ಧನಂಜಯ್‌ ಅವರ ವಿವಾದ ಹೇಳಿಕೆ ಇದೀಗ ತೀವ್ರ ಸ್ವರೂಪ

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಇಲ್ಲಿನ ಲಿಂಕ್‌ ರಸ್ತೆಯಲ್ಲಿರುವ ಮಸೀದಿ ಮುಂದೆ ಗಣೇಶೋತ್ಸವ ಮೆರವಣಿಗೆ ಹೋಗಬಾರದು ಎಂಬ ಇನ್ಸ್‌ ಪೆಕ್ಟರ್‌ ಧನಂಜಯ್‌ ಅವರ ವಿವಾದ ಹೇಳಿಕೆ ಇದೀಗ ತೀವ್ರ ಸ್ವರೂಪ ಪಡೆದಿಕೊಂಡಿದ್ದು, ಸೆ. 18 ರಂದು ಹಿಂದೂ ಜಾಗರಣ ವೇದಿಕೆಯು ಅದೇ ರಸ್ತೆಯಲ್ಲಿ ಶೋಭಾ ಯಾತ್ರೆ ನಡೆಸಲು ಸಜ್ಜಾಗುತ್ತಿದ್ದಾರೆ.ಪಟ್ಟಣದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಲಾಗಿದ್ದು. ಸೆ. 18 ರಂದು 5 ಸಾವಿರಕ್ಕೂ ಹೆಚ್ಚು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಲಿಂಕ್‌ ರಸ್ತೆಯಲ್ಲಿಯೇ ಮೆರವಣಿಗೆ ಮಾಡುವುದಾಗಿ ವೇದಿಕೆಯ ಅಧ್ಯಕ್ಷ ಮಹೇಶ್‌ ಹೇಳಿದ್ದಾರೆ.ಇನ್‌ಸ್ಪೆಕ್ಟರ್‌ ಧನಂಜಯ್‌ ಅವರು ಯುವಕರಿಗೆ ಯಾವ ರಸ್ತೆಯಲ್ಲಿ ಗಣೇಶನ ಮೆರವಣಿಗೆ ಹೋಗಬಾರದು ಎಂದು ಧಮ್ಕಿ ಹಾಕಿದ್ದರೋ ಅದೇ ರಸ್ತೆಯಲ್ಲೆ ಬೃಹತ್‌ ಶೋಭಾಯಾತ್ರೆ ಹೋಗಲಿದೆ ಎಂದು ಅವರು ತಿಳಿಸಿದ್ದಾರೆ.ಅಂದು ಸಂಜೆ 4ಕ್ಕೆ ಗಣಪತಿ ವಿಸರ್ಜನೆ ಹೊರಡಲಿದೆ, ವಿದ್ಯಾನಗರ ಪೊಲೀಸ್‌ ಠಾಣೆಯ ಸಮೀಪದಲ್ಲೆ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಈ ಸ್ಥಳದಲ್ಲೆ ಈ ಮೆರವಣಿಗೆ ಹೊರಡಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಶೋಭಾಯಾತ್ರೆಯಲ್ಲಿ ಬಿಜೆಪಿ ಮುಖಂಡರು ಭಾಗಿ18ರಂದು ನಡೆಯುವ ಬೃಹತ್‌ ಶೋಭಾಯಾತ್ರೆಯಲ್ಲಿ ಬಿಜೆಪಿ ಹಲವು ಮುಖಂಡರು ಹಾಗೂ ಹಿಂದೂ ಪರ ಸಂಘಟನೆಗಳು ಭಾಗವಹಿಸಲಿದ್ದು, ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌, ಸಂಸದ ಯದುವೀರ್‌, ಮಾಜಿ ಸಂಸದ ಪ್ರತಾಪ್‌ ಸಿಂಹ, ಶಾಸಕ ಶ್ರೀವತ್ಸ, ಪಟ್ಟಣದ ಬಿಜೆಪಿ ಮುಖಂಡರು, ಹಿಂದೂ ಕಾರ್ಯಕರ್ತರು ಹಲವಾರು ಮಂದಿ ಭಾಗವಹಿಸುವರು ಎನ್ನಲಾಗಿದೆ.ಅಂದು ಇನ್‌ಸ್ಪೆಕ್ಟರ್‌ ಅಲ್ಲಿ ಇರಬಾರದುಶೋಭಾಯಾತ್ರೆ ನಡೆಯುವ ದಿನದಂತ ಇನ್ಸ್‌ಪೆಕ್ಟರ್‌ ಧನಂಜಯ ಸ್ಥಳದಲ್ಲಿ ಇರಬಾರದು, ಅವರನ್ನು ಅಮಾನತು ಮಾಡಬೇಕು. ಅವರು ಮನೆಯಲ್ಲೆ ಕುಳಿತು ಈ ಶೋಭಾಯಾತ್ರೆ ನೋಡಿ ಕಣ್ತುಂಬಿಕೊಳ್ಳಲಿ ಎಂದು ಮಹೇಶ್‌ ಹೇಳಿದ್ದಾರೆ.ಗಣಪತಿ ಹಬ್ಬದ ಅಂಗವಾಗಿ ಇನ್ಸ್‌ಪೆಕ್ಟರ್‌ ಧನಂಜಯ್‌ ಇತ್ತೀಚೆಗೆ ಸಭೆ ನಡೆಸಿ ಲಿಂಕ್‌ ರಸ್ತೆಯಲ್ಲಿರುವ ಮಸೀದಿ ಮುಂದೆ ಗಣೇಶನ ಮೆರವಣಿಗೆ ಹೋಗಬಾರದೆಂದು ಎಚ್ಚರಿಕೆ ನೀಡಿದ್ದರು. ಈ ಹೇಳಿಕೆ ಖಂಡಿಸಿ ಇನ್‌ಸ್ಪೆಕ್ಟರ್‌ ವಿರುದ್ಧವಾಗಿ ಬಿಜೆಪಿಯ ಪ್ರತಿಪಕ್ಷದ ನಾಯಕ ಆರ್. ಅಶೋಕ್‌, ಸಂಸದ ಯದುವೀರ್‌ಕೃಷ್ಣದತ್ತ ಚಾಮರಾಜ ಒಡೆಯರ್‌, ಮಾಜಿ ಸಂಸದ ಪ್ರತಾಪ್‌ ಸಿಂಹ, ಶಾಸಕ ಟಿ.ಎಸ್‌. ಶ್ರೀವತ್ಸ ನೇತೃತ್ವದಲ್ಲಿ ಟಿ. ನರಸೀಪುರದಲ್ಲಿ ಭಾನುವಾರ ಬೃಹತ್‌ ಪ್ರತಿಭಟನೆ ನಡೆಸಿ, ಇನ್‌ಸ್ಪೆಕ್ಟರ್‌ ಅಮಾನತಿಗೆ ಒತ್ತಾಯಿಸಲಾಗಿತ್ತು.ಒಟ್ಟಿನಲ್ಲಿ ಇದೀಗ ಬಿಜೆಪಿ ಸೇರಿದಂತೆ ಹಿಂದೂ ಪರ ಸಂಘಟನೆಗಳು 18ರ ಸಂಜೆ 4 ಕ್ಕೆ ಬೃಹತ್‌ ಶೋಭಾಯಾತ್ರೆ ಸಿದ್ದತೆ ಮಾಡಿಕೊಂಡಿದೆ.ಹಿಂದಿನ ವರ್ಷದಂತೆ ಮೆರವಣಿಗೆ- ಎಸ್ಪಿಸಾರ್ವಜನಿಕರವಾಗಿ ಯಾವ ರೀತಿ ವರ್ತಿಸಬೇಕು, ಮಾತನಾಡಬೇಕು ಎಂಬ ಬಗ್ಗೆ ಇನ್‌ಸ್ಪೆಕ್ಟರ್‌ ಧನಂಜಯಗೆ ಬುದ್ಧಿ ಹೇಳಿರುವ ಮೈಸೂರು ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ಮಲ್ಲಿಕಾರ್ಜನ ಬಾಲದಂಡಿ ಅವರು, ಗಣೇಶ ಮೆರವಣಿಗೆಯೂ ಹಿಂದಿನ ವರ್ಷದಂತೆ ನಡೆಯುತ್ತದೆ. ಅದಕ್ಕಾಗಿ ಸೂಕ್ತ ಬಂದೋಬಸ್ತ್‌ ಮಾಡಲಾಗುವುದು ಎಂದು ತಿಳಿಸಿದ್ದಾರೆ.