ವಾಲ್ಮೀಕಿ ಅಭಿವೃದ್ಧಿ ನಿಗಮ ಕಚೇರಿಗೆ ಬಿಜೆಪಿ ಮುತ್ತಿಗೆ

| Published : Jul 01 2025, 12:47 AM IST

ವಾಲ್ಮೀಕಿ ಅಭಿವೃದ್ಧಿ ನಿಗಮ ಕಚೇರಿಗೆ ಬಿಜೆಪಿ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹರ್ಷಿ ವಾಲ್ಮೀಕಿ ನಿಗಮದ 178 ಕೋಟಿ ರು.ಗಳನ್ನು ಚುನಾವಣೆಗೆ ಬಳಸಿಕೊಂಡಿದೆ. ದೇಶದಲ್ಲಿ ಯಾವುದೇ ಸರ್ಕಾರ ಜನರಿಗೆ ಮೀಸಲಾಗಿದ್ದ ಹಣವನ್ನು ರಾಜಕಾರಣಕ್ಕೆ ಬಳಸಿಕೊಂಡಿದೆಯೆಂದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾತ್ರ.

ಕನ್ನಡಪ್ರಭ ವಾರ್ತೆ ತುಮಕೂರು

ನಗರದ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ಅರ್ಜಿದಾರರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಒಂದು ಕೋಟಿ ರು.ಗೂ ಹೆಚ್ಚು ಹಣ ವಂಚಿಸಿರುವುದನ್ನು ಖಂಡಿಸಿ ಸೋಮವಾರ ಜಿಲ್ಲಾ ಬಿಜೆಪಿ ಮುಖಂಡರು ಕ್ಯಾತ್ಸಂದ್ರದಲ್ಲಿರುವ ನಿಗಮ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಮೋಸಕ್ಕೊಳಗಾದ ಫಲಾನುಭವಿಗಳೊಂದಿಗೆ ಕಚೇರಿ ಎದುರು ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಶಾಸಕ ಬಿ.ಸುರೇಶ್‌ಗೌಡ, ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮರೆತು ಹಗರಣಗಳಲ್ಲೇ ಮುಳುಗಿದೆ. ಮಹರ್ಷಿ ವಾಲ್ಮೀಕಿ ನಿಗಮದ 178 ಕೋಟಿ ರು.ಗಳನ್ನು ಚುನಾವಣೆಗೆ ಬಳಸಿಕೊಂಡಿದೆ. ದೇಶದಲ್ಲಿ ಯಾವುದೇ ಸರ್ಕಾರ ಜನರಿಗೆ ಮೀಸಲಾಗಿದ್ದ ಹಣವನ್ನು ರಾಜಕಾರಣಕ್ಕೆ ಬಳಸಿಕೊಂಡಿದೆಯೆಂದರೆ ಅದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾತ್ರ. ಈಗ ತುಮಕೂರು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಫಲಾನುಭವಿಗಳಿಗೆ ವಂಚಿಸಿ ಅವರಿಗೆ ಅನ್ಯಾಯ ಮಾಡಿದೆ ಎಂದರು.

ಎಸ್.ಸಿ, ಎಸ್.ಟಿ. ಸಮುದಾಯದವರು ಕೊಳವೆ ಬಾವಿ, ಟ್ಯಾಕ್ಸಿ, ಉದ್ಯಮಶೀಲತೆಗಾಗಿ ಅಭಿವೃದ್ಧಿ ನಿಗಮದಲ್ಲಿ ಮೀಸಲಿಟ್ಟಿದ್ದ ಹಣದಲ್ಲಿ ಕಾಂಗ್ರೆಸ್ ಸರ್ಕಾರ 33 ಸಾವಿರ ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಬಡ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ಭ್ರಷ್ಟಾಚಾರವೇ ಮೆರೆಯುತ್ತಿದೆ. ಮೂಡಾ ಹಗರಣ, ವಸತಿ ಇಲಾಖೆ ಹಗರಣ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ತೊಲಗಿ ಭ್ರಷ್ಟಾಚಾರ ಮುಕ್ತ ರಾಜ್ಯವಾಗಬೇಕು ಎಂದು ಒತ್ತಾಯಿಸಿದರು.

ತುಮಕೂರಿನ ಜಿಲ್ಲಾ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳು ಫಲಾನುಭವಿ ಅರ್ಜಿದಾರರ ಹೆಸರಿನಲ್ಲಿ ಹಣ ಮಂಜೂರು ಮಾಡಿ ನಕಲಿ ಬ್ಯಾಂಕ್ ಖಾತೆ, ದಾಖಲಾತಿ ಸೃಷ್ಟಿ ಮಾಡಿ ಹಣ ವರ್ಗಾವಣೆ ಮಾಡಿ, ನೈಜ ಫಲಾನುಭವಿಗಳನ್ನು ವಂಚಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡು ಶಿಕ್ಷೆಗೆ ಗುರಿಪಡಿಸಬೇಕು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಬೇಕು ಎಂದು ಸುರೇಶ್‌ಗೌಡ ಆಗ್ರಹಿಸಿದರು.

ವಸತಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ, ಕಡು ಭ್ರಷ್ಟ ಸಚಿವ ಜಮೀರ್ ಅಹ್ಮದ್ ಖಾನ್‌ರನ್ನು ಸಂಪುಟದಿಂದ ವಜಾ ಮಾಡಿ ಎಂದು ಕಾಂಗ್ರೆಸ್ ಶಾಸಕರೇ ಒತ್ತಾಯಿಸಿದ್ದಾರೆ. ಅಭಿವೃದ್ಧಿಗೆ ಯಾವುದೇ ಹಣ ನೀಡುತ್ತಿಲ್ಲ, ಇಂತಹ ಸರ್ಕಾರದಲ್ಲಿ ಇರಲು ನಮಗೆ ಮರ್ಯಾದೆ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ಶಾಸಕರೇ ಆಕ್ರೋಶಗೊಂಡಿದ್ದಾರೆ. ಸಿದ್ದರಾಮಯ್ಯ ಸರ್ಕಾರ ರಾಜ್ಯವನ್ನು ದುಸ್ಥಿತಿಗೆ ತಂದಿಳಿಸಿದೆ. ಅಭಿವೃದ್ಧಿಯಲ್ಲಿ ದೇಶದಲ್ಲಿ 4ನೇ ಸ್ಥಾನದಲ್ಲಿದ್ದ ರಾಜ್ಯವನ್ನು 25ನೇ ಸ್ಥಾನಕ್ಕೆ ತಂದಿದ್ದಾರೆ. ಇಂತಹ ಕೆಟ್ಟ ಸರ್ಕಾರವನ್ನು ರಾಜ್ಯದ ಇತಿಹಾಸದಲ್ಲೇ ಕಂಡಿಲ್ಲ. ಇಂತಹ ಪರಿಸ್ಥಿಯಲ್ಲಿ ಇನ್ನೂ ಅಧಿಕಾರದಲ್ಲಿ ಮುಂದುವರೆಯುವುದು ನಾಚಿಕಗೇಡು ಎಂದರು.

ರಾಜ್ಯ ಬಿಜೆಪಿ ಎಸ್.ಟಿ.ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಲೂಟಿಗೆ ನಿಂತಿದೆ. ವಾಲ್ಮೀಕಿ ನಿಗಮದಲ್ಲಿ 187 ಕೋಟಿ ರು. ಲೋಟಿ, ವಸತಿ ಇಲಾಖೆಯಲ್ಲಿ ಲೂಟಿ, ಈಗ ಜಿಲ್ಲಾ ಅಭಿವೃದ್ಧಿ ನಿಗಮಗಳನ್ನೂ ಬಿಡದೆ ಲೂಟಿ ಮಾಡುತ್ತಿದೆ. ತುಮಕೂರು ಮಾತ್ರವಲ್ಲದೆ ಬೇರೆ ಜಿಲ್ಲೆಗಳ ನಿಗಮಗಳಲ್ಲೂ 500 ಕೋಟಿ ರು. ನಷ್ಟು ಭ್ರಷ್ಟಾಚಾರ ನಡೆದಿರುವ ಆರೋಪಗಳಿವೆ ಎಂದರು.

ಶಿರಾ ಹಾಗೂ ಪಾವಗಡ ತಾಲೂಕಿನ ಫಲಾನುಭವಿಗಳ ಹೆಸರಿನಲ್ಲಿ ಹಣ ಮಂಜೂರು ಮಾಡಿ ಅವರ ಖಾತೆಗೆ ಜಮಾ ಮಾಡದೆ, ಕೋಲಾರದಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ ಬ್ಯಾಂಕಿನಲ್ಲಿ ನಕಲಿ ಖಾತೆ ಸೃಷ್ಟಿ ಮಾಡಿ ಹಣ ವರ್ಗಾವಣೆ ಮಾಡಿ ಲಪಟಾಯಿಸಲಾಗಿದೆ. ಸರ್ಕಾರಕ್ಕೆ ಕದಿಯಲು ವಾಲ್ಮೀಕಿ ಜನರ ಹಣವೇ ಬೇಕಾಗಿತ್ತೆ? ವಾಲ್ಮೀಕಿ ಮಾತ್ರವಲ್ಲ ಇನ್ಯಾಯ ಸಮುದಾಯಗಳ ನಿಗಮಗಳಲ್ಲಿ ಈ ರೀತಿಯ ವಂಚನೆ ಆಗಿದೆಯೋ ಜನ ಎಚ್ಚೆತ್ತುಕೊಂಡು ಪತ್ತೆಮಾಡಬೇಕು. ರಾಜ್ಯದ ಜನರಿಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡದೆ, ಯಾವುದೇ ಅಭಿವೃದ್ಧಿ ಕೆಲಸ ಮಾಡದೆ, ಕೇವಲ ಭ್ರಷ್ಟಾಚಾರ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ತೊಲಗಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಜಿಲಾ ಹಿರಿಯ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ನಗರ ಅಧ್ಯಕ್ಷ ಧನುಷ್, ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್, ನಗರ ಅಧ್ಯಕ್ಷ ಬಂಬೂ ಮೋಹನ್, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಮುಖಂಡರಾದ ಟಿ.ಎಚ್.ಹನುಮಂತರಾಜು, ಸತ್ಯಮಂಗಲ ಜಗದೀಶ್, ನಗರ ಪಾಲಿಕೆ ಮಾಜಿ ಸದಸ್ಯರಾದ ಸಿ.ಎನ್.ರಮೇಶ್, ಮಲ್ಲಿಕಾರ್ಜುನ್, ವಿಷ್ಣವರ್ಧನ್, ಮುಖಂಡರಾದ ಪುಟ್ಟರಾಜು, ಬನಶಂಕರಿ ಬಾಬು, ಗಣೇಶ್‌ಪ್ರಸಾದ್, ಪ್ರತಾಪ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.