ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರಾಜ್ಯ ಸರ್ಕಾರ ಕದ್ದುಮುಚ್ಚಿ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ ಎಂದು ಆರೋಪಿಸಿ, ನೀರು ಬಿಡಲು ಆದೇಶ ನೀಡಿರುವ ಸಮಿತಿ ಹಾಗೂ ಪ್ರಾಧಿಕಾರದ ಕ್ರಮ ಖಂಡಿಸಿ ರಾಜ್ಯ ಬಿಜೆಪಿ ವತಿಯಿಂದ ಕೆಆರ್ ಎಸ್ ಗೆ ಮುತ್ತಿಗೆ ಹಾಕಲು ಯತ್ನಿಸಿದ ವೇಳೆ ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.

ತಾಲೂಕಿನ ಕೆಆರ್‌ಎಸ್ ನ ಗೇಟ್ ನ ಮುಂಭಾಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ಸಾವಿರಾರು ಮುಖಂಡರು ಹಾಗೂ ಕಾರ್ಯಕರ್ತರು ಕೆಆರ್‌ಎಸ್ ಚಲೋ ಜಾಥಾ ನಡೆಸಿದರು.

ಈ ಹಿಂದೆ ತಮಿಳುನಾಡಿಗೆ ಸರ್ಕಾರ ನೀರು ಹರಿಸಿದೆ. ಸೋಮವಾರದಿಂದ ನೀರು ಬಿಡುವ ಸೂಚನೆಯೂ ಇದೆ. ಇದರಿಂದ ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ಕಾವೇರಿ ನಿರ್ವಹಣಾ ಪ್ರಾಧಿಕಾರದ ಎತ್ತಿ ಹಿಡಿಯಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಯಾವುದೇ ಕಾರಣಕ್ಕೂ ನೀರು ಬಿಡುಗಡೆ ಮಾಡದಂತೆ ಆಗ್ರಹಿಸಿ ಕೆಆರ್‌ಎಸ್ ಬೃಂದಾವನದ ಪ್ರದೇಶ ದ್ವಾರದ ಎದುರು ಕೆಲಕಾಲ ಧರಣಿ ನಡೆಸಿ ಪ್ರತಿಭಟಿಸಿದರು.

ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸುತ್ತಿದೆ ಎಂದು ಕೆಆರ್‌ಎಸ್ ಅಣೆಕಟ್ಟೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಯಡಿಯೂರಪ್ಪ, ವಿಜಯೇಂದ್ರ, ಆರ್.ಅಶೋಕ್ , ಛಲವಾದಿ ನಾರಾಯಣಸ್ವಾಮಿ, ಸಿ.ಟಿ.ರವಿ ಸುಮಲತಾ, ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಇಂಡುವಾಳು ಸಚ್ಚಿದಾನಂದ ಸೇರಿದಂತೆ ಬಿಜೆಪಿ ಶಾಸಕರು, ನಾಯಕರು ಹಾಗೂ ಮುಖಂಡರನ್ನು ಪೊಲೀಸರು ಬಂಧಿಸಿ ಬೇರೆಡೆ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.


ಇದಕ್ಕೂ ಮುನ್ನ ಪ್ರತಿಭಟನೆ ವೇಳೆ ಬಿಜೆಪಿ ನಾಯಕ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಈಗಿನ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ರೈತರ ಬಗೆಗೆ ಕಾಳಜಿ ಇಲ್ಲ. ಒಂದು ವೇಳೆ ಕಾಳಜಿ ಇದ್ದಿದ್ದರೆ ಅಧಿಕಾರ ಹೋದರೂ ಸರಿ, ನೀರು ಬಿಡಲ್ಲ ಎಂದು ಹೇಳಬೇಕಿತ್ತು. ಅಲ್ಲದೆ ತಮಿಳುನಾಡಿನ ಸಿಎಂ ಅವರನ್ನು ಜಲಾಶಯಕ್ಕೆ ಕರೆತಂದು ವಾಸ್ತವ ತಿಳಿಸಿಕೊಡುವ ಕೆಲಸ ಮಾಡಬೇಕಿತ್ತು ಎಂದು ಕಿಡಿಕಾರಿದರು.

ಡಿ.ಕೆ.ಶಿವಕುಮಾರ್ ಅವರು ಯಾವ ಮುಖ ಇಟ್ಟುಕೊಂಡು ರಾಜಕೀಯ ದೊಂಬರಾಟ ಮಾಡ್ತಿದ್ದಾರೆ. ಅವರ ವಿರುದ್ಧ ಧಿಕ್ಕಾರ ಹೇಳಬೇಕಾಗುತ್ತದೆ. ದೆಹಲಿಯಲ್ಲಿ ರಾಹುಲ್ ಗಾಂಧಿ ಮನೆ ಬಾಗಿಲ ಕಾದು ಕುಳಿತಿರುವ ನಿಮಗೆ ರೈತರ ಹಿತ ಮುಖ್ಯ ಎಂದು ಕಾಣಿಸುತ್ತಿಲ್ಲ. ನೀವು ಯಾವುದೇ ಕಾರಣಕ್ಕೂ ನೀರು ಬಿಡಬಾರದು, ನೀವು ಪ್ರಾಮಾಣಿಕವಾಗಿದ್ದರೆ ಪ್ರಾಧಿಕಾರದ ಆದೇಶದ ವಿರುದ್ಧ ಸುಪ್ರಿಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬೇಕಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಕುರ್ಚಿ ಕಾಳಗದಲ್ಲಿ ನಿರತರಾಗಿ ರೈತ ಹಿತ ಮರೆತಿದೆ. ಕ್ಯಾಬಿನೆಟ್ ಎಕ್ಸ್ಪೆನ್ಸನ್ ಎಂದು ಸೋನಿಯಾ ಗಾಂದಿ, ರಾಹುಲ್ ಗಾಂಧಿ ಮನೆ ಬಾಗಿಲಲ್ಲಿ ಸಿಎಂ ನಿಂತಿದ್ದಾರೆ ಎಂದು ಲೇವಡಿ ಮಾಡಿದರು.

ಸಿಎಂ ಡಿಕೆಶಿ ಅವರು ತಮ್ಮ ಖುರ್ಚಿ ಉಳಿಸಿಕೊಳ್ಳಲು ಎಷ್ಟು ಬಾರಿ ಬೇಕಾದರೂ ದಹಲಿಗೆ ಹೋಗುತ್ತಾರೆ. ರೈತರ ನೀರಿನ ವಿಚಾರಕ್ಕೆ ಒಮ್ಮೆ ಕೂಡ ದೆಹಲಿಗೆ ಹೋಗಲಿಲ್ಲ. ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂಗೆ ಈಗ ಸರ್ವಪಕ್ಷ ಸಭೆ ಕರೆದಿದ್ದಾರೆ ಎಂದು ದೂರಿದರು.

ತಮಿಳುನಾಡಿನ ಸಿಎಂಗೆ ಖುಷಿ ಪಡಿಸಲು ನೀರು ಬಿಟ್ಟು ಈಗ ನಾಟಕ ಮಾಡಿ ರೈತರ ಮುಂದೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ನೀವು ತಮಿಳುನಾಡಿಗೆ ನೀರಿ ಬಿಟ್ಟಿದ್ದೀರಿ. ಖುರ್ಚಿ ಉಳಿಸಿಕೊಳ್ಳಲು ತಮಿಳುನಾಡು ಕೇಳುವ ಮುನ್ನವೇ ನೀರು ಬಿಟ್ಟಿದ್ದಾರೆ ಅನ್ನುವ ಅಪ ಕೀರ್ತಿ ನಿಮ್ಮದಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಸಿಎಂ ಸ್ಥಾನ ಉಳಿಸಿಕೊಳ್ಳುವ ಸಲುವಾಗಿ ಸರ್ವ ಪಕ್ಷ ಸಭೆ ಕರೆದಿದ್ದಾರೆ. ಸಿಎಂ ಸ್ಥಾನ ಹೋದರೂ ಪರವಾಗಿಲ್ಲ, ತಮಿಳುನಾಡಿಗೆ ನೀರು ಬಿಡಲ್ಲ ಎಂದು ಘೋಷಣೆ ಮಾಡಬೇಕು. ಆದರೆ, ಸಿಎಂಗೆ ಈ ಘೋಷಣೆ ಮಾಡಲು ತಾಕತ್ತು ಇಲ್ಲ ಎಂದು ಕಿಡಿಕಾರಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮವಾಗಿ 1500ಕ್ಕೂ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆ ಕೈಗೊಂಡಿದ್ದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ನಾರಾಯಣಗೌಡ, ಶಾಸಕರಾದ ನಾಗೇಂದ್ರ, ಶ್ರೀವತ್ಸ, ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ, ಈ.ಸಿ.ನಿಂಗರಾಜುಗೌಡ, ಅಶ್ವತ್ಥನಾರಾಯಣ, ಎಸ್.ಪಿ.ಸ್ವಾಮಿ, ಅಶೋಕ್ ಜಯರಾಂ, ಲಕ್ಷ್ಮಿ, ಅಶ್ವಿನಿಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಪೀಹಳ್ಳಿ ರಮೇಶ್, ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್ ಸೇರಿದಂತೆ ಜಿಲ್ಲೆಯ ಹಲವು ನಾಯಕರನ್ನು ಬಂಧಿಸಿ ಬಿಡುಗಡೆಗೊಳಿಸಿದರು. ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.