ಸಾರಾಂಶ
ಮಹಿಳೆಯರಿಗೆ ಬಿಜೆಪಿ ಉತ್ತಮ ಅವಕಾಶಗಳು ಮತ್ತು ಜವಾಬ್ದಾರಿಯನ್ನು ನೀಡಿದೆ. ಆದರೆ ಕಾಂಗ್ರೆಸ್ ಮಹಿಳೆಯನ್ನು ಅವಮಾನಿಸುತ್ತಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ದ.ಕ. ಜಿಲ್ಲಾಧ್ಯಕ್ಷೆ ಮಂಜುಳಾ ರಾವ್ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ಧೇಶ್ವರ ಕುರಿತು ಕಾಂಗ್ರೆಸ್‌ನ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವಹೇಳನಕಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್ ಆಕ್ಷೇಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗಾಯತ್ರಿ ಸಿದ್ದೇಶ್ವರ ಅಡುಗೆ ಮಾಡುವುದಕ್ಕಷ್ಟೇ ಲಾಯಕ್ಕು, ರಾಜಕೀಯಕ್ಕೆ ಅಲ್ಲ’ ಎಂದು ಶಾಮನೂರು ಶಿವಶಂಕರಪ್ಪ ಹೇಳಿಕೆ ನೀಡಿರುವುದು ಮಹಿಳೆಯರ ಬಗ್ಗೆ ಕಾಂಗ್ರೆಸ್‌ಗೆ ಇರುವ ಗೌರವವನ್ನು ಸೂಚಿಸುತ್ತದೆ ಎಂದರು.
ಮಹಿಳೆಯರು ಈಗ ಅಡುಗೆ ಮನೆಗೆ ಮಾತ್ರ ಸೀಮಿತವಾಗಿಲ್ಲ. ಅಬ್ಬಕ್ಕ, ರಾಣಿ ಚೆನ್ನಮ್ಮರಂಥ ಮಹಿಳೆಯರು ರಾಜ್ಯಾಡಳಿತ ಮಾಡಿದ್ದು, ಆಡಳಿತ ಮಹಿಳೆಯರಿಂದಲೂ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಿಂದೆ ವಿದೇಶಾಂಗ ಸಚಿವೆಯಾಗಿ ಸುಷ್ಮಾ ಸ್ವರಾಜ್ ಸಮರ್ಥ ಆಡಳಿತ ನೀಡಿದ್ದಾರೆ. ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿರುವುದು ಬಿಜೆಪಿ ಎಂದು ಹೇಳಿದರು.ಮಹಿಳೆಯರಿಗೆ ಬಿಜೆಪಿ ಉತ್ತಮ ಅವಕಾಶಗಳು ಮತ್ತು ಜವಾಬ್ದಾರಿಯನ್ನು ನೀಡಿದೆ. ಆದರೆ ಕಾಂಗ್ರೆಸ್ ಮಹಿಳೆಯನ್ನು ಅವಮಾನಿಸುತ್ತಿದೆ ಎಂದು ಮಂಜುಳಾ ರಾವ್ ಆರೋಪಿಸಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್, ಉಪ ಮೇಯರ್ ಸುನೀತಾ, ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ, ಕೋಶಾಧಿಕಾರಿ ಸುಮನ ಶರಣ್ ಹಾಗೂ ಅಶಿತಾ ಶೆಟ್ಟಿ ಇದ್ದರು.---------------ಗೃಹಲಕ್ಷ್ಮಿ ನಿಲ್ಲಿಸಬೇಕು: ಸುಮನ ಶರಣ್
ಗೃಹಲಕ್ಷ್ಮಿಯಂಥ ಬಿಟ್ಟಿ ಭಾಗ್ಯ ಕೊಡುವುದನ್ನು ನಿಲ್ಲಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿ ಸುಮನ ಶರಣ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಹಣ ಪಡೆದವರೆಲ್ಲ ಈ ಬಾರಿ ಬಿಜೆಪಿಗೆ ಓಟು ಹಾಕಲಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ. ಶಾಸಕರಿಗೆ ಅನುದಾನ ಬರುತ್ತಿಲ್ಲ. ಇಂಥ ಬಿಟ್ಟಿ ಭಾಗ್ಯ ಕೊಡುವುದನ್ನು ನಿಲ್ಲಿಸಬೇಕು. ಗೃಹಲಕ್ಷ್ಮಿ ಯೋಜನೆ ನಿಲ್ಲಿಸಿದರೆ ಒಳ್ಳೆಯದೇ ಎಂದು ಅವರು ಹೇಳಿದರು.