ಬಿಜೆಪಿಗೆ ಎಲ್ಲರ ಅವಶ್ಯಕತೆ ಇದೆ, ಘರ್ ವಾಪ್ಸಿ: ನಿರಾಣಿ ಹೇಳಿಕೆ

| Published : Jun 29 2025, 01:32 AM IST

ಬಿಜೆಪಿಗೆ ಎಲ್ಲರ ಅವಶ್ಯಕತೆ ಇದೆ, ಘರ್ ವಾಪ್ಸಿ: ನಿರಾಣಿ ಹೇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯರು ಸೇರಿದಂತೆ ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವಂತೆ ಬಿ.ವೈ. ವಿಜಯೇಂದ್ರ ಅವರಿಗೆ ಸಾಕಷ್ಟು ಸಲ ಹೇಳಿದ್ದು, ಕಾಂಗ್ರೆಸ್ಸಿನವರೇ ಈಗ ಚಿನ್ನದ ತಟ್ಟೆಯಲ್ಲಿ ಅಧಿಕಾರವನ್ನು ಇಟ್ಟು ಕೊಡುತ್ತಿರುವ ವಿಚಾರವನ್ನೂ ಗಮನಕ್ಕೆ ತಂದಿದ್ದೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.

- ಇನ್ನೂ ಒಂದೂವರೆ ವರ್ಷ ವಿಜಯೇಂದ್ರನೇ ಅಧ್ಯಕ್ಷ । ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ: ಹೇಳಿಕೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಹಿರಿಯರು ಸೇರಿದಂತೆ ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವಂತೆ ಬಿ.ವೈ. ವಿಜಯೇಂದ್ರ ಅವರಿಗೆ ಸಾಕಷ್ಟು ಸಲ ಹೇಳಿದ್ದು, ಕಾಂಗ್ರೆಸ್ಸಿನವರೇ ಈಗ ಚಿನ್ನದ ತಟ್ಟೆಯಲ್ಲಿ ಅಧಿಕಾರವನ್ನು ಇಟ್ಟು ಕೊಡುತ್ತಿರುವ ವಿಚಾರವನ್ನೂ ಗಮನಕ್ಕೆ ತಂದಿದ್ದೇವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ನಗರದಲ್ಲಿ ಶುಕ್ರವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರಲ್ಲಿ ನಾವಾಗಿಯೇ ಪಕ್ಷವನ್ನು ಮೂರು ಭಾಗ ಮಾಡಿ, ಅಧಿಕಾರವನ್ನು ಕೊಟ್ಟೆವು. ಈಗ ಅದೇ ಪರಿಸ್ಥಿತಿ ಕಾಂಗ್ರೆಸ್‌ನಲ್ಲೂ ಇದೆ. ಈ ಎಲ್ಲಾ ವಿಚಾರವನ್ನೂ ಸೂಕ್ಷ್ಮವಾಗಿಯೇ ನಾನು ತಿಳಿಸಿದ್ದೇನೆ ಎಂದರು.

ಕಳೆದ 35 ವರ್ಷದಿಂದ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಜಿಲ್ಲಾಧ್ಯಕ್ಷನಾಗಿ, ರಾಜ್ಯ ಯುವ ಘಟಕದ ಅಧ್ಯಕ್ಷನಾಗಿ, ರಾಜ್ಯ ಕಾರ್ಯಕಾರಿಣಿ ಸದಸ್ಯನಾಗಿದ್ದೇನೆ. ನಾನು ಯಾವುದೇ ಪಕ್ಷಕ್ಕೆ ಹೋಗದೆ, ನನ್ನ ಪಕ್ಷವು ನನಗೆ ನೀಡಿದ ಎಲ್ಲ ಜವಾಬ್ದಾರಿಯನ್ನೂ ನಿಭಾಯಿಸಿದ್ದೇನೆ. ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುತ್ತೇನೆ ಎಂದು ತಿಳಿಸಿದರು.

ನಮ್ಮ ಪಕ್ಷದ ವಹಿಸುವ ಯಾವುದೇ ಕೆಲಸವನ್ನು 24×7 ನಿರ್ವಹಿಸುತ್ತೇನೆ. ರಾಜ್ಯದಲ್ಲಿ ಮತ್ತೆ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ. ಹಿರಿಯ ಆಶೀರ್ವಾದ, ಮಾರ್ಗದರ್ಶನದಲ್ಲಿ ಎಲ್ಲರನ್ನೂ ಕೂಡಿಸಿಕೊಂಡು ಹೋಗುತ್ತೇನೆ. ನಮ್ಮ ಪಕ್ಷದ ಬೈಲಾದ ಪ್ರಕಾರ ನೋಡಿದರೆ ಇನ್ನೂ ಒಂದೂವರೆ ವರ್ಷ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ. ನಮ್ಮ ಪಕ್ಷದ ಎಲ್ಲ 224 ಶಾಸಕರು, ಮಾಜಿ ಶಾಸಕರು, ಮುಖಂಡರು ರಾಜ್ಯಾಧ್ಯಕ್ಷರಾಗಲು ಸಮರ್ಥರಿದ್ದಾರೆ ಎಂದು ನಿರಾಣಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಎಲ್ಲದಕ್ಕೂ ಒಂದು ಸಮಯ ಅಂತಾ ಬಂದೇ ಬರುತ್ತದೆ. ಎಲ್ಲರೂ ಘರ್ ವಾಪ್ಸಿ ಆಗುತ್ತಾರೆ. ಪಕ್ಷಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ. ರಾಜ್ಯದಲ್ಲಿ ಕನಿಷ್ಠ 115 ಕ್ಷೇತ್ರಗಳನ್ನು ಗೆಲ್ಲುವುದಕ್ಕೆ ಎಲ್ಲರ ಅವಶ್ಯಕತೆ ಇದೆ ಎನ್ನುವ ಮೂಲಕ ಬಿಜೆಪಿಯಿಂದ ಉಚ್ಛಾಟಿತರು, ಪಕ್ಷ ಬಿಟ್ಟವರ ಮತ್ತೆ ಪಕ್ಷಕ್ಕೆ ಮರು ಸೇರ್ಪಡೆ ಆಗುವುದರ ಕುರಿತಂತೆ ಕುರಿತಂತೆ ಸಣ್ಣ ಸುಳಿವೂ ಸಹ ಮುರುಗೇಶ ನಿರಾಣಿ ಇದೇ ವೇಳೆ ನೀಡಿದರು.

- - -

(ಬಾಕ್ಸ್‌)

* ರಾಜಣ್ಣ ಬಳಿ ಏನಾದ್ರೂ ಆಧಾರ ಇರಬಹುದು: ನಿರಾಣಿ

ದಾವಣಗೆರೆ: ಕಳೆದ 2 ವರ್ಷದಿಂದಲೂ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇದೆಯೋ, ಇಲ್ಲವೋ ಎಂಬಷ್ಟರ ಮಟ್ಟಿಗೆ ಬಂದು ತಲುಪಿದೆ. ಯಾವುದೇ ಅಭಿವೃದ್ಧಿ ಕೆಲಸಗಳೂ ಆಗದೇ, ಸ್ವತಃ ಆಡಳಿತ ಪಕ್ಷದ ಶಾಸಕರೇ ಇದರ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ ನಿರಾಣಿ ಟೀಕಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಹಿರಿಯ ಶಾಸಕರೇ ಸರ್ಕಾರದ ವಿರುದ್ಧ ಒಬ್ಬೊಬ್ಬರಾಗಿ ಧ್ವನಿ ಎತ್ತುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸ ಕೇಳಿದರೂ 5 ಗ್ಯಾರಂಟಿಗಳನ್ನು ಕೊಟ್ಟಿದ್ದೇವಲ್ಲಾ ಎಂಬಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹೇಳಿಕೊಂಡು ಬರುತ್ತಿದ್ದಾರೆ ಎಂದರು.

ಎಲ್ಲ ಇಲಾಖೆಗಳಲ್ಲೂ ಹೆಚ್ಚಿನ ತೆರಿಗೆ ಹಾಕಿ, ಒಂದು ಕೈಯಿಂದ ಗ್ಯಾರಂಟಿ ಅಂತಾ ಕೊಟ್ಟು, ಮತ್ತೊಂದು ಕೈನಿಂದ ಗ್ಯಾರಂಟಿಯಾಗಿ ಕಿತ್ತುಕೊಳ್ಳುವ ಕೆಲಸ ನಡೆದಿದೆ. ಈ ಬಗ್ಗೆ ಕೇವಲ ಬಿಜೆಪಿ, ಜೆಡಿಎಸ್‌ನವರು ಹೇಳುತ್ತಿಲ್ಲ. ಕಾಂಗ್ರೆಸ್ ಶಾಸಕರಾದ ಬಿ.ಆರ್‌.ಪಾಟೀಲ, ರಾಜು ಕಾಗೆ ಸೇರಿದಂತೆ ಅನೇಕರು ಆರೋಪಿಸುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಬೇಗನೆ ಜನರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದೆ ಆಡಳಿತ ಪಕ್ಷದ ಶಾಸಕರೆ ಬೀದಿಗಿಳಿದು ಹೋರಾಡುವಂತಹ ಪರಿಸ್ಥಿತಿ ಬಂದರೂ ಬರಬಹುದು. ಹಾಗಾಗಿ ಸಿದ್ದರಾಮಯ್ಯ ಮುಂಚಿನಂತೆ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ಸೆಪ್ಟಂಬರಲ್ಲಿ ರಾಜಕೀಯ ಕ್ರಾಂತಿಯಾಗುತ್ತದೆಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ನೀಡಿರುವುದಕ್ಕೆ ಏನಾದರೂ ಆಧಾರ ಇರಬಹುದು. ಅದೇ ಕಾರಣಕ್ಕೆ ಅಂತಹ ಮಾತನ್ನಾಡಿದ್ದಾರೆ. ಈ ಬಗ್ಗೆ ಅಕ್ಟೋಬರ್‌, ನವೆಂಬರ್ ತಿಂಗಳು ಬಂದಾಗಲೇ ನೋಡೋಣ ಏನಾಗುತ್ತದೆಂದು ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

- - -

(ಸಾಂದರ್ಭಿಕ ಚಿತ್ರ)