ.
ರಂಗನಾಥ್ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಕೆಲವು ತಿಂಗಳ ಹಿಂದೆಯೇ ಘೋಷಿಸಿರಬಹುದು.
ಆದರೆ, ಉಪಚುನಾವಣೆ ಘೋಷಣೆಯಾದ ಬಳಿಕ ಈ ಬಗ್ಗೆ ಉಭಯ ಪಕ್ಷಗಳ ಹಿರಿಯ ನಾಯಕರ ನಡುವೆ ಸಮಾಲೋಚನೆಯೇ ನಡೆದಿಲ್ಲ.
ಹೀಗಿರುವಾಗ ಮೈತ್ರಿಕೂಟದ ಅಭ್ಯರ್ಥಿಯಾಗಿ ರಂಗನಾಥ್ ಅವರು ಕಣಕ್ಕಿಳಿಯುತ್ತಾರೆ ಎಂದು ಜೆಡಿಎಸ್ ಮುಖಂಡರು ಏಕಾಏಕಿಯಾಗಿ ಹೇಳಿದ್ದು ಸರಿಯಲ್ಲ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಆಕ್ಷೇಪ ವ್ಯಕ್ತಪಡಿಸಿದರು.