ದಸರೆಗೆ ಆಗಮಿಸುವ ಪ್ರವಾಸಿಗರು ಮತ್ತು ಸಾರ್ವಜನಿಕರ ನಡುವೆ ಸಮಾಜಘಾತುಕ ಶಕ್ತಿಗಳು ನುಸುಳಿಕೊಂಡು ಬರುವ ಸಂಭವವಿರುತ್ತದೆ
ಕನ್ನಡಪ್ರಭ ವಾರ್ತೆ ಮೈಸೂರು
ರಾಮರಾಜ್ಯದ ಕಲ್ಪನೆ ಮೀರಿ ಮೈಸೂರು ಸಂಸ್ಥಾನವನ್ನು ಕಟ್ಟಿ ಬೆಳೆಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ಹಳೆ ಮೈಸೂರು ಭಾಗಕ್ಕೆ ನಾಲ್ವಡಿ ಮೈಸೂರು ಅಥವಾ ನಾಲ್ವಡಿ ಕರ್ನಾಟಕ ಎಂದು ದಸರಾ ಉದ್ಘಾಟನೆಯಂದು ಘೋಷಿಸುವಂತೆ ವಿಧಾನಪರಿಷತ್ ಸದಸ್ಯ ಆರ್. ರಘು ಕೌಟಿಲ್ಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು, ಮೈಸೂರು ಸೇರಿದಂತೆ ದಕ್ಷಿಣದ ಪ್ರದೇಶಗಳನ್ನು ಅಭಿವೃದ್ಧಿಯ ನಂದನವನ್ನಾಗಿಸಿದ ಮೈಸೂರು ರಾಜವಂಶಸ್ಥರ ಆಡಳಿತವನ್ನು ಸಂಕೇತಿಸುವ ನಿಟ್ಟಿನಲ್ಲಿ ಹಾಗೂ ಅವರ ಅಭಿವೃದ್ಧಿಯ ಹರಿಕಾರ ಎನಿಸಿಕೊಂಡ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಆಗಬೇಕು ಎಂದರು.
ದಸರೆಗೆ ಆಗಮಿಸುವ ಪ್ರವಾಸಿಗರು ಮತ್ತು ಸಾರ್ವಜನಿಕರ ನಡುವೆ ಸಮಾಜಘಾತುಕ ಶಕ್ತಿಗಳು ನುಸುಳಿಕೊಂಡು ಬರುವ ಸಂಭವವಿರುತ್ತದೆ. ಹೀಗಾಗಿ ವಿಶೇಷ ದಳವನ್ನು ರಚಿಸಿ, ಆಯ್ದ ಸ್ಥಳಗಳಲ್ಲಿ ಪೊಲೀಸ್ ವಿಚಾರಣಾ ಕೇಂದ್ರಗಳನ್ನು ತೆರೆಯಬೇಕು ಎಂದು ಅವರು ಒತ್ತಾಯಿಸಿದರು.ಮೈಸೂರಿನ ಸಾಂಪ್ರದಾಯಿಕ ಉತ್ಪನ್ನಗಳ ಹೆಸರಿನಲ್ಲಿ ನಿರಂತರವಾಗಿ ವಂಚನೆ ನಡೆಯುತ್ತಿದ್ದು, ದಸರೆಯ ಸಂದರ್ಭದಲ್ಲಿ ಜನರನ್ನು ಸುಲಿಗೆ ಮಾಡಿ, ದುಪ್ಪಟ್ಟು ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುವ ಮಾಫಿಯಾ ನಗರದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಮೈಸೂರು ಸಿಲ್ಕ್ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳ ದಂಧೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸೂಕ್ತ ಪ್ರಚಾರ ಹಾಗೂ ಅರಿವು ಮೂಡಿಸಬೇಕು ಎಂದರು.
ಬಿಜೆಪಿ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಜಿಲ್ಲಾ ಕಾರ್ಯದರ್ಶಿ ದಯಾನಂದ ಪಟೇಲ್, ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ಸತೀಶ್ ಕುಮಾರ್, ಪ್ರಧಾನ ಕಾರ್ಯದರ್ಶಿ ನಾಗೇಶ್ ಯಾದವ್ ಇದ್ದರು.----
ಬಾಕ್ಸ್...ಅರಮನೆ ಆಡಳಿತ ಮಂಡಳಿ ರದ್ದು ಮಾಡಿ
ಮೈಸೂರು ಅರಮನೆ ಆಡಳಿತ ಮಂಡಳಿಯನ್ನು ರದ್ದು ಮಾಡಬೇಕು. ಅರಮನೆಯನ್ನೂ ಸೇರಿ ಮೈಸೂರು ನಗರದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗಾಗಿ ಅರಮನೆ ಮತ್ತು ಮೈಸೂರು ಪಾರಂಪರಿಕ ಕಟ್ಟಡಗಳ ನಿರ್ವಹಣೆ ಮತ್ತು ಸುರಕ್ಷತಾ ಪ್ರಾಧಿಕಾರ ಸ್ಥಾಪನೆಯಾಗಬೇಕು ಎಂದು ವಿಧಾನಪರಿಷತ್ ಸದಸ್ಯ ಆರ್. ರಘು ಕೌಟಿಲ್ಯ ಆಗ್ರಹಿಸಿದರು.ಮೈಸೂರಿಗೆ ಇರುವುದು ಒಂದೇ ಅರಮನೆ. ಇಲ್ಲಿಗೆ ಲಕ್ಷಾಂತರ ಜನರು ಬರುತ್ತಾರೆ. ಅರಮನೆಯ ಒಂದು ಭಾಗಕ್ಕೆ ಡ್ಯಾಮೇಜ್ ಆಗಿದೆ. ಅದನ್ನು ಕಾಣದಿರಲು ಶೀಟ್ ಹಾಕಿ ಮರೆಮಾಚಲಾಗಿದೆ. ಪಂಪರೆಯ ಹಬ್ಬವೂ ಬೇಕು ಹಾಗೂ ಪರಂಪರೆಯ ಹೆಗ್ಗುರುತಾದ ಅರಮನೆಯನ್ನೂ ಹಾಗೂ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಯಾವ ದೇಶದಲ್ಲೂ ಅರಮನೆಯೊಳಗೆ ಜನರನ್ನು ಬಿಟ್ಟುಕೊಳ್ಳುವುದಿಲ್ಲ. ಹೀಗಾಗಿ, ಮೈಸೂರು ಅರಮನೆಗೂ ಜನರನ್ನು ಬಿಡಬಾರದು. ಪ್ರತಿದಿನ ಸಾವಿರಾರು ಜನರು ಅರಮನೆಯೊಳಗೆ ನುಗ್ಗಿದರೆ ಅರಮನೆ ಹೇಗೆ ಉಳಿಯುತ್ತದೆ? ಇಲ್ಲದಿದ್ದರೆ ಅರಮನೆಗೆ ದಿನಕ್ಕೆ ಇಂತಿಷ್ಟು ಪ್ರವಾಸಿಗರು ಮಾತ್ರ ಬರಬೇಕೆಂದು ನಿಗದಿಪಡಿಸಿ ಎಂದರು.