ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯದ ಅರ್ಧಕ್ಕಿಂತ ಹೆಚ್ಚು ಪ್ರದೇಶಗಳು ಬರಗಾಲದ ಭೀತಿಗೆ ಸಿಲುಕಿದ್ದು, ಮಳೆಯ ಕೊರತೆಯಿಂದ ಕೃಷಿ ಸಂಪೂರ್ಣ ಅಸ್ತವ್ಯಸ್ತವಾಗಿದೆ. ರೈತರು ಅಪಾರ ನಷ್ಟ ಅನುಭವಿಸುತ್ತಿದ್ದರೂ ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರ ಆರೋಪಿಸಿದರು.ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷವು ರಚಿಸಿರುವ ಅಧ್ಯಯನ ತಂಡವು ಬುಧವರಾದಂದು ಹಾಸನ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ರೈತರ ಸಮಸ್ಯೆಗಳು, ಬೆಳೆ ಹಾನಿ ಹಾಗೂ ನೀರಿನ ಕೊರತೆಯ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿತು. ನಂತರ ಹಾಸನದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತರು ಎದುರಿಸುತ್ತಿರುವ ಸಂಕಷ್ಟದ ಕುರಿತು ರಾಜ್ಯ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ರಾಜ್ಯ ಬಿಜೆಪಿ ರೈತರ ನೈಜ ಪರಿಸ್ಥಿತಿಯನ್ನು ಅರಿಯುವ ಉದ್ದೇಶದಿಂದ ಆರು ಅಧ್ಯಯನ ತಂಡಗಳನ್ನು ರಚಿಸಿದ್ದು, ಆ ತಂಡಗಳ ಪ್ರವಾಸವನ್ನು ಹಾಸನ ಜಿಲ್ಲೆಯಿಂದಲೇ ಆರಂಭಿಸಲಾಗಿದೆ. ಜಿಲ್ಲೆಯಲ್ಲಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸಿ ಅವರ ಸಮಸ್ಯೆಗಳನ್ನು ಆಲಿಸಲಾಗಿದೆ ಎಂದು ತಿಳಿಸಿದರು.
ಹಾಸನ ಜಿಲ್ಲೆಯಲ್ಲಿ ಬರದ ಜೊತೆಗೆ ಜೋಳ ಬೆಳೆಗೆ ಬಿಳಿಸುಳಿ ರೋಗ ತೀವ್ರವಾಗಿ ವ್ಯಾಪಿಸಿದ್ದು, ಶೇ.80ರಷ್ಟು ಬೆಳೆ ಹಾನಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ ಅರಗ ಜ್ಞಾನೇಂದ್ರ, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು. ಕೃಷಿ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ,ಈ ಬೆಳೆಯ ಬದಲು ಬೇರೆ ಬೆಳೆ ಬೆಳೆಯಿರಿ ಎಂಬ ಉತ್ತರ ನೀಡುತ್ತಿದ್ದಾರೆ. ಆದರೆ ಇದು ಸಮಸ್ಯೆಗೆ ಪರಿಹಾರವಲ್ಲ. ರೋಗಕ್ಕೆ ವೈಜ್ಞಾನಿಕ ಚಿಕಿತ್ಸೆ ಹಾಗೂ ಶಾಶ್ವತ ಪರಿಹಾರ ಕಂಡುಹಿಡಿಯುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ ಎಂದು ಒತ್ತಾಯಿಸಿದರು. ಹಿಂದೆಯೂ ಆಲೂಗಡ್ಡೆ ಬೆಳೆಗೆ ಇದೇ ರೀತಿಯ ರೋಗ ಕಾಣಿಸಿಕೊಂಡಿತ್ತು. ಆಗಲೂ ರೈತರು ನಷ್ಟ ಅನುಭವಿಸಿದ್ದರು. ಈಗ ಮತ್ತೆ ಜೋಳ ಬೆಳೆ ಸಂಕಷ್ಟಕ್ಕೆ ಸಿಲುಕಿರುವುದು ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಹೇಳಿದರು.ಪರಿಹಾರ ನೀಡಿ:
ಹಾನಿಗೊಳಗಾದ ರೈತರಿಗೆ ತಕ್ಷಣ ಪರಿಹಾರ ಘೋಷಿಸಬೇಕು. ಕೃಷಿ ಇಲಾಖೆ ಹತಾಷವಾಗಿ ಇನ್ನೆರಡು ವರ್ಷ ಮೆಕ್ಕೆಜೋಳ ಬೆಳೆಯಬೇಡಿ ಎಂದು ಹೇಳಿದ್ದಾರೆ. ರೈತರು ಆತ್ಮಹತ್ಯೆ ಮಾಡುವ ನಿರ್ಧಾರ ಮಾಡುವ ಮೊದಲು ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳಬೇಕು. ಇಂತಹ ಪರಿಸ್ಥಿತಿಯಲ್ಲಿ ನಾಗರೀಕ ಸರ್ಕಾರ ರೈತರ ನೆರವಿಗೆ ಬರಬೇಕು.ಆದರೆ ರಾಜ್ಯ ಸರ್ಕಾರವೇ ಇಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದುವರೆಗೂ ಮುಖ್ಯಮಂತ್ರಿಗಳ ಬದಲಾವಣೆ, ಮಂತ್ರಿಮಂಡಲ ಮೊದಲ ಹಂತದ್ದ ಆಯ್ತು. ಈಗ ಇನ್ನೊಂದು ಹಂತದ ಮಂತ್ರಿಮಂಡಲ ರಚನೆಗಾಗಿ ಇಡೀ ಸರ್ಕಾರ ದೆಹಲಿಗೆ ವರ್ಗಾವಣೆ ಆಗಿದೆ. ರೈತರನ್ನು ಕೇಳುವವರೇ ಗತಿ ಇಲ್ಲ, ರಾಜ್ಯದಲ್ಲಿ ಈಗ ಸರ್ಕಾರವೇ ಇಲ್ಲ. ದೆಹಲಿಯ ಅವರ ಹೈಕಮಾಂಡ್ ನಾಳೆ ಬಾ, ನಾಡ್ದು ಬಾ, ಸಂಜೆ ಬಾ, ಬೆಳಿಗ್ಗೆ ಬಾ ಎನ್ನುತ್ತಿದೆ. ಆಂತರಿಕವಾದ ಭಿನ್ನಾಭಿಪ್ರಾಯಗಳು, ನನಗೆ ಇಷ್ಟು ಕೋಟಾ ಕೊಡು, ಹೈಕಮಾಂಡ್‍ನಲ್ಲೆ ಕಿತ್ತಾಟ ನಡೆಯುತ್ತಿದೆ. 136 ಸೀಟ್ ಕೊಟ್ಟರು ಸರಿಯಾದ ಆಡಳಿತ ಮಾಡದ ಕೆಟ್ಟ ಸ್ಥಿತಿಗೆ ಸರ್ಕಾರ ಬಂದಿದೆ. ನಾವು ಬರ ಅಧ್ಯಯನ ಮಾಡಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕೊಡುತ್ತೇವೆ. ಕಳಪೆ ಬಿತ್ತನೆ ಬೀಜ ವಿತರಣೆ ಅಥವಾ ಮಣ್ಣಿನಲ್ಲಿ ರೋಗ ಅಡಗಿದೆಯಾ ಎಂಬುದರ ಬಗ್ಗೆ ತನಿಖೆ ನಡೆಸಬೇಕು. ಅಧಿಕಾರಿಗಳ ವೈಫಲ್ಯ ಇದ್ದರೆ ಕ್ರಮ ಕೈಗೊಳ್ಳಬೇಕು. ಪರ್ಯಾಯ ಬೆಳೆ ಬೆಳೆಯಲು ಉಚಿತವಾಗಿ ಗುಣಮಟ್ಟದ ಬೀಜ ಹಾಗೂ ಗೊಬ್ಬರ ವಿತರಿಸಬೇಕು. ಬೆಳೆ ನಷ್ಟಕ್ಕೆ ಸಮರ್ಪಕ ಪರಿಹಾರ ನೀಡುವುದರ ಜೊತೆಗೆ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಜಲಾಶಯಗಳಲ್ಲಿ ನೀರಿನ ಕೊರತೆ:
ಬರದಿಂದ ಸಂಕಷ್ಟದಲ್ಲಿರುವ ರೈತರನ್ನು ಉಳಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ರೈತರ ಜೀವನೋಪಾಯವನ್ನು ರಕ್ಷಿಸಲು ವಿಶೇಷ ಪ್ಯಾಕೇಜ್ ಘೋಷಿಸುವ ಅಗತ್ಯವಿದೆ ಎಂದು ಹೇಳಿದರು. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಾಜ್ಯದ ಜಲಾಶಯಗಳಲ್ಲಿ ಸುಮಾರು 13 ಟಿಎಂಸಿ ನೀರಿನ ಕೊರತೆ ಉಂಟಾಗಿದೆ. ಜಲಾಶಯಗಳ ನೀರಿನ ಸಂಗ್ರಹಣಾ ಪ್ರದೇಶಗಳಲ್ಲಿಯೂ ಸಮರ್ಪಕ ಮಳೆಯಾಗಿಲ್ಲ. ಇದರಿಂದ ಕೃಷಿ ಮಾತ್ರವಲ್ಲದೆ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಬಿಜೆಪಿ ಅಧ್ಯಯನ ತಂಡವು ಸಂಗ್ರಹಿಸಿರುವ ಮಾಹಿತಿಯ ಆಧಾರದ ಮೇಲೆ ಸಮಗ್ರ ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೂ ಹಾಗೂ ಕೇಂದ್ರ ಸರ್ಕಾರಕ್ಕೂ ಸಲ್ಲಿಸಲಾಗುವುದು. ರೈತರಿಗೆ ಅಗತ್ಯ ನೆರವು ದೊರಕುವಂತೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು. ವಿರೋಧ ಪಕ್ಷದ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು. 2017ರಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರ ವಿರುದ್ಧ ರೌಡಿಶೀಟ್ ತೆರೆಯಲಾಗಿತ್ತು ಎಂದು ಆರೋಪಿಸಿದ ಅವರು, ಈಗಲೂ ಅದೇ ರೀತಿಯ ಮನೋಭಾವ ಮುಂದುವರಿದಿದೆ ಎಂದರು.ಈ ಸಂದರ್ಭದಲ್ಲಿ ಮಾಜಿ ಸಚಿವ ವಿ. ಸುನಿಲ್ ಕುಮಾರ್, ಎಸ್.ಎನ್. ಚೆನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ. ಎಸ್. ಅರುಣ್, ಶಾಸಕರಾದ ಹುಲ್ಲಳ್ಳಿ ಸುರೇಶ್, ಸಿಮೆಂಟ್ ಮಂಜು, ಬಿಜೆಪಿ ಜಿಲ್ಲಾ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಾರಾಯಣ ಗೌಡ, ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.