ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗಭಾರೀ ಕುತೂಹಲ ಮೂಡಿಸಿದ್ದ ಶಿಮುಲ್ ಆಡಳಿತ ಮಂಡಳಿ ನಿರ್ದೇಶಕ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಬೆಂಬಲಿತ 9 ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸೋಲಿನ ಬಳಿಕ ಬಿಜೆಪಿ ಪಕ್ಷಕ್ಕೆ ಶಿಮುಲ್ ಚುನಾವಣೆಯಲ್ಲೂ ಹಿನ್ನಡೆಯಾಗಿದ್ದು, ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ತೀವ್ರ ಮುಖಭಂಗವಾಗಿದೆ. ಡಿಸಿಸಿ ಬ್ಯಾಂಕ್ ಗೆಲುವಿನ ಬಳಿಕ ಶಿಮುಲ್ ಚುನಾವಣೆಯಲ್ಲೂ ಆರ್.ಎಂ.ಮಂಜುನಾಥ್ ಗೌಡ ಅವರ ಬಣಕ್ಕೆ ಭರ್ಜರಿ ಗೆಲುವು ದಕ್ಕಿದ್ದು, 14 ಸ್ಥಾನಗಳ ಪೈಕಿ ಆರ್.ಎಂ.ಮಂಜುನಾಥ್ ಗೌಡ ಹಾಗೂ ವಿದ್ಯಾಧರ್ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ 12 ಸ್ಥಾನಕ್ಕೆ ಬುಧವಾರ ಚುನಾವಣೆ ನಡೆದಿತ್ತು.ಒಟ್ಟು 14 ಸ್ಥಾನಗಳ ಪೈಕಿ 9 ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಉಳಿದ 5 ಕ್ಷೇತ್ರದಲ್ಲಿ 3ರಲ್ಲಿ ಬಿಜೆಪಿ, 1 ಜೆಡಿಎಸ್ ಇನ್ನುಳಿದ ಒಂದು ಸ್ಥಾನದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗೆ ಗೆಲುವಾಗಿದೆ. ಇತ್ತ ಬಿಜೆಪಿ ಬಂಡಾಯವಾಗಿ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಯೂ ಕಾಂಗ್ರೆಸ್‌ಗೆ ಬೆಂಬಲ ನೀಡುವ ಇಚ್ಚೇ ತೋರಿರುವುದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ 10ಕ್ಕೆ ಏರುವ ಸಾಧ್ಯತೆ ಹೆಚ್ಚಿದೆ. 12 ನಿರ್ದೇಶಕರ ಸ್ಥಾನಕ್ಕೆ ಪೈಕಿ 31 ಮಂದಿ ಸ್ಪರ್ಧಿಸಿದ್ದರು. ಮಾಚೇನಹಳ್ಳಿ ಶಿಮುಲ್ ಕೇಂದ್ರ ಕಛೇರಿಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೂ ಮತದಾನ ನಡೆಯಿತು. ಶಿವಮೊಗ್ಗ ವಿಭಾಗದ 264 ಮತಗಳ ಪೈಕಿ 264 ಮತಗಳು, ಸಾಗರ ವಿಭಾಗದ 256 ಮತಗಳ ಪೈಕಿ 255 ಮತಗಳು, ದಾವಣಗೆರೆ ವಿಭಾಗದ 362 ಮತಗಳ ಪೈಕಿ 361 ಮತಗಳು ಮತ್ತು ಚಿತ್ರದುರ್ಗ ವಿಭಾಗದ 289 ಮತಗಳ 289 ಮತಗಳು ಚಲಾವಣೆಯಾಗಿವೆ. ಒಟ್ಟಾರೆ 1171 ಮತಗಳ ಪೈಕಿ 1169 ಮತಗಳು ಚಲಾವಣೆಯಾಗಿ ಶೇ.99.83ರಷ್ಟು ಮತದಾನ ನಡೆಯಿತು. ನಂತರ ಎಣಿಕೆ ಕಾರ್ಯ ಆರಂಭಗೊಂಡು ಫಲಿತಾಂಶ ಸಹ ಪ್ರಕಟಗೊಂಡಿತು. ಶಿವಮೊಗ್ಗ ವಿಭಾಗದಿಂದ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ, ಹಿರಿಯ ಸಹಕಾರಿ ಧುರೀಣ ಆರ್.ಎಂ. ಮಂಜುನಾಥ್ ಗೌಡ ಅವಿರೋಧ ಆಯ್ಕೆಯಾಗಿದ್ದು, ಭದ್ರಾವತಿ ತಾಲೂಕಿನಿಂದ ಸ್ಪರ್ಧಿಸಿದ್ದ ಒಕ್ಕೂಟದ ಮಾಜಿ ಅಧ್ಯಕ್ಷ ಡಿ. ಆನಂದ್ ಮತ್ತೊಮ್ಮೆ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ತಾಲೂಕಿನಿಂದ ಸ್ಪರ್ಧಿಸಿದ್ದ ಎಚ್.ಬಿ ದಿನೇಶ್ ಹೆಚ್ಚಿನ ಮತಗಳ ಮೂಲಕ ಗೆಲುವು ಸಾಧಿಸಿ ಆಯ್ಕೆಯಾಗಿದ್ದಾರೆ. ಸಾಗರ ವಿಭಾಗದಿಂದ ವಿದ್ಯಾಧರ್ ಅವಿರೋಧವಾಗಿ ಪುನರ್ ಆಯ್ಕೆಯಾಗಿದ್ದು, ಉಳಿದಂತೆ ಟಿ.ಶಿವಶಂಕರಪ್ಪ ಮತ್ತು ಟಿ.ಎಸ್.ದಯಾನಂದ ಗೌಡ್ರು ಆಯ್ಕೆಯಾಗಿದ್ದಾರೆ. ದಾವಣಗೆರೆ ವಿಭಾಗದಿಂದ ಒಕ್ಕೂಟದ ಮಾಜಿ ಉಪಾಧ್ಯಕ್ಷ ಎಚ್.ಕೆ.ಬಸಪ್ಪ ಪುನರ್ ಆಯ್ಕೆಯಾಗಿದ್ದಾರೆ. ಉಳಿದಂತೆ ಜಗದೀಶಪ್ಪ ಬಣಕಾರ್, ಚೇತನ್ ಎಸ್.ನಾಡಿಗೇರ್ ಮತ್ತು ಬಿ.ಜಿ. ಬಸವರಾಜಪ್ಪ ಆಯ್ಕೆಯಾಗಿದ್ದಾರೆ. ಚಿತ್ರದುರ್ಗ ವಿಭಾಗದಿಂದ ಜಿ.ಪಿ ರೇವಣಸಿದ್ದಪ್ಪ, ಶೇಖರಪ್ಪ ಜಿ.ಬಿ, ಸಂಜೀವಮೂರ್ತಿ ಮತ್ತು ಬಿ.ಆರ್.ರವಿಕುಮಾರ್ ಆಯ್ಕೆಯಾಗಿದ್ದಾರೆ.ಸಹಕಾರ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆಲೋಕಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಗೆದ್ದು ಬೀಗಿದ್ದ ಬಿಜೆಪಿಗೆ ಸಹಕಾರ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸೋಲಿನ ಬಳಿಕ ಶಿಮುಲ್ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದ ಬಿಜೆಪಿಗೆ ಮತ್ತೆ ಹಿನ್ನಡೆಯಾಗಿದೆ. ಡಿಸಿಸಿ ಬ್ಯಾಂಕ್ ಚುನಾವಣೆ ಸೋಲಿನ ಬೆನ್ನಲ್ಲೆ ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಕಾರ್ಯಕಾರಣಿ ಸಭೆಯಲ್ಲಿ ಶಿಮುಲ್ ಚುನಾವಣೆಯಲ್ಲಿ ಪಕ್ಷ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಿಗೆ ಸೂಚನೆಯೂ ನೀಡಲಾಗಿತ್ತು. ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರ ಪ್ರಚಾರವೂ ನಡೆದಿತ್ತು. ಆದರೂ ಶಿಮುಲ್ ಚುನಾವಣೆಯಲ್ಲಿ ಬಿಜೆಪಿ ಮುಖಭಂಗ ಅನಭವಿಸುವಂತಾಗಿದೆ.ಶಿಮುಲ್ ಮಾಜಿ ಅಧ್ಯಕ್ಷ, ಉಪಾಧ್ಯಕ್ಷ ಪುನರಾಯ್ಕೆ5 ವರ್ಷಗಳ ಅವಧಿಗೆ ಬುಧವಾರ ನಡೆದ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯ ಶಿವಮೊಗ್ಗ ಹಾಲು ಒಕ್ಕೂಟ(ಶಿಮುಲ್)ದ ಆಡಳಿತ ಮಂಡಳಿ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷ ಡಿ.ಆನಂದ್, ಮಾಜಿ ಉಪಾಧ್ಯಕ್ಷ ಎಚ್.ಕೆ ಬಸಪ್ಪ ಸೇರಿದಂತೆ ಪ್ರಮುಖರು ಪುನರ್ ಆಯ್ಕೆಯಾಗಿದ್ದಾರೆ.