ಸಾರಾಂಶ
ಎಲ್ಲೇಮಾಳ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಿಜೆಪಿ ಮುಖಂಡ ನಾಗರಾಜು ಹಾಗೂ ಕುಮಾರ್ ಮಾಜಿ ಶಾಸಕ ಆರ್.ನರೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.
ಕನ್ನಡಪ್ರಭ ವಾರ್ತೆ ಹನೂರು
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆ ಎಲ್ಲೇಮಾಳ ಗ್ರಾಪಂ ಮಾಜಿ ಉಪಾಧ್ಯಕ್ಷ ಬಿಜೆಪಿ ಮುಖಂಡ ನಾಗರಾಜು ಹಾಗೂ ಕುಮಾರ್ ಮಾಜಿ ಶಾಸಕ ಆರ್.ನರೇಂದ್ರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.ಹನೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಮುಖಂಡರಿಗೆ ಮಾಜಿ ಶಾಸಕ ಆರ್. ನರೇಂದ್ರ ಕಾಂಗ್ರೆಸ್ ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. ಮಾಜಿ ಶಾಸಕ ಆರ್ ನರೇಂದ್ರ ಮಾತನಾಡಿ, ಕಾಂಗ್ರೆಸ್ ಪಕ್ಷದ ಸಿದ್ದಾಂತಗಳನ್ನು ಒಪ್ಪಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಸಂತಸದ ವಿಚಾರ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಯಲಿದ್ದು ಪಕ್ಷದ ಅಭ್ಯರ್ಥಿಗಳ ಪರ ಸಕ್ರಿಯವಾಗಿ ಭಾಗವಹಿಸಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಿ, ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ಬಂದರೆ ನಿಮಗೂ ಒಳ್ಳೆಯ ಸ್ಥಾನಮಾನ ಕಲ್ಪಿಸಿಕೊಡಲಾಗುವುದು. ಪ್ರಸ್ತುತ ಹನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಿ 12 ಸದಸ್ಯರು ಚುನಾವಣಾ ಕಣದಲ್ಲಿದ್ದಾರೆ. ಇವರ ಗೆಲುವಿಗೆ ತಾವು ಪ್ರಮುಖ ಪಾತ್ರ ವಹಿಸುವಂತೆ ತಿಳಿಸಿದರು.
ಈ ವೇಳೆ, ಎಲ್ಲೇಮಾಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹದೇವ್, ಹನೂರು ಬ್ಲಾಕ್ ಎಸ್ಸಿ ಘಟಕದ ಉಪಾಧ್ಯಕ್ಷ ಗೂಳ್ಯ ಕೃಷ್ಣ, ಮುಖಂಡರಾದ ಶ್ರೀನಿವಾಸ್ ಗೌಡ ,ನಟರಾಜು, ಸಮಿವುಲ್ಲಾ, ರವಿ, ಮರಿಗೌಡ ಸೈಯದ್ ಭಾಷಾ, ಚಿಕ್ಕಮಾದನಾಯಕ ಸೇರಿದಂತೆ ಇನ್ನಿತರರು ಹಾಜರಿದ್ದರು.