ಸಾರಾಂಶ
ರಾಮನಗರ: ಒಡಿಶಾದಲ್ಲಿ ದಾಖಲೆ ಇಲ್ಲದೆ ಅಪಾರ ಪ್ರಮಾಣದ ನಗದನ್ನು ಸಂಗ್ರಹಿಸಿ ಆದಾಯ ತೆರಿಗೆ ಇಲಾಖೆಗೆ ಸಿಕ್ಕಿಬಿದ್ದಿರುವ ಜಾರ್ಖಂಡ್ ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಪ್ರಸಾದ್ ಸಾಹುನನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಐಜೂರು ವೃತ್ತದಲ್ಲಿ ಸೇರಿದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಸಂಸದ ಧೀರಜ್ ಪ್ರಸಾದ್ ಸಾಹು, ಕಾಂಗ್ರೆಸ್ ನಾಯಕರು ಹಾಗೂ ಐಎನ್ ಡಿಐ ಮೈತ್ರಿಕೂಟದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಸಂಸದ ಧೀರಜ್ ಪ್ರಸಾದ್ ಸಾಹು ಅವರಿಗೆ ಸೇರಿದ್ದು ಎನ್ನಲಾದ ಉದ್ಯಮ ಸಮೂಹದಿಂದ ಐಟಿ ಅಧಿಕಾರಿಗಳು 300 ಕೋಟಿ ರುಪಾಯಿಗು ಹೆಚ್ಚಿನ ನಗದನ್ನು ಜಪ್ತಿ ಮಾಡಿರುವುದು ಕಾಂಗ್ರೆಸ್ ಪಕ್ಷದಲ್ಲಿ ಅವ್ಯಾಹತವಾಗಿ ಭ್ರಷ್ಚಾಚಾರ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಈ ಕೂಡಲೇ ಧೀರಜ್ ರವರ ರಾಜ್ಯಸಭಾ ಸದಸ್ಯತ್ವ ರದ್ದುಪಡಿಸಿ ಎಫ್ ಐಆರ್ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಐಟಿ, ಇಡಿ, ಸಿಬಿಐ ಏಜೆನ್ಸಿಗಳ ದಾಳಿ ಆದಾಗ ಇಷ್ಟು ದೊಡ್ಡ ಮೊತ್ತದ ನಗದು ಬೇರೆಲ್ಲೂ ಸಿಕ್ಕಿರಲಿಲ್ಲ. ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಮತ್ತು ಭ್ರಷ್ಟಾಚಾರದ ಗಂಗೋತ್ರಿ ಎನ್ನುವಂತಾಗಿದೆ. ಇದಕ್ಕೆ ಪ್ರತಿ ರಾಜ್ಯದಲ್ಲಿ, ದೇಶದಲ್ಲಿ ನೂರಾರು- ಸಾವಿರಾರು ಉದಾಹರಣೆಗಳು ಸಿಗುತ್ತವೆ ಎಂದು ಪ್ರತಿಭಟನಾಕಾರರು ಟೀಕಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು ಮಾತನಾಡಿ, ಬಡವರನ್ನು ಲೂಟಿ ಮಾಡಿ ಹಣ ಕೂಡಿಟ್ಟಿರುವ ಭ್ರಷ್ಟಾಚಾರಿಗಳು ಸಿಕ್ಕಿ ಬೀಳುತ್ತಾರೆ ಎಂಬುದು ಪ್ರಧಾನಿ ನರೇಂದ್ರ ಮೋದಿರವರ ಗ್ಯಾರಂಟಿಯಾಗಿದೆ. ಭ್ರಷ್ಟಾಚಾರ ಮುಕ್ತ ಭಾರತಕ್ಕೆ ಪ್ರಧಾನಿ ಬದ್ಧರಾಗಿದ್ದಾರೆ. ತನಿಖಾಸಂಸ್ಥೆಗಳು ತಮ್ಮ ಕೆಲಸ ಮಾಡುತ್ತಿವೆ ಎಂದರು.
ತೆಲಂಗಾಣದ ಚುನಾವಣೆ ವೇಳೆ ಒಂದೆಡೆ ಕಾಂಗ್ರೆಸ್‌ಗೆ ಸೇರಿದ 6 ಕೋಟಿ ಸಿಕ್ಕಿದೆ. ಐಟಿ ದಾಳಿ ವೇಳೆ ಕರ್ನಾಟಕದಲ್ಲಿ ಒಂದು ಮನೆಯಲ್ಲಿ 42 ಕೋಟಿ ಸೇರಿ ಒಟ್ಟು 102 ಕೋಟಿ ನಗದು ಪತ್ತೆಯಾಗಿತ್ತು. ಇನ್ನೂ ಕೂಡ ಕಾಂಗ್ರೆಸ್ಸಿಗರು ಪ್ರಾಮಾಣಿಕತೆ ಕುರಿತು ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರದೇವರು ಮಾತನಾಡಿ, ಸಂಸದ ಧೀರಜ್ ಪ್ರಸಾದ್ ಸಾಹು ರಾಹುಲ್ ಗಾಂಧಿರವರ ಆಪ್ತರಾಗಿದ್ದಾರೆ. ಅಕ್ರಮ ನಗದು ಸಿಕ್ಕಿರುವ ಪ್ರಕರಣದ ಬಗ್ಗೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆ ಇದೆ. ಮಲ್ಲಿಕಾರ್ಜುನ ಖರ್ಗೆಯವರಿಗೆ ನೈತಿಕತೆ ಇದ್ದಿದ್ದರೆ, ರಾಹುಲ್ ಗಾಂಧಿಗೆ ಸಂವಿಧಾನದ ಬಗ್ಗೆ ನಯಾಪೈಸೆ ಗೌರವ ಇದ್ದರೆ ಕೂಡಲೇ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು. ಜೊತೆಗೆ ರಾಹುಲ್ ಗಾಂಧಿರವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಆರ್.ವಿ.ಸುರೇಶ್, ನಾಗೇಶ್, ಗೋಪಾಲ್ , ಚಂದನ್, ಯಶವಂತ್, ಲಕ್ಷ್ಮಿ, ಜಯಶೀಲಾ, ಚನ್ನಪ್ಪ, ಕನಕಪುರ ಮುರಳಿ, ಅನಿಲ್, ಅಶ್ವತ್ಥ ನಾರಾಯಣ, ಜೆಡಿಎಸ್ ಮುಖಂಡರಾದ ಜಯಕುಮಾರ್, ಶಿವರಾಜು ಮತ್ತಿತರರು ಭಾಗವಹಿಸಿದ್ದರು.11ಕೆಆರ್ ಎಂಎನ್ 1.ಜೆಪಿಜಿ
ರಾಮನಗರದ ಐಜೂರು ವೃತ್ತದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.;Resize=(128,128))
;Resize=(128,128))
;Resize=(128,128))