ಮುಡಾದಲ್ಲಿ ನಡೆದಿರುವ ಅಕ್ರಮದಲ್ಲಿ ನಟೇಶ್ ಹಣ್ಣು ತಿಂದಿದ್ದರೆ, ದಿನೇಶ್ ವಾಟೆಯನ್ನೇ ನುಂಗಿದ್ದಾನೆ.
ಕನ್ನಡಪ್ರಭ ವಾರ್ತೆ ಮೈಸೂರು
ಮುಡಾದಲ್ಲಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿರುವುದು ಕೇವಲ ಅಕ್ರಮವಲ್ಲ ದರೋಡೆಯಾಗಿದೆ ಎಂದು ವಿಧಾನಪರಿಷತ್ ಸದಸ್ಯ ಆರ್. ರಘು ಕೌಟಿಲ್ಯ ಆರೋಪಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಸಂಬಂಧ ನಾನು ವಿಧಾನಪರಿಷತ್ ನಲ್ಲಿ ಪ್ರಶ್ನಿಸಲು ಮುಂದಾಗಿದ್ದೆ. ನನ್ನ ಪ್ರಶ್ನೆಯನ್ನು ಚುಕ್ಕೆ ಗುರುತಿನ ಪ್ರಶ್ನೆಯೆಂದು ಪರಿಗಣಿಸಲಾಗಿತ್ತು. ಪರಿಣಾಮ ನಗರಾಭಿವೃದ್ಧಿ ಸಚಿವರು ಸದನಕ್ಕೆ ಬಂದು ಉತ್ತರಿಸುವ ಅನಿವಾರ್ಯತೆ ಎದುರಾಗಿತ್ತು. ಇದೇ ಕಾರಣದಿಂದ 1100 ನಿವೇಶನಗಳ ಹಂಚಿಕೆಯನ್ನು ರದ್ದುಪಡಿಸಲಾಗಿದೆ ಎಂದು ಆದೇಶ ಹೊರಡಿಸಿದರು. ಅಕ್ರಮದಲ್ಲಿ ಭಾಗಿಯಾಗಿರುವ ದರೋಡೆಕೋರ ಫಲಾನುಭವಿಗಳನ್ನು ರಕ್ಷಿಸುವ ಸಲುವಾಗಿ ಈ ಆದೇಶ ಹೊರಡಿಸಿದಂತಿದೆ ಎಂದು ದೂರಿದರು.
ಮುಡಾದಲ್ಲಿ ನಡೆದಿರುವ ಅಕ್ರಮದಲ್ಲಿ ನಟೇಶ್ ಹಣ್ಣು ತಿಂದಿದ್ದರೆ, ದಿನೇಶ್ ವಾಟೆಯನ್ನೇ ನುಂಗಿದ್ದಾನೆ. 2019ರ ನಂತರ ನಿವೇಶನಗಳ ಹಂಚಿಕೆಯ ವಿವರಗಳನ್ನು ಕಡ್ಡಾಯವಾಗಿ ಹಾಕಬೇಕಿತ್ತು. ಆದರೆ, ಸರ್ಕಾರದ ಆದೇಶದಲ್ಲಿ 2023ರ ನಂತರ ಹಂಚಿಕೆಯಾಗಿರುವ ನಿವೇಶನಗಳ ಮಂಜೂರಾತಿ ರದ್ದು ಮಾಡಿದ್ದಾರೆ. ನಟೇಶ್ ಮುಡಾ ಆಯುಕ್ತ ಆಗಿದ್ದಾಗ ವ್ಯಾಪಕ ಅಕ್ರಮ ನಡೆದಿದೆ. ಆದರೂ ನಟೇಶ್ ಗೆ ಮೇಲಿಂದ ಮೇಲೆ ಪ್ರೊಮೋಷನ್ ಕೊಟ್ಟಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು.ಮುಡಾದಲ್ಲಿ ಕಾರ್ಯದರ್ಶಿಯಾಗಿದ್ದವರು ಈಗ ಮಹಾನಗರ ಪಾಲಿಕೆ ಆಯುಕ್ತರಾಗಿದ್ದಾರೆ. ಇವರಿಗೆ ಮುಡಾದಲ್ಲಿ ನಡೆದಿರುವುದು ಗೊತ್ತಿದೆ. ಹೀಗಾಗಿ, ಅಕ್ರಮ ನಿವೇಶನಗಳ ಮೇಲೆ ಪಾಲಿಕೆ ಆಯುಕ್ತರು ಕೂಡ ಸೂಕ್ತ ಕ್ರಮ ಕೈಗೊಳ್ಳಬೇಕು.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಅರಮನೆ, ವಿಧಾನಸೌಧವನ್ನು ಬೇಕಾದರೂ ಮಾರಾಟ ಮಾಡಿ ಬಿಡುತ್ತಾರೆ ಎಂದು ಅವರು ಆರೋಪಿಸಿದರು.ವ್ಯಾಪಾರಿಗಳಿಗೆ ಸ್ಥಳಾವಕಾಶ ಕಲ್ಪಿಸಬೇಕು
ನಾವೇನು ಫುಟ್ ಪಾತ್ ವ್ಯಾಪಾರಿಗಳ ವಿರೋಧಿಗಳಲ್ಲ. ಮೈಸೂರು ನಗರ ಪ್ರಮುಖ ಪ್ರವಾಸಿ ತಾಣವಾಗಿದೆ. ದೇಶ ವಿದೇಶಗಳ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ ಬೆಂಗಳೂರು ನಂತರ ಮೈಸೂರು ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ನಗರವಾಗಿದೆ. ಫುಟ್ ಪಾತ್ ವ್ಯಾಪಾರದಿಂದ ನಗರದ ಸೌಂದರ್ಯಕ್ಕೆ ಹಾಗೂ ಜನರ ಸುಗಮ ಓಡಾಟಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ, ತರಕಾರಿ ವ್ಯಾಪಾರಿಗಳಿಗೆ ಸ್ಥಳಾವಕಾಶ ಕಲ್ಪಿಸಿರುವಂತೆ ಬೀದಿ ಬದಿ ವ್ಯಾಪಾರಿಗಳಿಗೂ ಅನುಕೂಲ ಮಾಡಿಕೊಡಬೇಕು ಎಂದರು.ವಸ್ತುಪ್ರದರ್ಶನದ 80 ಎಕರೆ ಪ್ರದೇಶದ ಪೈಕಿ 10 ರಿಂದ 15 ಎಕರೆ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಜಾಗ ನೀಡಬೇಕು. ಬೆಂಗಳೂರಿನಲ್ಲಿ ಫುಟ್ ಪಾತ್ ಒತ್ತುವರಿ ತೆರವಿಗೆ ಸಚಿವ ಕೃಷ್ಣ ಭೈರೇಗೌಡ ಮುಂದಾಗಿದ್ದಾರೆ. ಸಚಿವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರೇ ಫುಟ್ ಪಾತ್ ಒತ್ತುವರಿ ತೆರವಿಗೆ ಅಡ್ಡಿ ಮಾಡುತ್ತಿರುವುದು ವಿಪರ್ಯಾಸವಾಗಿದೆ ಎಂದು ಅವರು ಹೇಳಿದರು.
----ಕೋಟ್...
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲವಾಗಿ 1924ರಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಸ್ಥಾಪನೆಯಾಯಿತು. ಹೀಗಾಗಿ, ಮೈಸೂರು ವೈದ್ಯಕೀಯ ಕಾಲೇಜಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರು ನಾಮಕರಣ ಮಾಡಬೇಕು. ಇದರ ಜೊತೆಗೆ ಮೈಸೂರಿನ ವಿವಿಧೆಡೆಗಳಲ್ಲಿ ಅಳವಡಿಸಿರುವ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕು. ಮೈಸೂರನ್ನು ಫ್ಲೆಕ್ಸ್ ಮುಕ್ತ ನಗರ ಮಾಡಬೇಕು.- ಆರ್. ರಘು ಕೌಟಿಲ್ಯ, ವಿಧಾನಪರಿಷತ್ ಸದಸ್ಯರು