ಬಿಜೆಪಿ ವೈದ್ಯಕೀಯ ಪ್ರಕೋಷ್ಟದಿಂದ ಮೆಗ್ಗಾನ್‌ ಆಸ್ಪತ್ರೆಗೆ ಭೇಟಿ

| Published : Jul 09 2024, 12:54 AM IST

ಸಾರಾಂಶ

ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಗೆ ಭೇಟಿ ಸಾಂಕ್ರಾಮಿಕ ರೋಗಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ಪದಾಧಿಕಾರಿಗಳು ಮೆಗ್ಗಾನ್ ಆಸ್ಪತ್ರೆಯ ಅಧೀಕ್ಷಕ ಡಾ. ತಿಮ್ಮಪ್ಪ ಅವರನ್ನು ಒತ್ತಾಯಿಸಿದರು.

ಶಿವಮೊಗ್ಗ: ಜಿಲ್ಲಾ ಬಿಜೆಪಿ ವೈದ್ಯಕೀಯ ಪ್ರಕೋಷ್ಟದ ವತಿಯಿಂದ ಸೋಮವಾರ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ, ಜಿಲ್ಲೆಯಲ್ಲಿ ಅವ್ಯಾಹತವಾಗಿ ಹರಡುತ್ತಿರುವ ಡೆಂಘೀ, ಚಿಕೂನ್ ಗುನ್ಯಾ, ಜಿಕಾ ವೈರಸ್ ಜ್ವರದ ಬಗ್ಗೆ ಮಾಹಿತಿ ಪಡೆಯಲಾಯಿತು.

ಆಸ್ಪತ್ರೆ ಆವರಣದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಬೇಕು. ವಾರ್ಡ್‌ನಲ್ಲಿ ಕಿಟಕಿಗಳಿಗೆ ಸೊಳ್ಳೆಪರದೆ ಹಾಕಿಸುವುದು. ಆಸ್ಪತ್ರೆ ಆವರಣ ಹಾಗೂ ಸುತ್ತಮುತ್ತಲೂ ಎಲ್ಲೂ ನೀರು ನಿಲ್ಲದೆ ಇರುವ ಹಾಗೆ ಕ್ರಮ ಕೈಗೊಂಡು ಹಾಗೂ ಅನಾವಶ್ಯಕವಾಗಿ ಬೆಳೆದಿರುವ ಕಾಂಗ್ರೆಸ್ ಗಿಡಗಳನ್ನ ತೆಗೆಸುವುದು. ಆಸ್ಪತ್ರೆ ಆವರಣದಲ್ಲಿ ಮತ್ತು ವಾರ್ಡ್‌ಗಳಲ್ಲಿ ಕನಿಷ್ಠ ಐದು ಗಂಟೆಗಳಿಗೊಮ್ಮೆ ಫಾಗಿಂಗ್ ಮಾಡಿಸುವಂತೆ ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ ಡಾ. ತಿಮ್ಮಪ್ಪ ಅವರನ್ನು ಒತ್ತಾಯಿಸಿದರು.

ಮೆಗ್ಗಾನ್ ಆಸ್ಪತ್ರೆ ಬ್ಲಡ್ ಬ್ಯಾಂಕ್ ಗೆ ಭೇಟಿ ನೀಡಿ ಡೆಂಗ್ಯೂ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಅವಶ್ಯಕತೆ ಇರುವ ವೈಟ್ ಪ್ಲೇಟಿಲೆಟ್ಸ್ ಸಂಗ್ರಹದ ಬಗ್ಗೆ ಮಾಹಿತಿ ಪಡೆಯಲಾಯಿತು. ಇದೇ ಸಂದರ್ಭ ಆಸ್ಪತ್ರೆ ಲ್ಯಾಬ್‌ಗೂ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡುವ ಕಿಟ್‍ಗಳ ಲಭ್ಯತೆ ಬಗ್ಗೆ ಮಾಹಿತಿ ಪಡೆಯಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಪ್ರಕೋಷ್ಟಗಳ ರಾಜ್ಯ ಸಂಯೋಜಕರಾದ ಎಸ್.ದತ್ತಾತ್ರಿ, ವೈದ್ಯಕೀಯ ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯ ಡಾ.ಸುರೇಶ್, ವೈದ್ಯಕೀಯ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಡಾ.ಹೇಮಂತ್ ಕುಮಾರ್, ಪ್ರಕೋಷ್ಟಗಳ ಜಿಲ್ಲಾ ಸಂಯೋಜಕ ಹೃಷಿಕೇಶ್ ಪೈ, ಪ್ರಕೋಷ್ಟಗಳ ಜಿಲ್ಲಾ ಸಹ ಸಂಯೋಜಕರಾದ ಡಾ. ಶ್ರೀನಿವಾಸ್ ರೆಡ್ಡಿ , ಡಾ. ಮರುಳಾರಾಧ್ಯ, ಡಾ. ಗೌತಮ್ , ಡಾ. ಸಂತೋಷ್ , ಹಾಗೂ ಮುರಳೀಧರ್ ರವರು ಉಪಸ್ಥಿತರಿದ್ದರು.