ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಅಣೆಕಟ್ಟೆಯ ತಳಭಾಗದಲ್ಲಿ ಜೆಜೆಎಂ ಯೋಜನೆಯಡಿ ಕೈಗೊಂಡ ಅವೈಜ್ಞಾನಿಕ ಕಾಮಗಾರಿ ನಿಲ್ಲಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬಿಜೆಪಿ ರೈತ ಮೋರ್ಚಾದ ಜಿಲ್ಲಾ ಮುಖಂಡರ ನಿಯೋಗದಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.ನಗರದ ಜಿಲ್ಲಾಡಳಿತ ಭವನದಲ್ಲಿ ಎಡಿಸಿ ಪಿ.ಎನ್.ಲೋಕೇಶರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ನಿಯೋಗವು, ಭದ್ರಾ ಜಲಾಶಯವು 6 ಜಿಲ್ಲೆಗಳ ಸುಮಾರು 4.5 ಲಕ್ಷ ಎಕರೆ ಪ್ರದೇಶದ ಕೃಷಿಗೆ ಮತ್ತು ಕುಡಿಯುವ ನೀರಿಗೆ ನೀರಾವರಿ ಮೂಲವಾಗಿದ್ದು, ಅಲ್ಲಿ ಅವೈಜ್ಞಾನಿಕ ಕಾಮಗಾರಿ ಸರಿಯಲ್ಲ ಎಂದು ಆಕ್ಷೇಪಿಸಿತು.
ಈ ವೇಳೆ ಮಾತನಾಡಿದ ರೈತ ಮೋರ್ಚಾದ ಮುಖಂಡರು, ಭದ್ರಾ ಅಣೆಕಟ್ಟೆ ನೀರನ್ನೇ ನಂಬಿ ಲಕ್ಷಾಂತರ ರೈತರು ಬದುಕು ಕಟ್ಟಿಕೊಂಡಿದ್ದಾರೆ. ಹೀಗಿರುವಾಗ ಭದ್ರಾ ಡ್ಯಾಂ ಬುಡದಲ್ಲೇ ಸುಮಾರು 16 ಎಕರೆ ಬಫರ್ ಝೋನ್ ಪ್ರದೇಶದಲ್ಲಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ಮತ್ತು ವಸತಿ ಸಮುಚ್ಛಯಗಳ ನಿರ್ಮಾಣ ಕಾಮಗಾರಿಗಳನ್ನು ಸದ್ದಿಲ್ಲದೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.ಬಫರ್ ಝೋನ್ ಪ್ರದೇಶದಲ್ಲಿ ಕಾಮಗಾರಿಗಳನ್ನು ಚಿಕ್ಕಮಗಳೂರು ಜಿಲ್ಲೆ ತರೀಕೆರೆ, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಗ್ರಾಮಾಂತರ ಪ್ರದೇಶದ ಹಳ್ಳಿಗಳಿಗೆ ಕುಡಿಯುವ ನೀರೊದಗಿಸಲು ಜಲ ಜೀವನ ಮಿಷನ್ ಅಡಿ .00 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ. ಭದ್ರಾ ಅಣೆಕಟ್ಟೆಯ ಅಭದ್ರತೆಗೇ ಈ ಕಾಮಗಾರಿ ಕಾರಣವಾಗಲಿದೆ. ಸಂಪೂರ್ಣ ಅವೈಜ್ಞಾನಿಕವಾಗಿರುವ ಈ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಅವರು ತಾಕೀತು ಮಾಡಿದರು.
ಜರ್ಮನ್ ತಂತ್ರಜ್ಞಾನದಡಿ ಸಿದ್ಧಪಡಿಸಿದ ಡ್ಯಾಂ ನಿರ್ವಹಣೆಯ ಕ್ರೇನ್ ಗಳನ್ನು ರೀ-ಕಂಡೀಷನ್ ಮಾಡಿಸಬೇಕು. ಸೇತುವೆ ಬಳಿ ಆಗಾಗ ಕುಸಿಯುವ ತಡೆಗೋಡೆ ಸರಿಪಡಿಸಿ, ಭದ್ರಗೊಳಿಸಬೇಕು. ಡ್ಯಾಂ ಸುತ್ತಲೂ ಬೇಲಿ ನಿರ್ಮಿಸಿ ಅದರ ಭದ್ರತೆ ಕಾಯ್ದುಕೊಳ್ಳಬೇಕು. ಡ್ಯಾಂ ಸುರಕ್ಷತೆಯ ಮೇಲ್ವಿಚಾರಣೆ ನಡೆಸುವ ಕೇಂದ್ರದ ಜಲ ಆಯೋಗವು ಡ್ಯಾಂನ ಪುನರುತ್ಥಾನ ಮತ್ತು ಅಭಿವೃದ್ಧಿ ಯೋಜನೆಯಡಿ ₹100 ಕೋಟಿ ಅನುದಾನಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ರಾಜ್ಯ ಸರ್ಕಾರ ಕೂಡಲೇ ಅಗತ್ಯ ಹಣ ಬಿಡುಗಡೆಗೊಳಿಸಿ, ಡ್ಯಾಂ ನ ಸುರಕ್ಷತೆ ಕಾಪಾಡಲಿ ಎಂದು ಆಗ್ರಹಿಸಿದರು.ಬಿಜೆಪಿ ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ, ದೂಡಾ ಮಾಜಿ ಅಧ್ಯಕ್ಷರಾದ ಹಿರಿಯ ವಕೀಲ ಎ.ವೈ.ಪ್ರಕಾಶ, ರಾಜನಹಳ್ಳಿ ಶಿವಕುಮಾರ, ಮಾಜಿ ಮೇಯರ್ ಎಚ್.ಎನ್.ಗುರುನಾಥ, ಮುಖಂಡರಾದ ಎ.ಬಿ.ಹನುಮಂತಪ್ಪ, ಎಚ್.ಎನ್.ಶಿವಕುಮಾರ, ಕೆ.ವಿ.ಚನ್ನಪ್ಪ, ಕೆ.ಎಚ್.ಧನಂಜಯ, ಪುಲೀಯ, ಕೊಂಡಜ್ಜಿ ಹನುಮಂತ, ರಾಜುಗೌಡ ಇತರರು ಇದ್ದರು.