ಸಾರಾಂಶ
ದೇಶದ ಯುವ ಸಮೂಹದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆ ಜಾರಿಗೆ ತಂದಿತು. ಇದರಲ್ಲಿ ನಾಲ್ಕು ವರ್ಷದ ಅವಧಿಗೆ ಯುವಕರನ್ನು ಅಗ್ನಿ ವೀರರನ್ನಾಗಿ ಸೇನೆಗೆ ನೇಮಿಸಿಕೊಂಡು ಪ್ರತಿ 25 ರಿಂದ 45 ಸಾವಿರದವರೆಗೆ ಹಂತ ಹಂತವಾಗಿ ವೇತನ ನೀಡುವುದು ಮತ್ತು ಸೇವೆ ಪೂರ್ಣಗೊಂಡ ಬಳಿಕ 14 ಲಕ್ಷ ರು. ಹಣ ನೀಡಲಾಗುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ಅಗ್ನಿವೀರ್ ಯೋಜನೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಯುವಕರು ಮತ್ತು ಸೈನಿಕರಿಗೆ ಅಪಮಾನ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಪೂರ್ವ ಸೈನಿಕ ಪ್ರಕೋಷ್ಠ ರಾಜ್ಯ ಸಮಿತಿ ಸದಸ್ಯ ಸಿದ್ದರಾಮು ಆಗ್ರಹಿಸಿದರು.ದೇಶದ ಯುವ ಸಮೂಹದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಗ್ನಿಪಥ ಯೋಜನೆ ಜಾರಿಗೆ ತಂದಿತು. ಇದರಲ್ಲಿ ನಾಲ್ಕು ವರ್ಷದ ಅವಧಿಗೆ ಯುವಕರನ್ನು ಅಗ್ನಿ ವೀರರನ್ನಾಗಿ ಸೇನೆಗೆ ನೇಮಿಸಿಕೊಂಡು ಪ್ರತಿ 25 ರಿಂದ 45 ಸಾವಿರದವರೆಗೆ ಹಂತ ಹಂತವಾಗಿ ವೇತನ ನೀಡುವುದು ಮತ್ತು ಸೇವೆ ಪೂರ್ಣಗೊಂಡ ಬಳಿಕ 14 ಲಕ್ಷ ರು. ಹಣ ನೀಡಲಾಗುತ್ತದೆ ಎಂದರು.
ಈ ಬಗ್ಗೆ ಸರಿಯಾಗಿ ತಿಳಿಯದೇ ಸೈನಿಕರನ್ನು ಅಪಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಈ ಯೋಜನೆಯಿಂದ ಆಯ್ಕೆಯಾದ ಅಗ್ನಿವೀರರು 4 ವರ್ಷದ ಸೇವೆ ಮುಗಿದ ಬಳಿಕ ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕೆಲಸಕ್ಕೆ ಸೇರಲು ಸೈನಿಕ ಮೀಸಲಾತಿ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.ಅಲ್ಲದೇ, ಸೇನಾ ನೇಮಕಾತಿಯಲ್ಲೂ ಅರ್ಹತೆ ಪಡೆದುಕೊಂಡು ಸೈನ್ಯ ಸೇರಬಹುದು. ಈ ಯೋಜನೆ 17ರಿಂದ 24 ವರ್ಷದವರಿಗೆ ಅನುಕೂಲವಾಗುವುದರಿಂದ ಯುವ ಸಮೂಹಕ್ಕೆ ದೇಶ ಭಕ್ತಿ, ಶಿಸ್ತು ಬೆಳೆಸಲು ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು.
ಅಗ್ನಿಪಥ ಯೋಜನೆ ಭಾರತೀಯ ಸೈನ್ಯ ಬಲ ಪಡಿಸುವ ಯೋಜನೆ. ಇದನ್ನು ಸಾಕಷ್ಟು ಅವಲೋಕನ ಮಾಡಿ ಜಾರಿಗೆ ತರಲಾಗಿದೆ. ಈಗಾಗಲೇ ದೇಶದಲ್ಲಿ 88 ಸಾವಿರಕ್ಕೂ ಹೆಚ್ಚು ಅಗ್ನಿವೀರರನ್ನು ನೇಮಿಸಲಾಗಿದ್ದು, ಇವರೆಲ್ಲಾ ಕಾರ್ಯ ನಿರ್ವಹಿಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ, ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಿಸುವ ಬದಲು ಮೊದಲೇ ಅಗ್ನಿಪಥ ಯೋಜನೆ ಮೂಲಕ ದೇಶದ ಯುವಕರಿಗೆ ಸೈನ್ಯದ ತರಬೇತಿ ನೀಡಿದರೆ ದೇಶದ ಭದ್ರತೆ ದೃಷ್ಟಿಯಿಂದ ಅನುಕೂಲವಾಗಲಿದೆ ಎಂದು ಅವರು ಹೇಳಿದರು.ಈ ಕೂಡಲೇ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು. ತಪ್ಪಿದರೆ ಮಾಜಿ ಸೈನಿಕರೆಲ್ಲ ಸೇರಿ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.
ಬಿಜೆಪಿ ವಕ್ತಾರ ಎಂ. ಮೋಹನ್ ಮಾತನಾಡಿ, ಅಗ್ನಿಪಥ ಯೋಜನೆ ಅನುಷ್ಠಾನದಿಂದ ಯುವ ಸಮುದಾಯಕ್ಕೆ ಬಹಳ ಅನುಕೂಲವಾಗಲಿದೆ. ಯುವಕರಲ್ಲಿ ಒಂದು ಶಿಸ್ತನ್ನು ಬೆಳೆಸುವ ನಿಟ್ಟಿನಲ್ಲಿ ಅನುಕೂಲವಾಗಲಿದೆ. ಈಗಾಗಲೇ 88 ಸಾವಿರ ಅಗ್ನಿವೀರರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಸೈನಿಕ ದೊಡ್ಡೇಗೌಡ, ಮಾಧ್ಯಮ ಸಂಯೋಜಕ ಮಹೇಶ್ ರಾಜೇ ಅರಸ್ ಇದ್ದರು.