ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು
ಮಹಿಳಾ ಮೀಸಲಾತಿ ಮಸೂದೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಪ್ರಸ್ತುತ ಕ್ಷೇತ್ರ ಮರುವಿಂಗಡಣೆಯನ್ನು ಅದಕ್ಕೆ ಸೇರಿಸಿ ಮಂಡಿಸಿದ್ದಾರೆ. ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ. ವಿಪಕ್ಷಗಳ ವಿರೋಧ ಇರುವುದು ಕ್ಷೇತ್ರ ವಿಂಗಡಣೆಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ಹಾವೇರಿ ಜಿಲ್ಲೆ ರಾಣಿಬೆನ್ನೂರಿನ ದೊಡ್ಡ ಕೆರೆ ಪ್ರದೇಶದಲ್ಲಿ ಭಾನುವಾರ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ, ಸಂವಿಧಾನದ 73, 74ನೇ ತಿದ್ದುಪಡಿಗಳನ್ನು ರಾಜೀವ್ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದರು. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಬೇಕೆಂದು ಬಿಜೆಪಿ ಎಂದಿಗೂ ಒತ್ತಾಯಿಸಿಲ್ಲ. ಈಗ ಮಾತ್ರ ಮಹಿಳಾ ಮೀಸಲಾತಿಗೆ ಒತ್ತಾಯಿಸಿ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ದಕ್ಷಿಣದಲ್ಲಿ ಶೇ.50ರಷ್ಟು ಹೆಚ್ಚಳ ಮಾಡಿದರೆ ಕರ್ನಾಟಕದಲ್ಲಿ 42 ಸ್ಥಾನಗಳಾಗುತ್ತವೆ. ಉತ್ತರ ಭಾರತದಲ್ಲಿ ಸ್ಥಾನಗಳು ಹೆಚ್ಚಾಗುವುದರ ಬಗ್ಗೆ ನಮ್ಮ ವಿರೋಧವೇ ಹೊರತು ಮಹಿಳಾ ಮೀಸಲಾತಿಗೆ ವಿರೋಧವಿಲ್ಲ. ನಾವು ಮಹಿಳಾ ಮೀಸಲಾತಿ ಪರವಾಗಿದ್ದೇವೆ ಎಂದರು.ಸಂವಿಧಾನ ತಿದ್ದುಪಡಿಗೆ ಮೂರನೇ ಎರಡರಷ್ಟು ಬಹುಮತ ಲೋಕಸಭೆಯಲ್ಲಿ ಇರಬೇಕು. ಶೇ.50ರಷ್ಟು ರಾಜ್ಯಗಳು ಇದಕ್ಕೆ ಒಪ್ಪಿಗೆ ನೀಡಬೇಕು. ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಒಕ್ಕೂಟದಿಂದ ಕ್ಷೇತ್ರ ಮರು ವಿಂಗಡಣೆಗೆ ವಿರೋಧ ಮಾಡಿದ್ದೇವೆಯೇ ಹೊರತು ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ. ಕ್ಷೇತ್ರ ಮರುವಿಂಗಡಣೆಯನ್ನು ಬೇರ್ಪಡಿಸಿ ಮಸೂದೆ ತಂದಿದ್ದರೆ ಯಾರೂ ವಿರೋಧಿಸುತ್ತಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡು, ಪಶ್ಚಿಮ ಬಂಗಾಳದ ಚುನಾವಣೆ ಇರುವುದರಿಂದ ಮಹಿಳಾ ಮೀಸಲಾತಿ ಮಸೂದೆ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಇದೇ ಸಂದರ್ಭದಲ್ಲಿ 2025-26ನೇ ಸಾಲಿನಲ್ಲಿ ಸ್ಥಳೀಯ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ಡಿಜಿಟಲ್ ಲೈಬ್ರರಿ ಒಳಗೊಂಡ ಟ್ಯಾಬ್‌ಗಳನ್ನು ಮುಖ್ಯಮಂತ್ರಿಗಳು ವಿತರಿಸಿದರು.2023ರಿಂದ ಮಹಿಳಾ ಮೀಸಲಾತಿ ಏಕೆ ಜಾರಿ ಮಾಡಿಲ್ಲ?:
‘ಮಹಿಳಾ ಮೀಸಲಾತಿ ವಿಧೇಯಕ 2023ರಲ್ಲೇ ಅಂಗೀಕಾರವಾಗಿದ್ದರೂ ಜಾರಿ ಮಾಡದೆ ಕತ್ತೆ ಕಾಯತ್ತಿದ್ದರೇ ಅಥವಾ ಮಂಡಕ್ಕಿ ತಿನ್ನುತ್ತಿದ್ದರೇ? ಕೂಡಲೇ ಮಹಿಳಾ ಮೀಸಲಾತಿ ಜಾರಿ ಮಾಡಬೇಕು’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.ಇದೇ ವೇಳೆ, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರಾತ್ರಿ 8.30ಕ್ಕೆ ಬಂದಾಗಲೆಲ್ಲ ಅಪಶಕುನ ತರುತ್ತಾರೆ. ಧೈರ್ಯವಿದ್ದರೆ ನರೇಂದ್ರ ಮೋದಿ ಅವರು ಒಂದು ಪ್ರೆಸ್ ಮೀಟ್ ಮಾಡಲಿ’ ಎಂದೂ ಅವರು ಸವಾಲು ಹಾಕಿದ್ದಾರೆ.ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ 59 ಬಾರಿ ಕಾಂಗ್ರೆಸ್ ಕಾಂಗ್ರೆಸ್ ಎಂದು ಹೇಳಿದ್ದಾರೆ. ಮಹಿಳೆಯರ ಪರವಾಗಿ ಏನೂ ಹೇಳಿಲ್ಲ. ಮದುವೆ ಆಗಿಲ್ಲ ಎಂದು ಸುಳ್ಳು ಪ್ರಮಾಣ ಪತ್ರ ನೀಡಿದವರು, ಹೆಂಡತಿ ಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲದವರು ಇಂದು ಮಹಿಳಾ ಮೀಸಲಾತಿ ಬಿಲ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರುಕತ್ತೆ ಕಾಯುತ್ತಿದ್ದರೇ?:ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮೂರು ವಿಧೇಯಕಗಳನ್ನು ಮಂಡಿಸಿದೆ. ಅದರಲ್ಲಿ ಮಹಿಳಾ ಮೀಸಲಾತಿ ಮಸೂದೆ 2023ರಲ್ಲೇ ಪಾಸಾಗಿದೆ. ಆಗ ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರವಾಗಿದೆ ಎಂದು ಮಹಿಳಾ ಸಂಸದರ ಜತೆ ನರೇಂದ್ರ ಮೋದಿ ಅವರೂ ಸಂಭ್ರಮಿಸಿದ್ದರು. ಅದರ ಅಧಿಸೂಚನೆಯೂ ಹೊರಬಿದ್ದಿದೆ. ಈಗ ಅದಕ್ಕೆ ಕ್ಷೇತ್ರ ಪುನರ್ ವಿಂಗಡಣೆ ಜೋಡಿಸಲು ಷಡ್ಯಂತ್ರ ಮಾಡಿದ್ದಾರೆ ಎಂದು ಪ್ರಿಯಾಂಕ್ ದೂರಿದ್ದಾರೆ.ಕ್ಷೇತ್ರ ಮರುವಿಂಗಡಣೆ ಸಮಿತಿ ರಚನೆ ಮಾಡಿ ಬೇಕಾದ ಹಾಗೆ ಮರುವಿಂಗಡಣೆ ಮಾಡುತ್ತಾರೆ. ಇಲ್ಲಿಯತನಕ ಅವರು ಕತ್ತೆ ಕಾಯುತ್ತಿದ್ದರೇ? ಅಥವಾ ಮಂಡಕ್ಕಿ ತಿನ್ನುತ್ತಿದ್ದರೇ? ಈಗಾಗಲೇ ಕಾಯ್ದೆ ಜಾರಿಯಲ್ಲಿದ್ದು, 543 ಕ್ಷೇತ್ರಗಳಲ್ಲೇ ಮಹಿಳಾ ಮೀಸಲಾತಿ ಜಾರಿ ಮಾಡಲಿ ಎಂದು ಒತ್ತಾಯಿಸಿದರು.ಮಹಿಳೆಯರ ಪರ ಇದ್ದರೆ ಸಚಿವ ಸಂಪುಟದಲ್ಲಿ 17 ಮಂದಿ ಮಹಿಳೆಯರಿಗೆ ಅವಕಾಶ ನೀಡಲಿ. ಲೋಕಸಭೆ ಟಿಕೆಟ್ ನೀಡುವಾಗ ಯಾಕೆ ಮಹಿಳೆಯರು ನೆನಪಾಗಿಲ್ಲ? ಆರ್‌ಎಸ್‌ಎಸ್‌ನಲ್ಲಿ ಮಹಿಳೆಯರು ಇದ್ದಾರೆಯೇ ಎಂದು ಪ್ರಶ್ನಿಸಿದರು.
ಪಕ್ಷ ವಿರೋಧಿ ಕೆಲಸ ಮಾಡಿದವರ ಮೇಲೆ ಕ್ರಮ ಆಗಿದೆ:ಅಲ್ಪಸಂಖ್ಯಾತ ನಾಯಕರ ಮೇಲಿನ ಕ್ರಮಕ್ಕೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಯಾರೆಲ್ಲ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೋ ಅವರ ಮೇಲೆ ಕ್ರಮ ಆಗಿದೆ. ಕಾಂಗ್ರೆಸ್ ಪಕ್ಷವು ಬುದ್ಧ, ಬಸವ, ಅಂಬೇಡ್ಕರ್ ತತ್ವ ಇಟ್ಟುಕೊಂಡಿದೆ. ಅದಕ್ಕೆ ವಿರುದ್ಧವಾಗಿ ನಡೆದುಕೊಂಡವರ ಮೇಲೆ ಕ್ರಮ ಆಗುತ್ತದೆ. ವೈಯಕ್ತಿಕವಾಗಿ ಯಾರ ಮೇಲೂ ಕ್ರಮ ಆಗಿಲ್ಲ ಎಂದು ಹೇಳಿದರು.ಮಹಿಳಾ ಮೀಸಲು ಅಧಿಸೂಚನೆ ಯಾಕೆ ಹೊರಡಿಸಿರಲಿಲ್ಲ?:‘ಮಹಿಳಾ ಮೀಸಲಾತಿಯ ನಾರಿ ಶಕ್ತಿ ವಿಧೇಯಕವನ್ನು ನರೇಂದ್ರ ಮೋದಿ ಸರ್ಕಾರ 2023ರಲ್ಲೇ ಮಂಡಿಸಿದ್ದು ಎಲ್ಲಾ ಪಕ್ಷದವರೂ ಬೆಂಬಲಿಸಿ ಪಾಸು ಮಾಡಿದ್ದಾರೆ. ಈವರೆಗೆ ಯಾಕೆ ಅಧಿಸೂಚನೆ ಹೊರಡಿಸಿರಲಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳಾ ಮೀಸಲಾತಿ ವಿಧೇಯಕಕ್ಕೂ ಕ್ಷೇತ್ರ ಪುನರ್‌ವಿಂಗಡಣೆ ವಿಧೇಯಕಕ್ಕೂ ವ್ಯತ್ಯಾಸವಿದೆ. ನರೇಂದ್ರ ಮೋದಿ ಅವರು 2023ರಲ್ಲೇ ನಾರಿ ಶಕ್ತಿ ಬಿಲ್ ಮಂಡನೆ ಮಾಡಿದ್ದರು. ಇದಕ್ಕೆ ಎಲ್ಲಾ ಪಕ್ಷದ ನಾಯಕರೂ ಸಹಮತ ವ್ಯಕ್ತಪಡಿಸಿ ವಿಧೇಯಕ ಪಾಸು ಆಗಿದೆ. 40 ತಿಂಗಳಾದರೂ ನರೇಂದ್ರ ಮೋದಿ ಅವರ ಯಾಕೆ ಇದನ್ನು ಜಾರಿ ಮಾಡಲಿಲ್ಲ. ಇಷ್ಟು ದಿನ ಅಧಿಸೂಚನೆ ಹೊರಡಿಸದ ಅವರ ಮಹಿಳಾ ವಿರೋಧಿ ನಡೆಯನ್ನು ಖಂಡಿಸುತ್ತೇನೆ ಎಂದು ಹೇಳಿದರು.ಇದೀಗ ಮೋದಿ ಅವರು ಚುನಾವಣೆಗಾಗಿ ರಾಜಕೀಯ ದಾಳ ಉರುಳಿಸಿದ್ದಾರೆ. ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿ ಎಂದಿದ್ದಾರೆ. ಅವರ ಹೇಳಿಕೆಯನ್ನು ನಾವು ವಿರೋಧಿಸಿದ್ದೇವೆ. ಜನರು ಬುದ್ಧಿವಂತರಿದ್ದು ಅವರಿಗೆ ಎಲ್ಲವೂ ಅರ್ಥವಾಗುತ್ತಿದೆ ಎಂದರು.ನಾವು ಮಹಿಳಾ ಮೀಸಲಾತಿ ಪರವಾಗಿದ್ದೇವೆ. 2010ರಲ್ಲಿ ನಾವು ಮಹಿಳಾ ಮೀಸಲಾತಿ ಬಿಲ್ ಮಂಡನೆ ಮಾಡಿದ್ದೆವು. ಆದರೆ ಬಹುಮತ ಇಲ್ಲದೆ ಬಿಲ್ ಪಾಸಾಗಿಲ್ಲ. ಬಿಜೆಪಿ ಸರ್ಕಾರ ಈಗ ಅಧಿವೇಶನಕ್ಕೆ ತಂದಿದ್ದು ಕ್ಷೇತ್ರ ಪುನರ್‌ವಿಂಗಡಣೆ ವಿಧೇಯಕ. ಅದರಿಂದ ದಕ್ಷಿಣ ರಾಜ್ಯಗಳಿಗೆ, ಎಸ್‌ಸಿ,ಎಸ್ಟಿ ಸಮುದಾಯಕ್ಕೆ ಅನ್ಯಾಯವಾಗುತ್ತಿತ್ತು. ಹಾಗಾಗಿ ಎಲ್ಲ ಪಕ್ಷಗಳೂ ಇದನ್ನು ವಿರೋಧ ಮಾಡಿವೆ. ಮಹಿಳಾ ಮೀಸಲಾತಿಗೂ ಕ್ಷೇತ್ರ ಪುನರ್‌ವಿಂಗಡಣೆಗೂ ವ್ಯತ್ಯಾಸವಿದೆ ಎಂದು ಖರ್ಗೆ ಹೇಳಿದರು.ಸರೋಜಿನಿ ನಾಯ್ಡು ನಮ್ಮ ಪಕ್ಷದ ಮೊದಲ ಮಹಿಳಾ ಅಧ್ಯಕ್ಷರಾಗಿದ್ದರು. ಇಂದಿರಾ ಗಾಂಧಿಯವರು ಪ್ರಧಾನಿ ಆಗಿದ್ದರು. ಸೋನಿಯಾಗಾಂಧಿ ಅವರು ಪಕ್ಷವನ್ನು ಮುನ್ನಡೆಸಿದ್ದಾರೆ. ನಾವು ಮಹಿಳೆಯರಿಗೆ ಆದ್ಯತೆ ಕೊಟ್ಟಿದ್ದೇವೆ. ಹೀಗಾಗಿ ಮೋದಿಯವರು ರಾಜಕೀಯ ಸುಳ್ಳುಗಳನ್ನು ನಿಲ್ಲಿಸಲಿ ಎಂದು ಆಗ್ರಹಿಸಿದರು.