ಬಿಜೆಪಿ ನಾಯಕರು ನನ್ನನ್ನು ವಿಲನ್ ಮಾಡಿದ್ದಾರೆ: ಸಂಗಣ್ಣ ಕರಡಿ

| Published : Apr 19 2024, 01:03 AM IST

ಬಿಜೆಪಿ ನಾಯಕರು ನನ್ನನ್ನು ವಿಲನ್ ಮಾಡಿದ್ದಾರೆ: ಸಂಗಣ್ಣ ಕರಡಿ
Share this Article
  • FB
  • TW
  • Linkdin
  • Email

ಸಾರಾಂಶ

ನನಗೆ ಬಿಜೆಪಿ ಟಿಕೆಟ್‌ ತಪ್ಪಿದ್ದರಿಂದ ಕಾಂಗ್ರೆಸ್‌ ಸೇರಿಲ್ಲ. ಆದರೆ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ನಾನು ಪಕ್ಷಾಂತರ ಮಾಡಿದ್ದೇನೆ.

- ಪಕ್ಷದ ನಾಯಕರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು

- ನನ್ನ ಮಗ, ಸೊಸೆಗೆ ಟಿಕೆಟ್ ಬೇಕೆಂದು ನಾನು ಕೇಳಿರಲಿಲ್ಲ ಕನ್ನಡಪ್ರಭ ವಾರ್ತೆ ಕೊಪ್ಪಳ

ನನಗೆ ಬಿಜೆಪಿ ಟಿಕೆಟ್‌ ತಪ್ಪಿದ್ದರಿಂದ ಕಾಂಗ್ರೆಸ್‌ ಸೇರಿಲ್ಲ. ಆದರೆ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ನಾನು ಪಕ್ಷಾಂತರ ಮಾಡಿದ್ದೇನೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.

ಕಾಂಗ್ರೆಸ್ ಸೇರ್ಪಡೆಯಾದ ಮೇಲೆ ತಮ್ಮ ನಿವಾಸದಲ್ಲಿ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ ಜೊತೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬಿಜೆಪಿಯಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದು ನಿಜ ಎಂದರು.

ನನ್ನ ಮಗ ಮತ್ತು ಸೊಸೆಗೂ ನಾನು ಹಠ ಮಾಡಿ ಟಿಕೆಟ್ ಪಡೆದಿದ್ದೇನೆ ಎಂದು ತಪ್ಪಾಗಿ ಬಿಂಬಿಸಲಾಗಿದೆ. ಈ ವಿಷಯದಲ್ಲಿ ಬಿಜೆಪಿ ನಾಯಕರು ನನ್ನನ್ನು ವಿಲನ್ ಮಾಡಿದ್ದಾರೆ. ಆದರೆ, ವಾಸ್ತವ ಏನೆಂದರೆ ನಾನು ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ಕೇಳಿರಲೇ ಇಲ್ಲ. ಹಾಲಿ ಸಂಸದನಿದ್ದರೂ ನನ್ನ ಗಮನಕ್ಕ ತರದೆ ಸಿ.ವಿ. ಚಂದ್ರಶೇಖರಗೆ ಟಿಕೆಟ್ ಘೋಷಣೆ ಮಾಡಿದರು. ಇದು ನನ್ನನ್ನು ಕೆರಳಿಸಿತು. ಹಾಗೊಂದು ವೇಳೆ ನನ್ನ ಗಮನಕ್ಕೆ ತಂದು ಸಿವಿಸಿಗೆ ಟಿಕೆಟ್ ನೀಡಿದ್ದರೆ ನಾನು ವಿರೋಧ ಮಾಡುತ್ತಲೇ ಇರಲಿಲ್ಲ. ಆಗ ಆದ ಬೆಳವಣಿಗೆಯಲ್ಲಿ ನನ್ನ ಮಗನಿಗೆ ಟಿಕೆಟ್ ನೀಡಿದರು ಎಂದರು.

ಇದಾದ ಮೇಲೆ ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಕೊಪ್ಪಳದ ಟಿಕೆಟ್ ಫೈನಲ್‌ ಮಾಡುವುದರಲ್ಲಿ ನನ್ನನ್ನು ದೂರ ಇಟ್ಟರು. ನನ್ನ ಒಂದು ಮಾತು ಸಹ ಕೇಳಲಿಲ್ಲ. ಆಗ ಬಿಜೆಪಿ ನಾಯಕರೇ ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡಬೇಕು ಎಂದು ತೀರ್ಮಾನಿಸಿದ್ದರು. ಕೊನೆಗೆ ಯಾರು ಇಲ್ಲದಂತೆ ಆದಾಗ ಸಚಿವೆ ಶೋಭಾ ಕರಾಂದ್ಲಾಜೆ ಕರೆ ಮಾಡಿ, ಮಹಿಳಾ ಕೋಟಾದಲ್ಲಿ ನಿಮ್ಮ ಸೊಸೆಗೆ ಟಿಕೆಟ್ ನೀಡಿದ್ದೇವೆ ಎಂದರು. ಇದರಲ್ಲಿ ನನ್ನದೇನು ತಪ್ಪಿದೆ ಹೇಳಿ? ಎಂದು ಪ್ರಶ್ನೆ ಮಾಡಿದರು.

ನಾನು ಯಾರನ್ನೂ ಬೆಳೆಸಿಲ್ಲ ಎನ್ನುವುದು ಸರಿಯಲ್ಲ. ಬೆಳೆಯುವುದು ಅವರವರ ವೈಯಕ್ತಿಕ ವಿಷಯ. ನನ್ನ ಮಕ್ಕಳು ಸಹ ಅವರೇ ಬೆಳೆಯಬೇಕು, ನನ್ನ ಜೊತೆಗೆ ಇದ್ದವರು ಅವರೆ ಬೆಳೆಯಬೇಕು. ಯಾರು ಯಾರನ್ನೂ ಬೆಳೆಸಲು ಸಾಧ್ಯವಿಲ್ಲ ಎಂದರು.

ಸಿ.ಟಿ. ರವಿ ಸೇರಿದಂತೆ ಯಾರು ಏನು ಬೇಕಾದರೂ ಹೇಳಿಕೊಳ್ಳಲಿ, ಪೂಜಾರಿ ಬೇಡ ಎಂದಿದ್ದರೆ ಅಭ್ಯರ್ಥಿಗಳೇ ಇಲ್ಲದಂತೆ ಚುನಾವಣೆ ಮಾಡಬೇಕಿತ್ತು. ನನ್ನ ಅವಧಿಯಲ್ಲಿ ಕೆಲಸವಾಗಿದ್ದರೆ ನನ್ನ ಪ್ರಯತ್ನವೂ ಇದೆ. ಅದು ಕೇವಲ ಸರ್ಕಾರದಿಂದ ಆಗಿದೆ ಎಂದಲ್ಲ ಎಂದು ಕಿಡಿಕಾರಿದರು.

ನಾನು ಬಿಜೆಪಿಯಲ್ಲಿ ಇದ್ದಾಗಲೂ ಬಿಜೆಪಿ ಸರ್ಕಾರವನ್ನು ಟೀಕೆ ಮಾಡಿದ್ದೇನೆ. ನ್ಯಾಯಾಲಯ ಕಟ್ಟಡಕ್ಕೆ ಹಣ ಮಂಜೂರಾತಿ ವಿಳಂಬವಾದಾಗ ವೇದಿಕೆಯಲ್ಲಿ ನಮ್ಮ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದೇನೆ. ಅದೇನೇ ಇರಲಿ. ನಾನು ಬಿಜೆಪಿಯಲ್ಲಿದ್ದಾಗ ಏನು ಹೇಳಿದ್ದೇನೆ ಎನ್ನುವುದು ಮುಖ್ಯವಲ್ಲ. ಆಯಾ ಪಕ್ಷದಲ್ಲಿದ್ದಾಗ ಅದನ್ನೇ ಹೇಳಬೇಕಾಗುತ್ತದೆ. ಈಗ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ಎಂದರು.

ನಾನು ಜೀವನದಲ್ಲಿ ಎಲ್ಲವನ್ನು ಕಂಡಿದ್ದೇನೆ. ಆದರೆ, ಸಚಿವನಾಗಬೇಕು ಎಂದುಕೊಂಡಿದ್ದೆ, ಆಗಲಿಲ್ಲ. ನಾನು ಬಿಜೆಪಿಯಲ್ಲಿದ್ದಾಗಲೂ ರಾಜ್ಯಸಭಾ ಸದಸ್ಯನಾಗಬೇಕು ಎನ್ನುವುದು ನನ್ನ ಅಭಿಮಾನಿಗಳ ಬೇಡಿಕೆಯಾಗಿತ್ತೇ ಹೊರತು ನನ್ನ ಬೇಡಿಕೆ ಅಲ್ಲ. ಈಗಲೂ ನಾನು ಕಾಂಗ್ರೆಸ್‌ನ್ನು ಯಾವುದೇ ಬೇಡಿಕೆ ಇಲ್ಲದೆ ಸೇರಿದ್ದು, ಕಾಂಗ್ರೆಸ್‌ ನನ್ನ ಮೂಲ ಪಕ್ಷವಾಗಿದೆ. ಎಚ್.ಜಿ. ರಾಮುಲು ನನ್ನ ನಾಯಕರಾಗಿದ್ದಾರೆ. ಈಗ ಕಾಂಗ್ರೆಸ್‌ನಲ್ಲಿದ್ದು, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ ಎಂದರು.

ಕೊಪ್ಪಳದಲ್ಲಿ ಸ್ಪರ್ಧಿಸಬೇಕಿತ್ತು:

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ತಾಕತ್ತಿದ್ದರೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಕೊಪ್ಪಳದಲ್ಲಿಯೇ ಸ್ಪರ್ಧೆ ಮಾಡಬೇಕಿತ್ತು. ಅವರು ಅಭ್ಯರ್ಥಿಯನ್ನು ಯಾಕೆ ಹಾಕಲಿಲ್ಲ ಎಂದು ಪ್ರಶ್ನೆ ಮಾಡಿದರು.

ಕೊಪ್ಪಳದಲ್ಲಿ ಸ್ಪರ್ಧೆ ಮಾಡದಂತೆ ಅವರಿಗೆ ಯಾರು ಹೇಳಿಲ್ಲ, ಸುಮ್ಮನೇ ಹುಟ್ಟಿಸಿಕೊಂಡು ಹೇಳುವುದು ಸರಿಯಲ್ಲ. ಇನ್ನು ನಮ್ಮ ಠೇವಣಿ ಇಲ್ಲದಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಗೆಲ್ಲಿಸುವುದು, ಸೋಲಿಸುವುದು ಮತದಾರ ಪ್ರಭು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಯಾರೋ ಒಬ್ಬರಿಂದ ಸೋಲು, ಗೆಲುವು ಆಗುವುದಿಲ್ಲ ಎಂದರು.

ನಮ್ಮ ಹಾಗೂ ಕರಡಿ ಕುಟುಂಬ ಕಳೆದ ಮೂವತ್ತು ವರ್ಷಗಳಿಂದ ಪರಸ್ಪರ ಸ್ಪರ್ಧೆ ಮಾಡುತ್ತಾ ಬಂದಿವೆ. ನಮ್ಮ ನಡುವೆ ಯಾವುದೇ ರಾಜಕೀಯೇತರ ವೈಮನಸ್ಸು ಇರಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಗಣ್ಣ ಕೇವಲ ಒಬ್ಬ ವ್ಯಕ್ತಿಯಲ್ಲ, ಶಕ್ತಿ. ಅವರು ಬಂದಿದ್ದರಿಂದ ನಮಗೆ ಬಹಳ ಅನುಕೂಲವಾಗಿದ್ದು, ಅಧಿಕ ಲೀಡ್ ನಿಂದ ಗೆಲ್ಲಲ್ಲು ಸಹಕಾರಿಯಾಗಲಿದೆ ಎಂದರು.

ವಿ.ಆರ್. ಪಾಟೀಲ್, ಆಸಿಫ್ ಅಲಿ, ವೆಂಕನಗೌಡ ಹಿರೇಗೌಡ ಸೇರಿದಂತೆ ಅನೇಕರು ಇದ್ದರು.