ಸಾರಾಂಶ
ಬೆಂಗಳೂರು : ರಾಜ್ಯದ ನಿಪ್ಪಾಣಿಗೆ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಭೇಟಿ ನೀಡಿ 100 ವರ್ಷ ಪೂರೈಸಿದ ಸಂಭ್ರಮ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿ ಬೆಂಗಳೂರಿನಿಂದ ಬೆಳಗಾವಿ ಜಿಲ್ಲೆಯ ನಿಪ್ಪಾಣಿವರೆಗೆ ಹಮ್ಮಿಕೊಂಡಿರುವ ‘ಭೀಮ ಹೆಜ್ಜೆ ರಥಯಾತ್ರೆ’ಗೆ ಚಾಲನೆ ದೊರೆತಿದೆ.
ಶುಕ್ರವಾರ ವಿಧಾನಸೌಧ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರ್‍ಯಾಲಿ ಉದ್ಘಾಟಿಸಲಾಯಿತು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ ಸೇರಿ ಹಲವು ಬಿಜೆಪಿ ಮುಖಂಡರು ಮತ್ತು ದಲಿತ ಸಂಘಟನೆಯ ನಾಯಕರು ಭಾಗವಹಿಸಿದ್ದರು.
ಬಳಿಕ ನಗರದ ಹೊರವಲಯದಲ್ಲಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ ಬಳಿ ಸಮಾವೇಶ ನಡೆಸಿ ಬೈಕ್ ರ್‍ಯಾಲಿ ಮೂಲಕ ನಿಪ್ಪಾಣಿಗೆ ಪ್ರಯಾಣ ಬೆಳೆಸಲಾಯಿತು. ಇದೇ 15ರಂದು ನಿಪ್ಪಾಣಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಈ ಮೂಲಕ ಅಂಬೇಡ್ಕರ್ ಅವರಿಗೆ ಬಿಜೆಪಿ ಗೌರವ ಸಲ್ಲಿಸಲಿದೆ.
ವಿಧಾನಸೌಧದ ಆವರಣದಲ್ಲಿ ಭೀಮಹೆಜ್ಜೆ ರಥಯಾತ್ರೆ ಉದ್ಘಾಟಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ಸಿಗರು ಹಲವು ವರ್ಷಗಳ ಕಾಲ ದಲಿತರನ್ನು ತುಳಿದುಕೊಂಡೇ ಬಂದಿದ್ದಾರೆ. ದಲಿತರ ಬಗ್ಗೆ ಮಾತನಾಡಿದಾಗಲೆಲ್ಲ ಅವರು ಶೋಷಣೆಗೊಳಗಾದವರು ಎನ್ನುತ್ತೇವೆ. ಆದರೆ ಆ ರೀತಿ ಶೋಷಣೆ ಮಾಡಿದವರು ಎಂಬ ಪ್ರಶ್ನೆ ಹುಡುಕಿದರೆ ಕಾಂಗ್ರೆಸ್‌ನವರೇ ಎಂಬ ಉತ್ತರ ಸಿಗುತ್ತದೆ. ಇಷ್ಟು ವರ್ಷ ಶೋಷಿತರನ್ನು ಕಾಂಗ್ರೆಸ್‌ನವರೇ ತುಳಿದಿದ್ದಾರೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕಾಂಗ್ರೆಸ್ ದಲಿತರನ್ನು ಉದ್ಧಾರ ಮಾಡಲಿಲ್ಲ ಎಂದು ಕಿಡಿಕಾರಿದರು.
ಬಾಬಾ ಸಾಹೇಬ್‌ರ ಹೆಸರನ್ನು ಕಾಂಗ್ರೆಸ್‌ನವರು ದುರುಪಯೋಗ ಮಾಡಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಅಂಬೇಡ್ಕರ್ ಅವರ ಜೀವನದ ಪ್ರಮುಖ ಸ್ಥಳಗಳನ್ನು ಪಂಚತೀರ್ಥವೆಂದು ಯಾತ್ರಾ ಸ್ಥಳವಾಗಿಸಿದರು. ವಕ್ಫ್ ಮಂಡಳಿ ಲಕ್ಷಾಂತರ ದಲಿತರ ಆಸ್ತಿಗಳನ್ನು ಲೂಟಿ ಮಾಡಿದೆ. ವಕ್ಫ್‌ನಿಂದಾದ ಭೂ ಕಬಳಿಕೆ ಬಗ್ಗೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ದೂರು ಹೇಳಿಕೊಳ್ಳಲು ಬರುತ್ತಿದ್ದವರಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಿದ್ದರು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಾಮಕಾವಸ್ಥೆ ಅಧ್ಯಕ್ಷರಾಗಿದ್ದಾರೆ. ರಾಜ್ಯದಲ್ಲಿ ಆರು ವರ್ಷಗಳಿಗೂ ಹೆಚ್ಚು ಸಮಯ ಕೆಪಿಸಿಸಿ ಅಧ್ಯಕ್ಷರಾಗಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ನ್ಯಾಯ ಕೊಡಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್ಸಿಗೆ ದಲಿತರ ಮತ ಬೇಕು. ಆದರೆ, ಅವರನ್ನು ಲೆಕ್ಕಕ್ಕೆ ಪರಿಗಣಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಕಾಂಗ್ರೆಸ್ ಮೊದಲಿನಿಂದಲೂ ಮೀಸಲಾತಿ ವಿರೋಧಿಯಾಗಿದೆ. ಪ್ರತಿ ಹಂತದಲ್ಲೂ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ವಿರೋಧಿಸಿದೆ ಎಂದು ಕಿಡಿ ಕಾಡಿದರು.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಆಡಳಿತದ ವೇಳೆ ಅಂಬೇಡ್ಕರ್ ಸ್ಪರ್ಶಿಸಿದ 10 ಜಾಗಗಳನ್ನು ಗುರುತಿಸಿ ಅಭಿವೃದ್ಧಿಗೆ ಮುಂದಾಗಿತ್ತು. ಪ್ರಧಾನಿ ನೇಂದ್ರ ಮೋದಿ ಅವರು ಅಂಬೇಡ್ಕರ್ ಸ್ಥಳಗಳನ್ನು ಅಭಿವೃದ್ಧಿಗೊಳಿಸಿದ ಮಾದರಿಯಲ್ಲಿಯೇ ದಶ ಸ್ಥಳಗಳನ್ನು ಅಭಿವೃದ್ಧಿಗೊಳಿಸಲು 25 ಕೋಟಿ ರು. ಮೀಸಲಿಡಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅದರ ಬಗ್ಗೆ ಚಿಂತೆಯೇ ಮಾಡಿಲ್ಲ. ಅಲ್ಲದೇ, ಆ ನಿಟ್ಟಿನಲ್ಲಿ ಕೆಲಸವನ್ನು ಸಹ ಪ್ರಾರಂಭಿಸಿಲ್ಲ ಎಂದು ಟೀಕಿಸಿದರು.
ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ವಿರೋಧಿಸುತ್ತಿದೆ. ಕಾಂಗ್ರೆಸ್ಸಿನವರು ಕೇವಲ ಹಿಂದೂ ವಿರೋಧಿಯಲ್ಲ, ದಲಿತ ವಿರೋಧಿ. ಸಂವಿಧಾನ ಶಿಲ್ಪಿಯನ್ನು ಅಗೌರವದಿಂದ ನಡೆಸಿಕೊಂಡಿತ್ತು. ಕಾಂಗ್ರೆಸ್ ಸರ್ಕಾರವು ಖಾತರಿ ಯೋಜನೆಗೆ ದಲಿತ ಹಣವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಆ ಸಮುದಾಯಕ್ಕೆ ಅನ್ಯಾಯವೆಸಗಿದೆ. ಕಾಂಗ್ರೆಸ್ ಸರ್ಕಾರದ ಧೋರಣೆ ಖಂಡಿಸಿ, ರಾಜ್ಯದ ಜನತೆಯಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.