ಪಾದಯಾತ್ರೆ ವೇಳೆ ಚನ್ನಪಟ್ಟಣದಲ್ಲಿ ದಳಪತಿಗಳನ್ನು ಕಾದು ಹೈರಾಣಾದ ಬಿಜೆಪಿ ನಾಯಕರು

| Published : Aug 06 2024, 12:33 AM IST

ಪಾದಯಾತ್ರೆ ವೇಳೆ ಚನ್ನಪಟ್ಟಣದಲ್ಲಿ ದಳಪತಿಗಳನ್ನು ಕಾದು ಹೈರಾಣಾದ ಬಿಜೆಪಿ ನಾಯಕರು
Share this Article
  • FB
  • TW
  • Linkdin
  • Email

ಸಾರಾಂಶ

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ - ಜೆಡಿಎಸ್ ನಡೆಸುತ್ತಿರುವ ಮೈಸೂರು ಚಲೋ 3ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಲು ಬಿಜೆಪಿ ನಾಯಕರು ಜೆಡಿಎಸ್ ನಾಯಕರನ್ನು ಚನ್ನಪಟ್ಟಣದಲ್ಲಿ ಕಾದು ಹೈರಾಣಾದ ಘಟನೆ ನಡೆಯಿತು.

ಆಂಜನೇಯಸ್ವಾಮಿಗೆ ಪೂಜೆ, ಕೆಂಗಲ್ ಹನುಮಂತಯ್ಯ ಸಮಾಧಿಗೆ ಪುಷ್ಪ ನಮನಚನ್ನಪಟ್ಟಣ: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ - ಜೆಡಿಎಸ್ ನಡೆಸುತ್ತಿರುವ ಮೈಸೂರು ಚಲೋ 3ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಲು ಬಿಜೆಪಿ ನಾಯಕರು ಜೆಡಿಎಸ್ ನಾಯಕರನ್ನು ಕಾದು ಹೈರಾಣಾದ ಘಟನೆ ನಡೆಯಿತು.

ಬಿಜೆಪಿ-ಜೆಡಿಎಸ್ ನಾಯಕರು ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆ ಸೋಮವಾರ ಮೂರನೇ ದಿನಕ್ಕೆ‌ ಕಾಲಿಟ್ಟಿದ್ದು, ಕೆಂಗಲ್ ಬಳಿಯಿಂದ ಚಾಲನೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ನಿಗದಿತ ಸಮಯಕ್ಕೆ ಜೆಡಿಎಸ್ ನಾಯಕರು ಬಾರದ ಕಾರಣ ಪಾದಯಾತ್ರೆ ತಡವಾಗಿ ಶುರುವಾಯಿತು.

ಕೆಂಗಲ್‌ನಲ್ಲಿರುವ ಆಂಜನೇಯ ದೇವಸ್ಥಾನದ ವೃತ್ತದಿಂದ ಬೆಳಿಗ್ಗೆ 9.30ಕ್ಕೆ ಪಾದಯಾತ್ರೆ ಪ್ರಾರಂಭವಾಗಬೇಕಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಅಶೋಕ್‌, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಹಲವು ನಾಯಕರು ಬೆಳಿಗ್ಗೆಯೇ ಕೆಂಗಲ್ ದೇಗುಲದ ಬಳಿಗೆ ಬಂದರು.

ವಿಧ ಕಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಸಹ ಆಗಮಿಸಿದ್ದರು. ಆದರೆ, ಜೆಡಿಎಸ್ ನ ಯಾವ ನಾಯಕರು ಸಹ ಕೆಂಗಲ್ ಬಳಿ ಸುಳಿದಿರಲಿಲ್ಲ. ಆಂಜನೇಯಸ್ವಾಮಿ ದರ್ಶನ ಪಡೆದ ಬಿಜೆಪಿ ನಾಯಕರು, ಪಾದಯಾತ್ರೆ ಆರಂಭಿಸುವುದಕ್ಕೆ ಜೆಡಿಎಸ್ ನಾಯಕರಾದ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರನ್ನು ಕಾದು ಹೈರಾಣಾದರು.

ಕೊನೆಗೆ ವಿಜಯೇಂದ್ರ, ಅಶ್ವತ್ಥ ನಾರಾಯಣ ಮತ್ತಿತರ ನಾಯಕರು ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಾಜಿ ಸಿಎಂ ದಿ.ಕೆಂಗಲ್‌ ಹನುಮಂತಯ್ಯ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿ 3ನೇ ದಿನದ ಪಾದಯಾತ್ರೆಗೆ ಚಾಲನೆ ನೀಡಿದರು.

ಆನಂತರ ಕೇಂದ್ರ ಸಚಿವ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಕ್ಷದ ನಾಯಕರೊಂದಿಗೆ ತಡವಾಗಿ ಕೆಂಗಲ್ ಗೆ ಆಗಮಿಸಿದರು. ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಕಾರ್ಯಕರ್ತರೊಂದಿಗೆ ಪ್ರತ್ಯೇಕವಾಗಿ ಪಾದಯಾತ್ರೆಯಲ್ಲಿ ಸಾಗಿದರು. ಡಿಕೆಶಿ ಗೊಡ್ಡು ಬೆದರಿಕೆಗೆ ಬಗ್ಗಲ್ಲ: ಎಚ್ಡಿಕೆಚನ್ನಪಟ್ಟಣ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಗೊಡ್ಡು ಬೆದರಿಕೆಗಳಿಗೆಲ್ಲ ನಾನು ಬಗ್ಗುವುದಿಲ್ಲ. ನನ್ನ ಬಗ್ಗೆ ಅದೇನು ಬಿಚ್ಚಿಡುತ್ತಾರೋ ಬಿಚ್ಚಿಡಲಿ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಮತ್ತೊಮ್ಮೆ ಸವಾಲು ಹಾಕಿದರು. ಮೈಸೂರು ಚಲೋ ಬಿಜೆಪಿ - ಜೆಡಿಎಸ್ ಪಾದಯಾತ್ರೆಯಲ್ಲಿ ಭಾಗವಹಿಸುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಬಗ್ಗೆ ಏನು ಬಿಚ್ಚಿಡುತ್ತಾರೋ ಬಿಚ್ಚಿಡಲಿ. ನನ್ನ ಹತ್ತಿರ ಇರುವ ದಾಖಲೆಗಳನ್ನು ತೆಗೆದರೆ ಈ ವ್ಯಕ್ತಿ ಮಾಡಿರುವ ಅವ್ಯವಹಾರದ ಸಂಪುಟವನ್ನೇ ಮಾಡಬಹುದು ಎಂದು ವಾಗ್ದಾಳಿ ನಡೆಸಿದರು.ತಪ್ಪು ಮಾಡಿಕೊಂಡು ಪ್ರಾಯಶ್ಚಿತ್ತ ಮಾಡಿಕೊಳ್ಳಲ್ಲ ಎಂದು ಡಿ.ಕೆ.ಶಿವಕುಮಾರ್ ಬಂಡತನದ ಮಾತಾಡುತ್ತಿದ್ದಾರೆ. ಅವರ ಮಾತಿಗೆ ಯಾರೂ ಗೌರವ ಕೊಡುತ್ತಿಲ್ಲ. ಈಗಿನ ಅವರ ಪರಿಸ್ಥಿತಿ ನೋಡಿದರೆ ನನಗೆ ಅಯ್ಯೋ ಅನಿಸುತ್ತದೆ. ರಾಜ್ಯದ ಉಪಮುಖ್ಯಮಂತ್ರಿಯಾಗಿ ಜನರ ಸಮಸ್ಯೆ ಬಗೆಹರಿಸುವುದು ಬಿಟ್ಟು ನನ್ನನ್ನು ಗುಣಗಾನ ಮಾಡಿಕೊಂಡು ಕೂತಿದ್ದಾರೆ. ಮಾತನಾಡಲು ಶಕ್ತಿ ಇಲ್ಲದೆ ಹುಚ್ಚರಂತೆ ಪದ ಬಳಕೆ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಟೀಕಿಸಿದರು.ಅಲ್ಲಿ ಯಾದಗಿರಿಯಲ್ಲಿ ಪಿಎಸ್​ಐ ಪತ್ನಿ ಕಣ್ಣೀರು ಇಡುತ್ತಿದ್ದಾಳೆ. ಮೃತ ಪಿಎಸ್​ಐ ಪತ್ನಿಗೆ ನ್ಯಾಯಕೊಡಿಸಲು ಈ ಸರ್ಕಾರಕ್ಕೆ ಆಗಿಲ್ಲ. ಮೊದಲು ಈ ಸರ್ಕಾರ ಆಕೆಗೆ ನ್ಯಾಯ ಒದಗಿಸುವ ಕೆಲಸ ಮಾಡಲಿ ಎಂದರು.ಕೈ ಸರ್ಕಾರ ಪತನ: ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಇದು ಪತನವಾಗುವ ಸಮಯ ಹತ್ತಿರವಾಗಿದೆ. ಅಧಿಕಾರ ಮಾಡಲು ನಿಮಗೆ (ಕಾಂಗ್ರೆಸ್​​ ನವರಿಗೆ) ಯೋಗ್ಯತೆ ಇದೆಯಾ? ಯಡಿಯೂರಪ್ಪರನ್ನು ನಾನು ಜೈಲಿಗೆ ಕಳುಹಿಸಿಲ್ಲ, ಅವತ್ತಿನ ಸಂದರ್ಭದಲ್ಲಿ ವಿಚಾರ ಹಾಗಿತ್ತು ಎಂದು ಕುಮಾರಸ್ವಾಮಿ ಹೇಳಿದರು.

ಬೊಂಬೆನಾಡಲ್ಲಿ ೨೦ ಕಿ.ಮೀ. ಸಾಗಿದ ಪಾದಯಾತ್ರೆಚನ್ನಪಟ್ಟಣ: ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಖಂಡಿಸಿ, ಮುಡಾ ಹಗರಣದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಎನ್‌ಡಿಎ ಅಂಗಪಕ್ಷಗಳಾದ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಬೊಂಬೆನಾಡು ಚನ್ನಪಟ್ಟಣ ಪ್ರವೇಶಿಸಿ, ಮೂರನೇ ದಿನ ಪಾದಯಾತ್ರೆಗೆ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಚಾಲನೆ ನೀಡಲಾಯಿತು. ಸುಮಾರು ೨೦ಕಿ.ಮೀ ದೂರ ಪಾದಯಾತ್ರೆ ಸಾಗಿತು. ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ೧೧ ಗಂಟೆಗೆ ಪೂಜೆ ಸಲ್ಲಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಂತರ ವಿಧಾನಸೌಧ ನಿರ್ಮಾತೃ ಮಾಜಿ ಸಿಎಂ ಕೆಂಗಲ್ ಹನುಮಂತಯ್ಯನವರ ಸಮಾಧಿಗೆ ಪೂಜೆ ಸಲ್ಲಿಸಿ ಪಾದಯಾತ್ರೆಗೆ ಚಾಲನೆ ನೀಡಿದರು. ಬಳಿಕ ನಗರದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಎನ್‌ಡಿಎ ನಾಯಕರು ಪುಷ್ಪನಮನ ಸಲ್ಲಿಸಿದರು.ಇನ್ನು ಪಾದಯಾತ್ರೆಗೆ ಜೆಡಿಎಸ್ ನಾಯಕರಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಇತರರು ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಪಾದಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿಯವರಿಗೆ ಪ್ರತ್ಯೇಕ ಸೇಬಿ ಹಾರ ಹಾಕಿ, ಹೂಮಳೆ ಸುರಿಸಿ ಸ್ವಾಗತಿಸಲಾಯಿತು. ಪಾದಯಾತ್ರಿಗಳಿಗೆ ಕೆಂಗಲ್ ಆಂಜನೇಯ ದೇವಸ್ಥಾನದ ಬಳಿ ಬೆಳಗಿನ ಉಪಾಹಾರ, ಸ್ಪಲ್ಪ ಮುಂದೆ ಹಾಗೂ ಬಸ್‌ ನಿಲ್ದಾಣದಿಂದ ಮುಂದೆ ಕಾಫಿ, ಟೀ, ನೀರಿನ ವ್ಯವಸ್ಥೆ ಮಾಡಲಾಗಿತ್ತು. ತಾಲೂಕಿನ ದೊಡ್ಡಮಳೂರು ಹಾಗೂ ಬೈರಾಪಟ್ಟಣದ ಮಧ್ಯದಲ್ಲಿ ಹಳೇ ಬೆಂ-ಮೈ ಹೆದ್ದಾರಿಯಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ನಗರದ ತಾಲೂಕು ಕಚೇರಿ ಬಳಿ ತೆರೆದ ವಾಹನದಲ್ಲಿ ಜನರನ್ನುದ್ದೇಶಿಸಿ ಭಾಷಣ ಮಾಡಿದ ಎನ್‌ಡಿಎ ನಾಯಕರು ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಪಾದಯಾತ್ರೆಗೆ ಎಂಟ್ರಿ ಕೊಟ್ಟ ಸಿಪಿ ಯೋಗೇಶ್ವರ್‌ಚನ್ನಪಟ್ಟಣ: ಕಳೆದ ಎರಡು ದಿನಗಳಿಂದ ಪಾದಯಾತ್ರೆಯಿಂದ ದೂರ ಉಳಿದಿದ್ದ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ 3ನೇ ದಿನದ ಪಾದಯಾತ್ರೆಯಲ್ಲಿ ಮಾಜಿ ಡಿಸಿಎಂ ಅಶ್ವತ್ಥನಾರಾಯಣ, ವಿರೋಧ ಪಕ್ಷದ ನಾಯಕ ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೊಂದಿಗೆ ಕೆಲ ಕಾಲ ಹೆಜ್ಜೆ ಹಾಕಿ, ತಂದೆಯ ಪುಣ್ಯಕಾರ್ಯದ ಕೆಲಸದ ನಿಮಿತ್ತ ಹೊರಬಂದರು. ಮಾಧ್ಯಮದೊಂದಿಗೆ ಮಾತನಾಡಿದ ಯೋಗೇಶ್ವರ್, ನನ್ನ ತಂದೆಯ ಪುಣ್ಯಕಾರ್ಯವಿರುವುದಿಂದ ಪಾದಯಾತ್ರೆಯಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಪಾದಯಾತ್ರೆ ಇಂದು ನನ್ನ ಸ್ವಕ್ಷೇತ್ರ ಪ್ರವೇಶಿಸಿದ್ದು, ಎಲ್ಲ ನಾಯಕರಿಗೆ ಶುಭಕೋರಿದ್ದೇನೆ. ಮೈತ್ರಿ ಆಗಬೇಕು ಎಂದುಕೊಂಡವರಲ್ಲಿ ಮೊದಲಿಗೆ ನಾನು ನಾವು ಕಟ್ಟಿದ ಮನೆಯಲ್ಲಿ ಕೆಲವೊಮ್ಮೆ ವಾಸಿಸಲು ಆಗುವುದಿಲ್ಲ. ನನ್ನ ಸ್ಪರ್ಧೆ ಕುರಿತಂತೆ ಸಮಾನ ಮನಸ್ಕ ವೇದಿಕೆಯವರು ಸಭೆ ಕರೆದಿದ್ದಾರೆ. ನಾನು ಭಾಗಿಯಾಗುತ್ತಿಲ್ಲ ಆದರೆ, ಬೆಂಬಲಿಸಿದ್ದೇನೆ. ಸಭೆ ಮುಗಿದ ಮೇಲೆ ರಾಜಕೀಯ ನಡೆ ಕುರಿತು ತೀರ್ಮಾನಿಸುತ್ತೇನೆ. ಇದು ಟಿಕೆಟ್ ಕುರಿತು ಘೋಷಣೆ ಮಾಡುವ ವೇದಿಕೆ ಅಲ್ಲ. ಇನ್ನು ಚುನಾವಣೆಗೆ ಸಾಕಷ್ಟು ದಿನವಿದೆ. ವರಿಷ್ಠರು ಏನು ತೀರ್ಮಾನ ಮಾಡುತ್ತಾರೋ ನೋಡೋಣ ಎಂದು ಸುದ್ದಿಗಾರರ ಪ್ರಶ್ನಿಗೆ ಉತ್ತರಿಸಿದರು.