ಸಾರಾಂಶ
ಮೂರನೇ ಬಾರಿ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರ ಕೈಬಲಪಡಿಸುವಲ್ಲಿ ಈ ಸದಸ್ಯತ್ವ ಅಭಿಯಾನ ಮಹತ್ವದ್ದಾಗಿದೆ. ಈ ಮೂಲಕ ಪಕ್ಷ ಸಂಘಟನೆ ಜೊತೆಗೆ ಎಲ್ಲ ಹಂತದ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಸಹಕಾರಿಯಾಗುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ನರಸಿಂಹರಾಜ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸದಸ್ಯರ ಶಕ್ತಿ ಬಹಳ ಮುಖ್ಯ. ಇಡೀ ವಿಶ್ವದಲ್ಲೇ ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ಬಿಜೆಪಿ, ತನ್ನ ಸಾಮರ್ಥ್ಯವನ್ನು ಇನ್ನೂ ಹೆಚ್ಚಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಸದಸ್ಯತ್ವ ನೋಂದಣಿ ಅಭಿಯಾನ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕು ಎಂದರು.ಮೂರನೇ ಬಾರಿ ದೇಶದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರ ಕೈಬಲಪಡಿಸುವಲ್ಲಿ ಈ ಸದಸ್ಯತ್ವ ಅಭಿಯಾನ ಮಹತ್ವದ್ದಾಗಿದೆ. ಈ ಮೂಲಕ ಪಕ್ಷ ಸಂಘಟನೆ ಜೊತೆಗೆ ಎಲ್ಲ ಹಂತದ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಮಾಜಿ ಮೇಯರ್ಸಂದೇಶ್ ಸ್ವಾಮಿ ಮಾತನಾಡಿ, ನರಸಿಂಹರಾಜ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿಸುವವರ ಸಂಖ್ಯೆ ದೊಡ್ಡದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನನಗೆ ಅಧಿಕ ಮತಗಳನ್ನು ನೀಡಿ ಆಶೀರ್ವದಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಉತ್ತಮ ಸಹಕಾರ ದೊರೆತಿದೆ. ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದರೆ ಸದಸ್ಯತ್ವ ನೋಂದಣಿಗೆ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಎಲ್ಲ ವಾರ್ಡ್ ಗಳಲ್ಲೂ ಬೂತ್ ಮಟ್ಟದಲ್ಲಿ ಹೆಚ್ಚು ನೋಂದಣೆ ಮಾಡಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲಾ ಒಟ್ಟಿಗೆ ಶ್ರಮಿಸೋಣ ಎಂದು ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿದರು.ಸಭಾ ಕಾರ್ಯಕ್ರಮದ ಬಳಿಕ ವೀರನಗೆರೆ, ಉದಯಗಿರಿ ಮತ್ತಿತರ ಬಡಾವಣೆಗಳಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ನಡೆಯಿತು. ನಾಗೇಂದ್ರ, ಮಂಜು, ಗಿರಿಧರ್, ಪದ್ಮನಾಬ್, ಶ್ರೀನಿವಾಸ್, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.