ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಭಯೋತ್ಪಾದಕರು, ವಿಕೃತ ಕಾಮಿಗಳಿಗೆ ರಾಜಾತಿಥ್ಯ ನೀಡುತ್ತಿರುವುದನ್ನು ಖಂಡಿಸಿ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಂಗಳವಾರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳು ಮತ್ತು ಗೃಹಸಚಿವರ ರಾಜೀನಾಮೆಗೆ ಆಗ್ರಹಿಸಿದರು.ಬಿಜೆಪಿ ಕಚೇರಿಯಿಂದ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಸಾಗಿದ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುತ್ತಿಗೆಗೆ ಯತ್ನಿಸಲು ಮುಂದಾದಾಗ ಪೊಲೀಸರು ತಡೆ ಹಿಡಿದರು. ಈ ನಡುವೆ ಪೊಲೀಸರ ಜತೆ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ಬಂಧನಕ್ಕೆ ಒಳಪಡಿಸಿದರು.
ಈ ವೇಳೆ ಮಾತನಾಡಿದ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ಭಯೋತ್ಪಾದಕರು, ವಿಕೃತ ಕಾಮಿ, ದೇಶದ್ರೋಹಿಗಳಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಸಕಲ ಸವಲತ್ತನ್ನು ಪೂರೈಸಿ ರಾಜಾತಿಥ್ಯವನ್ನು ನೀಡುತ್ತಿದೆ. ಈ ಎಲ್ಲಾ ಸವಲತ್ತನ್ನು ಒದಗಿಸುತ್ತಿರುವ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಕಾರಾಗೃಹದಲ್ಲಿ ವಿಕೃತ ಕಾಮಿ ಹಾಗೂ ಭಯೋತ್ಪಾದಕರ ಕೈಯಲ್ಲಿ ಸ್ಮಾರ್ಟ್ ಪೋನ್ ಬಳಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದು ರಾಜ್ಯದ ಕಾನೂನು ಸುವ್ಯವಸ್ಥೆಯ ವೈಫಲ್ಯತೆ ನೇರವಾಗಿ ಎದ್ದು ಕಾಣುತ್ತಿದೆ. ದೇಶದ ವಿರುದ್ಧ ಸಂಚು ನಡೆಸಿದ ಭಯೋತ್ಪಾದಕರು, ನಕ್ಸಲ್‌ಗಳು ಒಂದೇ ಸ್ಥಳದಲ್ಲೇ ಇರಿಸಿದರೆ ಮುಂದೊಂದು ದಿನ ಕಾರಾಗೃಹವನ್ನೇ ಸ್ಪೋಟಿಸಲಿದ್ದಾರೆ ಎಂದು ಎಚ್ಚರಿಸಿದರು.
ರಾಷ್ಟ್ರ ನಿರ್ಮಾಣದ ಕಾಯಕ ಮಾಡುವ ಆರ್‌ಎಸ್‌ಎಸ್ ಸಂಘಟನೆ ನಿಷೇಧಿಸಬೇಕೆಂಬ ಹೇಳಿಕೆಗಳು ಹರಿದಾಡುತ್ತಿದೆ. ಮೊದಲು ಜೈಲಿನಲ್ಲಿ ಖೈದಿಗಳಿಗೆ ಸೌಲಭ್ಯ ಕಲ್ಪಿಸುವ ಅಧಿಕಾರಿಗಳು ಹಾಗೂ ಕೆಪಿಸಿಸಿ ಕಚೇರಿಯಲ್ಲಿ ಕುಳಿತು ಉಗ್ರರನ್ನು ಬೆಂಬಲಿಸುವ ನಾಯಕರನ್ನು ಮೊದಲು ನಿಷೇಧಿಸುವ ಕೆಲಸ ಮಾಡಬೇಕೇ ಹೊರತು ದೇಶದ ಹಿತ ಚಿಂತನೆ ಹೊಂದಿರುವ ಆರ್‌ಎಸ್‌ಎಸ್ ಸಂಘಟನೆಯಲ್ಲ ಎಂದು ವಾಗ್ದಾಳಿ ನಡೆಸಿದರು.ಪ್ರಸ್ತುತ ರಾಜ್ಯ ಸರ್ಕಾರವು ಉಗ್ರಗ್ರಾಮಿಗಳ ಹಣದಿಂದ ಬಹಳಷ್ಟು ದಿನಗಳು ನಡೆಯುವುದಿಲ್ಲ. ಈ ದಂಧೆಯಲ್ಲಿ ತೊಡಗಿರುವ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಕೂಡಲೇ ರಾಜೀನಾಮೆ ಸಲ್ಲಿಸಲು ರಾಜ್ಯಾದ್ಯಂತ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಯುವ ಮೋರ್ಚಾ ಪ್ರತಿಭಟನೆ ಹಮ್ಮಿಕೊಂಡು ಎಚ್ಚರಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ, ಬಡವರು, ಶೋಷಿತರು, ದಲಿತರು ಹಾಗೂ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥೆ ನೆಲಕಚ್ಚಿದೆ. ರಾಷ್ಟ್ರದ್ರೋಹಿಗಳ ಜೊತೆ ಕೈಜೋಡಿಸಿ, ಕೈದಿಗಳಿಗೆ ಐಷಾರಾಮಿ ಬದುಕಲು ಅವಕಾಶ ಕಲ್ಪಿಸಿಕೊಟ್ಟಿರುವ ಕೆಟ್ಟ ರಾಜ್ಯ ಸರ್ಕಾರದ ನಡೆಯನ್ನು ಜನತೆ ಖಂಡಿಸಬೇಕು ಎಂದರು.ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚಿನ್‌ಗೌಡ, ಉಪಾಧ್ಯಕ್ಷೆ ಅಂಕಿತಾ, ಕಾರ್ಯದರ್ಶಿಗಳಾದ ರಾಜೇಶ್, ಶಶಿ ಆಲ್ದೂರು, ಓಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ಮುಖಂಡರುಗಳಾದ ಪುನೀತ್, ಕಾರ್ತೀಕ್, ಗೌತಮ್, ತಿಲಕ್, ಕಿಶೋರ್, ಮಧುಕುಮಾರ್ ರಾಜ್ ಅರಸ್, ಕಬೀರ್, ನಂದೀಶ್ ಮದಕರಿ, ಎಚ್.ಕೆ. ಕೇಶವಮೂರ್ತಿ, ಕಾರ್ಯಕರ್ತರು ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))