ಕಂಪ್ಲಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ

| Published : Aug 15 2024, 01:52 AM IST

ಕಂಪ್ಲಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಕೋರ್ಟ್ ತಡೆಯಾಜ್ಞೆ
Share this Article
  • FB
  • TW
  • Linkdin
  • Email

ಸಾರಾಂಶ

ಆ.5ರಂದು ರಾಜ್ಯ ಸರ್ಕಾರ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲು ಪ್ರಕಟಿಸಿತ್ತು.

ಕಂಪ್ಲಿ: ಸ್ಥಳೀಯ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿದ್ದು, ಜಿಲ್ಲಾಧಿಕಾರಿ ಆದೇಶದಂತೆ ಆಗಸ್ಟ್‌ 21ಕ್ಕೆ ಚುನಾವಣೆ ದಿನಾಂಕ ನಿಗದಿಯಾಗಿತ್ತು. ಇದೀಗ ಮೀಸಲಾತಿ ವಿಚಾರವಾಗಿ ಧಾರವಾಡ ಹೈಕೋರ್ಟ್‌ನಿಂದ ತಡೆಯಾಜ್ಞೆ ಜಾರಿಯಾಗಿದ್ದು, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಆಕಾಂಕ್ಷಿಗಳಲ್ಲಿ ಆತಂಕ ಹೆಚ್ಚಿದೆ.

ಆ.5ರಂದು ರಾಜ್ಯ ಸರ್ಕಾರ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲು ಪ್ರಕಟಿಸಿತ್ತು. ಇದರಂತೆ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಆ.21ಕ್ಕೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯನ್ನು ನಿಗದಿಪಡಿಸಲಾಗಿತ್ತು.

ತಡೆಯಾಜ್ಞೆ:

ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ 2011ರಲ್ಲಿ ಎಸ್ಟಿ ಮಹಿಳೆ ವರ್ಗಕ್ಕೆ ಮೀಸಲು ಪ್ರಕಟವಾಗಿತ್ತು. ಅಂದು ಎಚ್.ಹೇಮಾವತಿ ಪೂರ್ಣಚಂದ್ರ ಅಧ್ಯಕ್ಷರಾಗಿ ಅಧಿಕಾರ ವಹಿಸಿದ್ದರು. 2014ರಲ್ಲಿ ಒಬಿಸಿ ಮಹಿಳೆ, 2017ರಲ್ಲಿ ಸಾಮಾನ್ಯ ವರ್ಗ, 2020ರಲ್ಲಿ ಸಾಮಾನ್ಯ ಮಹಿಳೆ ವರ್ಗಕ್ಕೆ ಮೀಸಲಾತಿ ಪ್ರಕಟವಾಗಿತ್ತು. ಈವರೆಗೂ ಎಸ್ಟಿ ವರ್ಗಕ್ಕೆ ಮೀಸಲಾತಿ ಪ್ರಕಟವಾಗಿಲ್ಲ. ಈ ಬಾರಿಯೂ ಸಾಮಾನ್ಯ ವರ್ಗಕ್ಕೆ ಮೀಸಲಾತಿ ಪ್ರಕಟವಾಗಿದೆ. ಇದನ್ನು ಪ್ರಶ್ನಿಸಿ ಹಾಗೂ ಎಸ್ಟಿ ವರ್ಗಕ್ಕೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪುರಸಭೆ ಸದಸ್ಯ ಎನ್.ರಾಮಾಂನೇಯಲು ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದರು. ಈ ಕುರಿತು ಕೋರ್ಟ್ ಆ.14ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ತಡೆಯಾಜ್ಞೆ ನೀಡಿದೆ.

ಆಕಾಂಕ್ಷಿಗಳಲ್ಲಿ ಆತಂಕ:

ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಇತ್ತ ಎರಡು ಪಕ್ಷಗಳ ಆಕಾಂಕ್ಷಿಗಳ ರಾಜಕೀಯ ಚಟುವಟಿಕೆ ಚುರುಕು ಪಡೆದಿದೆ. ತಾವು ಅಧಿಕಾರಕ್ಕೆ ಬರಲು ಕಸರತ್ತು ನಡೆಸುವ ಮೂಲಕ ಆ.21ರ ಚುನಾವಣೆ ದಿನಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದರು. ಇದೀಗ ಕೋರ್ಟ್ ತಡೆಯಾಜ್ಞೆ ನೀಡಿದ್ದು ತಮ್ಮೆಲ್ಲ ಪ್ರಯತ್ನಗಳು ವ್ಯರ್ಥವಾಯಿತೇ ಎಂಬ ಆತಂಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಕಾಂಕ್ಷಿಗಳಲ್ಲಿ ಉಂಟಾಗಿದೆ.

2011ರಲ್ಲಿ ಎಸ್ಟಿ ಮಹಿಳೆ ವರ್ಗಕ್ಕೆ ಮೀಸಲಾತಿ ನೀಡಿದ್ದು ಹೊರತುಪಡಿಸಿ ಈವರೆಗೂ ಎಸ್ಟಿ ವರ್ಗಕ್ಕೆ ಮೀಸಲು ಪ್ರಕಟವಾಗಿಲ್ಲ. ಈ ಬಾರಿ ಮತ್ತೆ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನದ ಮೀಸಲು ಪ್ರಕಟವಾಗಿದೆ. ಎಸ್ಟಿ ವರ್ಗಕ್ಕೆ ಮೀಸಲು ನೀಡುವ ಕುರಿತು ಕೋರ್ಟ್ ಮೊರೆ ಹೋಗಿದ್ದು ಇದೀಗ ತಡೆಯಾಜ್ಞೆ ಬಂದಿದೆ ಎನ್ನುತ್ತಾರೆ ಪುರಸಭೆ ಸದಸ್ಯ (ಅಧ್ಯಕ್ಷ ಸ್ಥಾನ ಆಕಾಂಕ್ಷಿ) ಎನ್.ರಾಮಾಂಜನೇಯ.