ಶಾಲಾ ಪ್ರಕರಣದಲ್ಲಿ ಬಿಜೆಪಿ ಕ್ಷುಲ್ಲಕ ರಾಜಕೀಯ: ಮಿಥುನ್ ರೈ

| Published : Feb 17 2024, 01:19 AM IST

ಶಾಲಾ ಪ್ರಕರಣದಲ್ಲಿ ಬಿಜೆಪಿ ಕ್ಷುಲ್ಲಕ ರಾಜಕೀಯ: ಮಿಥುನ್ ರೈ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂದುತ್ವ ಮಾಡುತ್ತಿರುವುದು ತಪ್ಪು, ಇದೇ ಹಿಂದುತ್ವ ಕಾರ್ಕಳದಲ್ಲಿ ಪರಶುರಾಮ ಮೂರ್ತಿಗೆ ಅವಮಾನವಾದಾಗ ಎಲ್ಲಿ ಹೋಗಿತ್ತು? ಎಂದು ಮಿಥನ್‌ ರೈ ಪ್ರಶ್ನಿಸಿದರು.

ಮೂಲ್ಕಿ: ಮಂಗಳೂರಿನ ಖಾಸಗಿ ಶಾಲೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ. ಭರತ್ ಶೆಟ್ಟಿ ಅವರು ಅನಗತ್ಯ ರಾಜಕೀಯ ಮಾಡುತ್ತಿದ್ದಾರೆ.ಶಾಲೆಯಲ್ಲಿ ನಡೆದ ಪ್ರಕರಣದ ಬಗ್ಗೆ ನೈಜ ದೂರು ಇನ್ನೂ ದಾಖಲಾಗಿಲ್ಲ. ಬಿಜೆಪಿ ಕ್ಷುಲ್ಲಕ ರಾಜಕೀಯ ಮಾಡುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್‌ ರೈ ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಲೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಿಂದುತ್ವ ಮಾಡುತ್ತಿರುವುದು ತಪ್ಪು, ಇದೇ ಹಿಂದುತ್ವ ಕಾರ್ಕಳದಲ್ಲಿ ಪರಶುರಾಮ ಮೂರ್ತಿಗೆ ಅವಮಾನವಾದಾಗ ಎಲ್ಲಿ ಹೋಗಿತ್ತು? ಎಂದು ಪ್ರಶ್ನಿಸಿರುವ ಅವರು, ಅವರದ್ದು ನೈಜ ಹಿಂದುತ್ವವಲ್ಲ ರಾಜಕೀಯಕ್ಕೋಸ್ಕರ ಹಿಂದುತ್ವ ಎಂದರು. ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕಾಂಗ್ರೆಸ್ ನಾಯಕರಾದ ಅಬ್ದುಲ್ ಖಾದರ್, ಬಾಲಚಂದ್ರ ಕಾಮತ್ ,ಧರ್ಮಾನಂದ ಶೆಟ್ಟಿಗಾರ್ ಮತ್ತಿತರರು ಇದ್ದರು.

ಇಂದು ಜೆರೋಸಾ ಶಿಕ್ಷಣ ಸಂಸ್ಥೆ ವಿರುದ್ಧ ನಗರ ಬಿಜೆಪಿ ಪ್ರತಿಭಟನೆ

ಮಂಗಳೂರು: ನಗರದ ಜೆರೋಸಾ ಶಿಕ್ಷಣ ಸಂಸ್ಥೆಯಲ್ಲಿ ಶ್ರೀರಾಮ ದೇವರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಅವಹೇಳನ ವಿರೋಧಿಸಿದ ಕಾರಣಕ್ಕೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರ ಮೇಲೆ ರಾಜಕೀಯ ಪ್ರೇರಿತ ಸುಳ್ಳು ಪ್ರಕರಣ ದಾಖಲಿಸಿದ್ದನ್ನು ಖಂಡಿಸಿ ಹಾಗೂ ಹಿಂದು ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಫೆ.17ರಂದು ಸಂಜೆ 3.30ಕ್ಕೆ ಇಲ್ಲಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಖಾಸಗಿ ಶಾಲಾ ಪ್ರತಿಭಟನೆಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ವಿರುದ್ಧ ಆಯೋಗಕ್ಕೆ ದೂರು

ಮಂಗಳೂರು: ನಗರದ ಖಾಸಗಿ ಶಾಲೆಯ ಶಿಕ್ಷಕಿಯಿಂದ ಹಿಂದು ಧರ್ಮದ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆ ಸಂದರ್ಭ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಆಯೋಗದ ಮಾಜಿ ಅಧ್ಯಕ್ಷೆ ಡಾ. ಕೃಪಾ ಅಮರ್‌ ಆಳ್ವ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆಯಿಂದ ಮಕ್ಕಳು ವಿಚಲಿತರಾಗಿದ್ದು, ಕೆಲವರು ಭಯಗೊಂಡಿದ್ದಾರೆ. ಪುಟ್ಟಮಕ್ಕಳನ್ನು ಶಾಲೆಯ ಗೇಟಿನ ಬಳಿ ನಿಲ್ಲಿಸಿ ರಾಜಕೀಯ ಪಕ್ಷದ ನಾಯಕರು ಬಳಸಿಕೊಂಡಿರುವುದು ಖಂಡನೀಯ. ಇದು ಮಕ್ಕಳ ಸ್ವಾತಂತ್ರ್ಯ ಮತ್ತು ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಆಪ್ತ ಸಲಹೆಗಾರರನ್ನು ನಿಯೋಜಿಸಿ ಮಕ್ಕಳ ಮನಸ್ಸು ತಿಳಿಗೊಳಿಸುವ ಕೆಲಸವಾಗಬೇಕು ಎಂದು ಆಗ್ರಹಿಸಿದರು.

ಮಕ್ಕಳನ್ನು ಮುಂದಿಟ್ಟು ಶಾಲೆಯ ಆವರಣದೊಳಗೆ ಅಥವಾ ಗೇಟ್‌ ಬಂದ್‌ ಮಾಡಿ ಅವರನ್ನು ತಡೆದು ಪ್ರತಿಭಟಿಸಲು ಬಳಸುವುದು ಅಪರಾಧವಾಗಿದೆ. ಆ ಹಿನ್ನೆಲೆಯಲ್ಲಿ ದೂರು ನೀಡಲಾಗಿದ್ದು, ಆಯೋಗವು ಡಿಡಿಪಿಐಯಿಂದ ವರದಿ ಪಡೆದುಕೊಂಡು ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ ಎಂದರು. ಅಲ್ಪಸಂಖ್ಯಾತ ಆಯೋಗದ ಮಾಜಿ ಸದಸ್ಯೆ ಮೆಟಿಲ್ಡಾ, ಮಕ್ಕಳ ಹಕ್ಕುಗಳ ಕಾರ್ಯಕರ್ತೆ ನಂದಾ ಪಾಯಸ್‌ ಇದ್ದರು.