ಗೆಲುವಿಗೆ ಬಿಜೆಪಿ ಪಂಚರತ್ನ

| Published : Mar 29 2024, 12:57 AM IST

ಸಾರಾಂಶ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ರಂಗೇರಿದೆ. ಕಳೆದ ಏಳು ಚುನಾವಣೆಗಳಲ್ಲಿ ಗೆದ್ದು ಬೀಗಿರುವ ಬಿಜೆಪಿ, ಎಂಟನೆಯ ಸಲದ ಗೆಲುವಿಗೂ ರಣತಂತ್ರ ರೂಪಿಸಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ರಂಗೇರಿದೆ. ಕಳೆದ ಏಳು ಚುನಾವಣೆಗಳಲ್ಲಿ ಗೆದ್ದು ಬೀಗಿರುವ ಬಿಜೆಪಿ, ಎಂಟನೆಯ ಸಲದ ಗೆಲುವಿಗೂ ರಣತಂತ್ರ ರೂಪಿಸಿದೆ. ಪಂಚರತ್ನ, ಬೂತ್‌ ಕಮಿಟಿ, ಲೋಕಸಭಾ ಚುನಾವಣಾ ನಿರ್ವಹಣೆ ಸಮಿತಿ ಹೀಗೆ ಹತ್ತಾರು ಕಮಿಟಿ ಮಾಡಿ ಚುನಾವಣಾ ಸಮರಕ್ಕೆ ಸಿದ್ಧವಾಗಿದೆ. ಬಿಜೆಪಿ-ಜೆಡಿಎಸ್‌ ಮೈತ್ರಿ ಆಗಿರುವ ಕಾರಣ ಈ ಸಲ ಜೆಡಿಎಸ್‌ ಕೂಡ ಬಿಜೆಪಿಯೊಂದಿಗೆ ಕೈ ಜೋಡಿಸಿದೆ.

ಪ್ರತಿನಿತ್ಯ ಸಭೆ:

ಬಿಜೆಪಿಯ ಭದ್ರಕೋಟೆ ಎಂದೆನಿಸಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈ ಸಲವೂ ಗೆಲ್ಲಲು ಏನೇನು ಬೇಕೋ ಆ ತಯಾರಿ ಮಾಡಿಕೊಂಡಿದೆ. ಎಂಟು ವಿಧಾನಸಭೆ ಕ್ಷೇತ್ರಗಳ ಪ್ರಮುಖರೊಂದಿಗೆ ಸಭೆ ನಡೆಸಿರುವ ಅಭ್ಯರ್ಥಿ, ಪ್ರತಿನಿತ್ಯ ಎರಡು ಜಿಪಂ ಕ್ಷೇತ್ರಗಳಿಗೆ ಭೇಟಿ ನೀಡಿ ಪ್ರಚಾರ ನಡೆಸುತ್ತಿದ್ದಾರೆ.

ಇದರೊಂದಿಗೆ ಪ್ರತಿ ಬೂತ್‌ ಮಟ್ಟದಲ್ಲಿ ಸಮಿತಿ, ಪಂಚರತ್ನ ಕಮಿಟಿ, ಲೋಕಸಭಾ ಚುನಾವಣಾ ನಿರ್ವಹಣಾ ಸಮಿತಿ, ವಿಧಾನಸಭೆ ಕ್ಷೇತ್ರವಾರು ಚುನಾವಣಾ ನಿರ್ವಹಣಾ ಸಮಿತಿ, ಸಮನ್ವಯ ಸಮಿತಿ, ಮಾಧ್ಯಮ ಸಮಿತಿ, ಸೋಷಿಯಲ್‌ ಮಿಡಿಯಾ ಸಮಿತಿ ಹೀಗೆ ಹತ್ತಾರು ಸಮಿತಿ ಮಾಡಿದೆ. ಪಂಚರತ್ನ ಸಮಿತಿಯಲ್ಲಿ ಎಸ್ಸಿ-ಎಸ್ಟಿ, ಒಬಿಸಿ, ಸಾಮಾನ್ಯ ವರ್ಗ, ಮಹಿಳಾ ಸದಸ್ಯೆಯರು ಇರುತ್ತಾರೆ. ಇವರು ಆ ಬೂತ್‌ನಲ್ಲಿನ ಮತದಾರರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ. ಬೂತ್‌ ಸಮಿತಿಯಲ್ಲಿ 12 ಜನರಿದ್ದಾರೆ. ಇದಲ್ಲದೇ, ಶಕ್ತಿ ಕೇಂದ್ರ, ಮಹಾಶಕ್ತಿ, ಮಂಡಲ ಹೀಗೆ ವಿವಿಧ ಸಮಿತಿ ಮಾಡಿ ಚುನಾವಣೆ ಸಿದ್ಧತೆ ಮಾಡಿಕೊಂಡಿದೆ.

ಪೇಜ್‌ ಪ್ರಮುಖರು:

ಇನ್ನು ಮತದಾರರ ಪಟ್ಟಿಯ ಪ್ರತಿಪುಟಕ್ಕೂ ಒಬ್ಬ ‘ಪೇಜ್‌ ಪ್ರಮುಖ’ರನ್ನು ನೇಮಿಸಿಕೊಂಡಿದೆ. ಒಂದು ಪುಟದಲ್ಲಿ 30 ಜನ ಮತದಾರರಿರುತ್ತಾರೆ. ಈ ಪೇಜ್‌ ಪ್ರಮುಖರು 30 ಮತದಾರರನ್ನು ಸಂಪರ್ಕಿಸಿ ಬಿಜೆಪಿಯತ್ತ ವಾಲುವಂತೆ ಮಾಡುವ ಉದ್ದೇಶದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಲ್ಲರೂ ಮನೆ-ಮನೆಗೆ ತೆರಳಿ ಮತದಾರರನ್ನು ಭೇಟಿ ಮಾಡಿ ಪ್ರಚಾರ ಮಾಡುತ್ತಿದ್ದಾರೆ.ಈ ಎಲ್ಲ ಕಮಿಟಿಗಳನ್ನು ಹೊರತುಪಡಿಸಿ ಚುನಾವಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡುವ ಉದ್ದೇಶದಿಂದ ನಿರ್ವಹಣಾ ಸಮಿತಿ, ಕಾರ್ಯಾಲಯ ಸಮಿತಿ, ಸಮನ್ವಯ ಸಮಿತಿ, ಮಾಧ್ಯಮ ಸಮಿತಿ, ಪ್ರವಾಸ ಸಮಿತಿ, ವಸತಿ ಸಮಿತಿ, ಪ್ರಚಾರ ಸಮಿತಿ ಹೀಗೆ ಹತ್ತಾರು ಕಮಿಟಿ ಮಾಡಲಾಗಿದೆ. ಪ್ರತಿ ಕಮಿಟಿಗಳಲ್ಲೂ ಕನಿಷ್ಠವೆಂದರೂ 5-10 ಜನ ಕಾರ್ಯಕರ್ತರು ಇರುತ್ತಾರೆ. ಅವರು ಆಯಾ ಕಮಿಟಿಗಳನ್ನು ಸಮರ್ಪಕವಾಗಿ ನಿಭಾಯಿಸುತ್ತಾರೆ. ಯಾರ್‍ಯಾರನ್ನು ಪ್ರಚಾರಕ್ಕೆ ಕರೆಯಿಸಬೇಕು. ಅವರಿಗೆ ಎಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಬೇಕು. ಎಲ್ಲೆಲ್ಲಿ ಪ್ರಚಾರ ಮಾಡಿಸಬೇಕು ಎಂಬ ಬಗ್ಗೆಯೆಲ್ಲ ಈ ಸಮಿತಿಗಳೇ ನಿರ್ಧರಿಸುತ್ತವೆ.

ಜೆಡಿಎಸ್‌ ಸಾಥ್‌:ಇದೀಗ ಜೆಡಿಎಸ್‌-ಬಿಜೆಪಿ ಎರಡು ಪಕ್ಷಗಳ ಮೈತ್ರಿ ಆಗಿರುವ ಕಾರಣ ಜೆಡಿಎಸ್‌ ಕೂಡ ಸಾಥ್‌ ನೀಡುತ್ತಿದೆ. ಸದ್ಯಕ್ಕೆ ಜೆಡಿಎಸ್‌ ಆಯಾ ತಾಲೂಕು ಮಟ್ಟದಲ್ಲಿ ತಮ್ಮ ತಮ್ಮ ಕಾರ್ಯಕರ್ತರ ಸಭೆ ನಡೆಸುತ್ತಿದೆ. ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಬೇಕು. ಬಿಜೆಪಿಯೊಂದಿಗೆ ಸೇರಿಕೊಂಡು ಪ್ರಚಾರ ನಡೆಸಬೇಕು ಎಂಬ ಸೂಚನೆಯನ್ನು ಜೆಡಿಎಸ್‌ ಮುಖಂಡರು, ಕಾರ್ಯಕರ್ತರಿಗೆ ನೀಡಿದ್ದಾರೆ.

ಘಟಾನುಘಟಿಗಳ ಆಗಮನ:ಇದಲ್ಲದೇ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಯಡಿಯೂರಪ್ಪ ಸೇರಿದಂತೆ ಹಲವು ಘಟಾನುಘಟಿಗಳು, ವಿವಿಧ ಸ್ಟಾರ್‌ ಪ್ರಚಾರಕರು ಪ್ರಚಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ತಯಾರಿಯನ್ನಂತೂ ನಡೆಸಿ ಅಬ್ಬರದ ಪ್ರಚಾರಕ್ಕೆ ಇಳಿದಿರುವುದಂತೂ ಸತ್ಯ.ಚುನಾವಣೆಯನ್ನು ಅತ್ಯಂತ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಮಾಡಲು ಬಗೆ-ಬಗೆಯ ಸಮಿತಿ ರಚಿಸಲಾಗಿದೆ. ಅಭ್ಯರ್ಥಿ, ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಪದಾಧಿಕಾರಿಗಳು ಎಲ್ಲೆಲ್ಲಿ, ಹೇಗೆ ಪ್ರಚಾರ ನಡೆಸಬೇಕು. ಸಮಾವೇಶಗಳನ್ನು ಎಲ್ಲಿ ನಡೆಸಬೇಕು ಎಂಬ ಬಗ್ಗೆಯೆಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಲವೂ ಬಿಜೆಪಿ ಗೆಲುವು ಕಟ್ಟಿಟ್ಟ ಬುತ್ತಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.