ಬಾಕಿ ಆಸ್ತಿ ತೆರಿಗೆ ವಸೂಲಿಗೆ ಬಿಜೆಪಿ ವಿರೋಧ

| Published : Feb 13 2024, 01:45 AM IST / Updated: Feb 13 2024, 03:03 PM IST

ಸಾರಾಂಶ

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಂದಾಯ ಹೆಸರಲ್ಲಿ ಸುಲಿಗೆ ನಡೆಯುತ್ತಿದ್ದು, ಬಾಕಿ ಇರುವ ತೆರಿಗೆಯ ಮೇಲಿನ ದಂಡವನ್ನು ವಿಧಿಸುವ ಅದೇಶವನ್ನು ತಕ್ಷಣಕ್ಕೆ ಹಿಂಪಡೆಯಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಕಂದಾಯ ಹೆಸರಲ್ಲಿ ಸುಲಿಗೆ ನಡೆಯುತ್ತಿದ್ದು, ಬಾಕಿ ಇರುವ ತೆರಿಗೆಯ ಮೇಲಿನ ದಂಡವನ್ನು ವಿಧಿಸುವ ಅದೇಶವನ್ನು ತಕ್ಷಣಕ್ಕೆ ಹಿಂಪಡೆಯಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಸೋಮವಾರ ಬಿಜೆಪಿ ಶಾಸಕರಾದ ಬೈರತಿ ಬಸವರಾಜ, ಎಸ್‌.ಆರ್‌.ವಿಶ್ವನಾಥ್, ಎಸ್‌.ಮುನಿರಾಜು, ಸಿ.ಕೆ.ರಾಮಮೂರ್ತಿ ಸೇರಿದಂತೆ ಇತರ ಮುಖಂಡರ ನೇತೃತ್ವದ ನಿಯೋಗವು ಬಿಬಿಎಂಪಿ ಆಯುಕ್ತರಿಗೆ ಈ ಸಂಬಂಧ ದೂರು ನೀಡಿತು.

ನಗರದ ನಾಗರಿಕರ ಮೇಲೆ ಬಾಕಿ ತೆರಿಗೆ ವಸೂಲಿಯ ಹೆಸರಲ್ಲಿ ಯುದ್ಧ ಸಾರಿದೆ. ಸ್ವಯಂ ಆಸ್ತಿ ತೆರಿಗೆ ಘೋಷಣೆಯಲ್ಲಿ ದೋಷಪೂರಿತವಾಗಿರುವ ಕಟ್ಟಡಗಳಿಗೆ ದುಪ್ಪಟ್ಟು ದಂಡ, ಬಡ್ಡಿ ಮತ್ತು ಕಾನೂನು ಬಾಹಿರವಾಗಿ ಕಂದಾಯ ವಸೂಲಿ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಸ್ವಯಂ ಘೋಷಿತ ತೆರಿಗೆ ಪದ್ಧತಿಯಲ್ಲಿ ಬಿಬಿಎಂಪಿ ಕಾಯ್ದೆಯನ್ವಯ ಐದು ವರ್ಷದಲ್ಲಿ ಹಿಂದಿನ ಬಾಕಿಯ ಹೆಸರಲ್ಲಿ ದಂಡ ಮತ್ತು ಬಡ್ಡಿ ವಸೂಲಿ ಮಾಡುವ ಅಧಿಕಾರ ಇಲ್ಲ. 

ಆದರೆ ಕಾಯ್ದೆ ವಿರುದ್ಧವಾಗಿ ಪಾಲಿಕೆ ಕ್ರಮ ಜರುಗಿಸುತ್ತಿದೆ. ನಗರದಲ್ಲಿ ಕಳೆದ ಒಂಭತ್ತು ತಿಂಗಳಿನಿಂದ ಯಾವುದೇ ಅಭಿವೃದ್ಧಿ ಯೋಜನೆಯನ್ನು ಕೈಗೊಳ್ಳಲು ವಿಫಲವಾಗಿರುವ ಸರ್ಕಾರವು ಇದೀಗ ನಗರದ ನಾಗರಿಕರನ್ನು ಸುಲಿಗೆ ಮಾಡಿ ಸಂಪನ್ಮೂಲ ಕ್ರೋಢೀಕರಣ ಮಾಡಲು ಮುಂದಾಗಿದೆ ಎಂದು ಕಿಡಿಕಾರಿದೆ.

ತೆರಿಗೆ ವಸೂಲಿ ಮಾಡುವಾಗ ಬಾಕಿ ಇರುವ ತೆರಿಗೆ ಹಣಕ್ಕಿಂತ ಅಧಿಕ ಪಟ್ಟು ದಂಡ ವಿಧಿಸಲಾಗುತ್ತಿದೆ. ಕಂದಾಯ ಇಲಾಖಾ ಅಧಿಕಾರಿಗಳಿಗೆ ಈಗ ಪರಿಷ್ಕರಿಣೆಯ ವಸೂಲಿಗೆ ದೊಡ್ಡ ನೋಟಿಸ್‌ ಮೂಲಕ ಪಾವತಿಸಲು ನೆನಪಿಸುವ ಯಾವುದೇ ವ್ಯವಸ್ಥೆಯು ಪಾಲಿಕೆಯಲ್ಲಿ ಜಾರಿ ಇಲ್ಲದಿರುವುದು ದೊಡ್ಡ ದೋಷವಾಗಿದೆ. 

ಅಭಿವೃದ್ಧಿ ಯೋಜನೆಗಳಿಗೆ ತಿಲಾಂಜಲಿ ನೀಡಿ ಪಾಲಿಕೆಯ ಸಂಪನ್ಮೂಲದ ಮೂಲಕ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಉಂಟಾಗಿರುವ ಕೊರತೆಯನ್ನು ತುಂಬಿಸಲು ರಾಜ್ಯ ಸರ್ಕಾರ ಜನರಿಂದ ಸುಲಿಗೆ ಇಳಿದಿದೆ ಎಂದು ದೂರಲಾಗಿದೆ.

ನ್ಯಾಯಯುತ ಬೇಡಿಕೆಯನ್ನು ಈಡೇರಿಕೆ ಮಾಡದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.