ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆ ನಾಲ್ಕನೆ ದಿನ ಶುಕ್ರವಾರ ಸಂಜೆ ಕೊಪ್ಪಳ ಜಿಲ್ಲೆ ಪ್ರವೇಶಿಸಿದ್ದು, ತಾಲೂಕಿನ ಚನ್ನಳ್ಳಿ ಕ್ರಾಸ್‌ನಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ಪಾದಯಾತ್ರೆಗೆ ಅದ್ಧೂರಿ ಸ್ವಾಗತ ಕೋರಿದರು.
ಕಾರಟಗಿ: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಬೃಹತ್ ಪಾದಯಾತ್ರೆ ನಾಲ್ಕನೆ ದಿನ ಶುಕ್ರವಾರ ಸಂಜೆ ಕೊಪ್ಪಳ ಜಿಲ್ಲೆ ಪ್ರವೇಶಿಸಿದ್ದು, ತಾಲೂಕಿನ ಚನ್ನಳ್ಳಿ ಕ್ರಾಸ್‌ನಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದ ಪಾದಯಾತ್ರೆಗೆ ಅದ್ಧೂರಿ ಸ್ವಾಗತ ಕೋರಿದರು.
ತಾಲೂಕಿನ ಗಡಿಭಾಗವಾದ ಚನ್ನಳ್ಳಿ ಕ್ರಾಸ್‌ಗೆ ಪಾದಯಾತ್ರೆ ಆಗಮಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಮಹಿಳೆಯರು 101 ಕುಂಭಗಳನ್ನು ಹೊತ್ತು ಭವ್ಯ ಮೆರವಣಿಗೆ ನಡೆಸಿ ನಾಯಕರನ್ನು ಸ್ವಾಗತಿಸಿದರು. ಪಕ್ಷದ ಬಾವುಟಗಳು ಹಾಗೂ ಘೋಷಣೆಗಳ ನಡುವೆ ನಡೆದ ಸ್ವಾಗತ ಕಾರ್ಯಕ್ರಮ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿ ಆಯಿತು.ವಿಜಯೇಂದ್ರಗೆ ಹೂವಿನ ಮಳೆ
ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಬೃಹತ್ ಹೂವಿನ ಹಾರ ಹಾಕಿ, ಕಾರ್ಯಕರ್ತರು ಅಭಿನಂದಿಸಿದರು. ಎರಡು ಜೆಸಿಬಿಗಳ ಮೂಲಕ ಹೂವುಗಳ ಸುರಿಮಳೆಗೈದು ವಿಜಯೇಂದ್ರ ಸೇರಿದಂತೆ ನಾಯಕರಿಗೆ ಭರ್ಜರಿ ಸ್ವಾಗತ ಕೋರಿದರು.ನೃತ್ಯ ತಂಡಗಳ ಪ್ರದರ್ಶನವೂ ಸ್ವಾಗತ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ವಿವಿಧ ಕಲಾತಂಡಗಳ ಪ್ರದರ್ಶನದೊಂದಿಗೆ ಕಾರ್ಯಕರ್ತರು ಉತ್ಸಾಹದಿಂದ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಕುರಿಮರಿ ಕಾಣಿಕೆಸ್ಥಳೀಯ ಅಭಿಮಾನಿಗಳು ವಿಜಯೇಂದ್ರ ಅವರಿಗೆ ಕಂಬಳಿ ಹಾಕಿ, ಎರಡು ಕುರಿ ಮರಿಗಳನ್ನು ಕಾಣಿಕೆಯಾಗಿ ನೀಡಿದರು. ಅಭಿಮಾನಿಗಳು ಕುರಿಮರಿ ನೀಡಿ, ಸ್ವಾಗತಿಸಿದ್ದರಿಂದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪುಳಕಗೊಂಡಿದ್ದರಲ್ಲದೇ ಅಭಿಮಾನಿಗಳ ಅಭಿಮಾನ ಕಂಡು ಭಾವುಕರಾದರು. ಈ ನಿಮ್ಮ ಕಾಣಿಕೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲು ಶಕ್ತಿ ನೀಡಿದೆ. ದುಷ್ಟ ಸರ್ಕಾರವನ್ನು ಕಿತ್ತೆಸೆಯಲು ಬಲತುಂಬಿದೆ ಎಂದು ಹೇಳಿ, ಕಾಣಿಕೆ ಕೊಟ್ಟವರಿಗೆ ಹಸ್ತಲಾಘವ ಮಾಡಿ ಅಪ್ಪಿಕೊಂಡರು.
ನಾಯಕರ ಸಾಥ್ಪಾದಯಾತ್ರೆಯಲ್ಲಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಶಾಸಕ ರಾಜುಗೌಡ, ಹೇಮಲತಾ ನಾಯಕ, ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕರಾದ ಬಸವರಾಜ ದಡೆಸೂಗೂರು, ಪರಣ್ಣ ಮುನವಳ್ಳಿ, ಜಿಲ್ಲಾಧ್ಯಕ್ಷ ನವೀನ್ ಗುಳ್ಳಗಣ್ಣವರ್, ತಿಪ್ಪೇರುದ್ರಸ್ವಾಮಿ, ಬಸವರಾಜ ಕ್ಯಾವಟರ ಸೇರಿದಂತೆ ಬಿಜೆಪಿಯ ಪ್ರಮುಖ ಮುಖಂಡರು ವಿಜಯೇಂದ್ರ ಅವರಿಗೆ ಸಾಥ್ ನೀಡಿದರು. ಸ್ಥಳೀಯ ಬಿಜೆಪಿ ಮುಖಂಡರು, ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಕಾರಟಗಿಯಲ್ಲಿ ಇಂದು ಸಮಾರೋಪ: ಚನ್ನಳ್ಳಿ ಕ್ರಾಸ್‌ನಿಂದ ಕಾರಟಗಿ ಪಟ್ಟಣದತ್ತ ಸಾಗಿದ ಪಾದಯಾತ್ರೆ ಶುಕ್ರವಾರ ಕಾರಟಗಿಯಲ್ಲಿ ರಾತ್ರಿ ಸಮಾರೋಪಗೊಂಡಿತು. ಸಮಾರೋಪ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಅಬ್ಬರಿಸಿ, ರಾಜ್ಯ ಸರ್ಕಸರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸೇರಿದ್ದ ಅಪಾರ ಸಂಖ್ಯೆಯ ಕಾರ್ಯಕರ್ತರು ಕೇಕೆ, ಹಾಕಿ ಸಂಭ್ರಮಿಸಿದರು.ಶನಿವಾರ ಬೆಳಗ್ಗೆ ಕಾರಟಗಿಯಿಂದ ಪಾದಯಾತ್ರೆ ಮುಂದುವರಿಯಲಿದ್ದು, ಗಂಗಾವತಿಯತ್ತ ಸಾಗಲಿದೆ.