ಪೆಟ್ರೋಲ್, ಡೀಸೆಲ್ ಮಿತವಾಗಿ ಬಳಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ಅವರ ಕರೆಗೆ ಓಗೊಟ್ಟು ಸೈಕಲ್ ಹಾಗೂ ಬೈಕ್ ಮೂಲಕ ಪ್ರಯಾಣಿಸುತ್ತಿರುವ ಬಿಜೆಪಿ ನಾಯಕರು ಪ್ರಚಾರಕ್ಕಾಗಿ ಕೇವಲ ಎರಡು ದಿನ ಇದನ್ನು ಪಾಲಿಸಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಟೀಕಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪೆಟ್ರೋಲ್, ಡೀಸೆಲ್ ಮಿತವಾಗಿ ಬಳಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ಅವರ ಕರೆಗೆ ಓಗೊಟ್ಟು ಸೈಕಲ್ ಹಾಗೂ ಬೈಕ್ ಮೂಲಕ ಪ್ರಯಾಣಿಸುತ್ತಿರುವ ಬಿಜೆಪಿ ನಾಯಕರು ಪ್ರಚಾರಕ್ಕಾಗಿ ಕೇವಲ ಎರಡು ದಿನ ಇದನ್ನು ಪಾಲಿಸಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಟೀಕಿಸಿದ್ದಾರೆ.

ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ಸೇರಿ ಹಲವು ಬಿಜೆಪಿ ನಾಯಕರು ಸೈಕಲ್ ಮತ್ತು ಬೈಕ್ ಸವಾರಿ ಮಾಡುವ ಮೂಲಕ ಸುದ್ದಿಯಾಗಿದ್ದರು. ಆದರೆ ಈ ನಡೆ ಕೇವಲ ತೋರಿಕೆಯದ್ದು ಎಂದರು.

ಕೇವಲ ಒಂದು ಫೋಟೋ ತೆಗೆದುಕೊಳ್ಳುವ ಸಲುವಾಗಿ ಇಂತಹ ಗಿಮಿಕ್‌ಗಳನ್ನು ಮಾಡಲಾಗುತ್ತಿದೆ. ಸೈಕಲ್ ಅಥವಾ ಬೈಕ್‌ನಲ್ಲಿ ಹೋಗುವ ನಾಯಕರ ಮುಂದೆ ಕ್ಯಾಮೆರಾ ತಂಡ, ಅವರ ಹಿಂದೆ ಹತ್ತಾರು ಸುರಕ್ಷತಾ ವಾಹನಗಳ ದಂಡೇ ಇರುತ್ತದೆ. ಒಬ್ಬ ಮುಖ್ಯಮಂತ್ರಿಗೆ ಇಡೀ ರಾಜ್ಯದ ಜವಾಬ್ದಾರಿ ಇರುವುದರಿಂದ ಅವರಿಗೆ ಹೆಚ್ಚಿನ ಭದ್ರತೆಯ ಅಗತ್ಯವಿರುತ್ತದೆ. ಅವರು ವಾಹನದಲ್ಲಿದ್ದಾಗ ಇರುವ ಭದ್ರತೆಗಿಂತ, ಹೊರಗೆ ಸೈಕಲ್‌ ನಲ್ಲಿ ಹೋದಾಗ ಬೆಂಗಾವಲು ಪಡೆ ಮತ್ತು ಭದ್ರತೆಯ ವೆಚ್ಚ ದುಪ್ಪಟ್ಟಾಗುತ್ತದೆ ಎಂದು ಹೇಳಿದರು.

ಬಿಜೆಪಿ ನಾಯಕರ ಇಂತಹ ನಡೆಗಳನ್ನು ದಿನನಿತ್ಯದ ಆಡಳಿತದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಬಿ.ವೈ.ವಿಜಯೇಂದ್ರ ಅವರು ಕೂಡ ಇತ್ತೀಚೆಗೆ ಮೆಟ್ರೋದಲ್ಲಿ ಪ್ರಯಾಣಿಸಿ ಸುದ್ದಿಯಾಗಿದ್ದರು. ಆದರೆ ಮಾರನೇ ದಿನದಿಂದ ಯಥಾಸ್ಥಿತಿ ಮುಂದುವರಿದಿದೆ. ಸಮಯಕ್ಕೆ ಸರಿಯಾಗಿ ನ್ಯಾಯಾಲಯ ಹಾಗೂ ಪ್ರಮುಖ ಸಭೆಗಳಿಗೆ ಹಾಜರಾಗಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರು, ಕೇವಲ ಒಂದೆರಡು ದಿನಗಳ ಪ್ರಚಾರಕ್ಕಾಗಿ ಇಂತಹ ನಾಟಕ ಆಡುತ್ತಿದ್ದಾರೆ ಹೊರತು, ಇವುಗಳಿಂದ ಯಾವುದೇ ನೈಜ ಬದಲಾವಣೆ ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.ಸಿಎಂ ಗೊಂದಲ ಬೇಗ ಬಗೆಹರಿಯಲಿದೆ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮುಖ್ಯಮಂತ್ರಿ ಸ್ಥಾನದ ಕಗ್ಗಂಟಿನ ಕುರಿತು ಮಾತನಾಡಿದ ಅವರು, ಸಿಎಂ ಸ್ಥಾನದ ಬದಲಾವಣೆ ಅಥವಾ ಗೊಂದಲಗಳ ಬಗ್ಗೆ ನಾವೇನೂ ಹೇಳಲು ಸಾಧ್ಯವಿಲ್ಲ, ಅದನ್ನೆಲ್ಲ ಬೆಂಗಳೂರಿನವರೇ (ಹೈಕಮಾಂಡ್) ಹೇಳಬೇಕು. ಸಿಎಂ ಸ್ಥಾನದ ವಿಷಯ ಯಾವಾಗ ಇತ್ಯರ್ಥವಾಗುತ್ತದೆ ಎಂಬುದು ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ಇದು ನಮ್ಮ ವ್ಯಾಪ್ತಿಯಲ್ಲಿ ಬರುವ ವಿಚಾರವಲ್ಲ. ಸದ್ಯಕ್ಕೆ ಚುನಾವಣೆಗಳೆಲ್ಲ ಮುಗಿದಿರುವುದರಿಂದ ಈಗ ಬೇರೆ ಯಾವುದೇ ರಾಜಕೀಯ ಕೆಲಸಗಳಿಲ್ಲ. ಹೈಕಮಾಂಡ್ ಈಗ ಏನು ಮಾಡುತ್ತದೆ ಎಂದು ನೋಡಬೇಕಿದೆ. ಆದಷ್ಟು ಬೇಗ ಈ ಗೊಂದಲ ಬಗೆಹರಿಯಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ನಾವು ಕೂಡ ವೇಟ್ ಮಾಡ್ತಾ ಇದ್ದೇವೆ ಎಂದು ಸಚಿವರು ತಿಳಿಸಿದರು.

ಇದೇ ವೇಳೆ, ರಾಜ್ಯದಲ್ಲಿ ಅಧಿಕಾರಿಗಳು ಸಚಿವರು ಹಾಗೂ ಶಾಸಕರ ಮಾತು ಕೇಳುತ್ತಿಲ್ಲ ಎಂಬ ಆರೋಪವನ್ನು ಸತೀಶ ಜಾರಕಿಹೊಳಿ ತಳ್ಳಿ ಹಾಕಿದ ಅವರು, ಇದೆಲ್ಲ ಸಂಪೂರ್ಣ ಸುಳ್ಳು ಮಾಹಿತಿ, ಅಧಿಕಾರಿಗಳು ಜನಪ್ರತಿನಿಧಿಗಳ ಮಾತು ಕೇಳದೆ ಇರಲು ಸಾಧ್ಯವೇ ಇಲ್ಲ. ಅಧಿಕಾರಿಗಳಿಂದ ಎಲ್ಲಾ ಕೆಲಸಗಳು ಸುಲಲಿತವಾಗಿ ನಡೆಯುತ್ತಿವೆ. ಕಡತಗಳಿಗೆ (ಫೈಲ್) ಸಹಿ ಆಗುತ್ತಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ ಎಂದರು.ಬಾಕ್ಸ್‌

ಜನತೆ ಎಲ್ಲ ಪಕ್ಷವನ್ನು ಸೋಲಿಸಿದ್ದಾರೆ: ದೇಶದಾದ್ಯಂತ ಕಾಕ್ರೋಚ್ ಜನತಾ ಪಾರ್ಟಿ ಸದ್ದು ನಡೆದಿರುವ ಕುರಿತು ಮಾತನಾಡಿದ ಸಚಿವರು, ಜನ ಯಾವುದೇ ಪಕ್ಷಕ್ಕೆ ಒಂದು ಕಡೆ ಸಪೋರ್ಟ್‌ ಮಾಡುತ್ತಾರೆ. ಅದರೆ ನಿರ್ಲಕ್ಷ್ಯ ಮಿತಿ ಮೀರಿದರೆ ಹೀಗಾಗುತ್ತದೆ. ಹಿಂದೆ ಇತಿಹಾಸದಲ್ಲಿ ಎಲ್ಲ ಪಕ್ಷವನ್ನು ಜನರು ಸೋಲಿಸಿದ್ದಾರೆ. ಕಾಂಗ್ರೆಸ್‌ ನಲ್ಲಿ ಇಂದಿರಾ ಗಾಂಧಿ,. ವಾಜಪೇಯಿ, ಮೊರಾರ್ಜಿ ದೇಸಾಯಿ ಅವರನ್ನೂ ಸೋಲಿಸಿದ್ದಾರೆ. ಯಾವುದನ್ನೂ ಅಂಡರ್‌ ಎಸ್ಟಿಮೇಟ್ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಬೇಕು. ಯುವಕರಿಗೆ ಉದ್ಯೋಗ ಇಲ್ಲ, ಎಲ್ಲರೂ ಬೀದಿಗೆ ಬಂದಿದ್ದಾರೆ. ಆ ನಿಟ್ಟಿನಲ್ಲಿ ಉದ್ಯೋಗ ಕೊಡಿಸುವ ಪ್ರೋಗ್ರಾಮ್‌ ಗಳನ್ನು ಹಾಕಿಕೊಳ್ಳಬೇಕು. ಕೇವಲ ಮೂರು ದಿವಸದಲ್ಲಿ ಅಷ್ಟು ದೊಡ್ಡ ಸಂಚಲನ ಆಯಿತು. ಅಂದರೆ ಜನ ಅವಕಾಶಕ್ಕಾಗಿ ಕಾಯ್ತಾ ಇದ್ದಾರೆ. ಮೋದಿಯವರು ಹಾಗೂ ಮೋದಿಯವರ ಸರಕಾರ ಜನಕ್ಕೆ ಏನು ಬೇಕು ಆ ನಿಟ್ಟಿನಲ್ಲಿ ಕಾರ್ಯಕ್ರಮ ಹಾಕಿಕೊಂಡು ಕೆಲಸ ಮಾಡಬೇಕು. ಇಲ್ಲದಿದ್ದರೆ ಪರ್ಯಾಯವಾಗಿ ಈ ದೇಶದ ಜನ ಎಲ್ಲರಿಗೂ ಬುದ್ಧಿ ಕಲಿಸಿದ್ದಾರೆ. ಈಗಲೂ ಕಲಿಸುತ್ತಾರಷ್ಟೇ ಎಂದರು.