ಕಾಂಗ್ರೆಸ್ ಸದಸ್ಯರೊಂದಿಗೆ ಬಿಜೆಪಿ ಸದಸ್ಯರು ಹೊಂದಾಣಿಕೆ ಆರೋಪ: ಶಾಸಕ ಸಿದ್ದು ಸವದಿ ನಡೆಗೆ ಬಿಜೆಪಿ ಸದಸ್ಯರ ಆಕ್ರೋಶ

| Published : Aug 25 2024, 02:06 AM IST / Updated: Aug 25 2024, 11:07 AM IST

ಕಾಂಗ್ರೆಸ್ ಸದಸ್ಯರೊಂದಿಗೆ ಬಿಜೆಪಿ ಸದಸ್ಯರು ಹೊಂದಾಣಿಕೆ ಆರೋಪ: ಶಾಸಕ ಸಿದ್ದು ಸವದಿ ನಡೆಗೆ ಬಿಜೆಪಿ ಸದಸ್ಯರ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

 ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಕಾಂಗ್ರೆಸ್ ಸದಸ್ಯರೊಂದಿಗೆ ಬಿಜೆಪಿ ಸದಸ್ಯರು ಹೊಂದಾಣಿಕೆಯಾಗಿ ಕೆಲಸ ಮಾಡಿದ್ದಾರೆಂಬ ಶಾಸಕ ಸಿದ್ದು ಸವದಿ ಹೇಳಿಕೆಗೆ ಬಿಜೆಪಿ ಸದಸ್ಯರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

  ಮಹಾಲಿಂಗಪುರ :   ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಕಾಂಗ್ರೆಸ್ ಸದಸ್ಯರೊಂದಿಗೆ ಬಿಜೆಪಿ ಸದಸ್ಯರು ಹೊಂದಾಣಿಕೆಯಾಗಿ ಕೆಲಸ ಮಾಡಿದ್ದಾರೆಂಬ ಶಾಸಕ ಸಿದ್ದು ಸವದಿ ಹೇಳಿಕೆಗೆ ಬಿಜೆಪಿ ಸದಸ್ಯರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಅಲ್ಲದೇ, ಸದಸ್ಯರೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಖಂಡನೀಯವೆಂದು ಬಿಜೆಪಿ ಪುರಸಭೆ ಸದಸ್ಯ ಬಸವರಾಜ ಹಿಟ್ಟಿನಮಠ ಹೇಳಿದ್ದಾರೆ. ಪಟ್ಟಣದ ಜಿಎಲ್‌ಬಿಸಿ ಅತಿಥಿ ಗೃಹದಲ್ಲಿ ಪುರಸಭೆ ಬಿಜೆಪಿಯ ಏಳು ಸದಸ್ಯರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. 

ಪುರಸಭೆ ಸದಸ್ಯ ರವಿ ಜವಳಗಿ ಮತ್ತು ಬಿಜೆಪಿ ಮುಖಂಡ ಮಹಾಲಿಂಗಪ್ಪ ಕೋಳಿಗುಡ್ಡ ಮಾತನಾಡಿ, ಈ ಚುನಾವಣೆಯಿಂದ ಬಿಜೆಪಿಗೆ ಅವಮಾನವಾಗಿದೆ. ತೇರದಾಳ ಶಾಸಕ ಸಿದ್ದು ಸವದಿ ಸ್ಥಳೀಯ ಪುರಸಭೆ ಸದಸ್ಯರು, ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕೇವಲ ಒಂದು ಮನೆತನದ ಸದಸ್ಯರ ಅಣತಿಯಂತೆ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಇದರಿಂದ ಪಕ್ಷದ ಎಲ್ಲರಿಗೂ ಬೇಜಾರಾಗಿದೆ. ಸ್ವತಃ ಮುಂದಾಗಿ ಸದಸ್ಯರನ್ನು ಕಣಕ್ಕಿಳಿಸಿ ಚುನಾವಣೆ ಮಾಡಬಹುದಿತ್ತು. ಆ.23ರ ನಾಲ್ಕು ದಿನಗಳ ಮುಂಚೆ ಸಭೆ ಕರೆದು, ಚುನಾವಣೆಯ ರೂಪುರೇಷೆ ಮಾಡಬೇಕಾದ ಶಾಸಕರು ಒಬ್ಬ ಪುರಸಭೆ ಸದಸ್ಯನನ್ನು ಜೊತೆಯಲ್ಲಿ ಕರೆದುಕೊಂಡು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. 

ಇವರು ಪ್ರತಿಪಕ್ಷ ಕಾಂಗ್ರೆಸ್ ಜೊತೆಗೆ ನೇರವಾಗಿ ಕೈ ಜೋಡಿಸಿದ್ದಾರೆ ಎಂದು ದೂರಿದರು. ಅಲ್ಲದೇ, ಈ ಬಗ್ಗೆ ರಾಜ್ಯ ವರಿಷ್ಠರ ಗಮನಕ್ಕೆ ತರುವುದಾಗಿಯೂ ಹೇಳಿದರು.ಪುರಸಭೆ ಸದಸ್ಯರಾದ ರಾಜು ಚಮಕೇರಿ ಮತ್ತು ಪ್ರಹ್ಲಾದ್ ಸಣ್ಣಕ್ಕಿ ಮಾತನಾಡಿ, ಶಾಸಕ ಸವದಿ ಕಾಂಗ್ರೆಸ್ ಜೊತೆ ನೇರ ಕೈ ಜೋಡಿಸಿರುವುದು ಅನೇಕ ವಿದ್ಯಮಾನಗಳಿಂದ ಗೊತ್ತಾಗಿದೆ. ನಾವು ಚುನಾವಣೆ ದಿನ ಪಟ್ಟಣದಲ್ಲಿಯೇ ಇದ್ದೇವೆ. ಇವರು ಬೆಂಗಳೂರಲ್ಲಿ, ಒಬ್ಬ ಗೋವಾದಲ್ಲಿದ್ದರು. ಇವರೆ ಬೇರೆ ಊರಲ್ಲಿ ವಾಸ್ತವ್ಯ ಹೂಡಿದ್ದಾರೆಂದರೆ ಇವರ ಜಾಣ ನಡೆ ಊಹಿಸಬಹುದು. ಇದನ್ನರಿಯದ ಶಾಸಕ ಸವದಿ ಒಂದು ಗ್ರಾಪಂ ಸದಸ್ಯನಾಗಲೂ ಲಾಯಕ್ಕಿಲ್ಲ ಎಂದು ಖಾರವಾಗಿ ನುಡಿದರು.

ಪುರಸಭೆಯ ಒಟ್ಟು 23 ಸದಸ್ಯರಲ್ಲಿ ಮೊದಲೆರಡು ಅವಧಿಗೆ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮಹಾಲಿಂಗಪುರ ಪುರಸಭೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿತ್ತು. ಕೊನೆಯ 15 ತಿಂಗಳ ಅವಧಿಗೆ ಆ.23ರಂದು ಶುಕ್ರವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ 9 ಸದಸ್ಯರು, ಬಂಡಾಯ ಮೂವರು ಅಭ್ಯರ್ಥಿಗಳು ಹಾಗೂ ಒಬ್ಬ ಪಕ್ಷೇತರ ಸದಸ್ಯ ಸೇರಿಸಿಕೊಂಡು 13 ಸಂಖ್ಯಾಬಲ ಹೊಂದಿದ್ದು, ಪುರಸಭೆಯ ಚುಕ್ಕಾಣಿ ಹಿಡಿದಿದೆ.

ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಸದಸ್ಯರಾದ ಬಸವರಾಜ ಹಿಟ್ಟಿನಮಠ, ಬಸವರಾಜ ಚಮಕೇರಿ, ರವಿ ಜವಳಗಿ ಮುಖಂಡರಾದ ಚನ್ನಪ್ಪ ರಾಮೋಜಿ, ಮಹಾಲಿಂಗ ಮುದ್ದಾಪುರ, ಶಿವಾನಂದ ಹುಣಶ್ಯಾಳ ಇದ್ದರು.

ಕಾಂಗ್ರೆಸ್ ಜೊತೆ ಕೈ ಜೋಡಿಸಿದ್ದು ಸಾಬೀತಾದರೆ ನಾವೆಲ್ಲರೂ ಸಾಮೂಹಿಕ ರಾಜೀನಾಮೆ ನೀಡುತ್ತೇವೆ. ನಿಮ್ಮದು ಲಾಬಿ ಇದ್ದರೆ ನೀವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಂತಹ ಸಣ್ಣತನದ ಮಾತು ಶಾಸಕ ಸವದಿಯವರಿಂದ ನಾವು ನಿರೀಕ್ಷಿಸಿರಲಿಲ್ಲ. ಈ ಮಾತುಗಳು ಪುರಸಭೆ ಸದಸ್ಯರು ಪಟ್ಟಣದ ಮುಖಂಡರು, ಕಾರ್ಯಕರ್ತರಲ್ಲಿ ಬೇಸರವನ್ನುಂಟು ಮಾಡಿದೆ.

- ಬಸವರಾಜ ಹಿಟ್ಟಿನಮಠ, ಬಿಜೆಪಿ ಪುರಸಭೆ ಸದಸ್ಯ