ಎನ್‌ಡಿಎ ಭಾಗವಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಮತ್ತೊಂದು ಅವಧಿಗೆ ರಾಜ್ಯಸಭಾ ಸದಸ್ಯರನ್ನಾಗಿ ಮುಂದುವರೆಸುವ ಬಗ್ಗೆ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಬಿಜೆಪಿಯು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಕಸರತ್ತು ಆರಂಭಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಎನ್‌ಡಿಎ ಭಾಗವಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಮತ್ತೊಂದು ಅವಧಿಗೆ ರಾಜ್ಯಸಭಾ ಸದಸ್ಯರನ್ನಾಗಿ ಮುಂದುವರೆಸುವ ಬಗ್ಗೆ ಚರ್ಚೆ ನಡೆಯುತ್ತಿರುವ ಮಧ್ಯೆಯೇ ಬಿಜೆಪಿಯು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಕಸರತ್ತು ಆರಂಭಿಸಿದೆ.ಗುರುವಾರ ಪಕ್ಷದ ರಾಜ್ಯ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಸಭಾ ಮತ್ತು ವಿಧಾನಪರಿಷತ್ತಿನ ಮುಂಬರುವ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆದಿದ್ದು, ಸುಲಭವಾಗಿ ಲಭ್ಯವಾಗುವ ಒಂದು ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹಾಗೂ ಮಾಜಿ ಶಾಸಕ ನಿರ್ಮಲ್ ಕುಮಾರ್ ಸುರಾನ ಅವರ ಹೆಸರನ್ನು ಶಿಫಾರಸು ಮಾಡುವ ಬಗ್ಗೆ ಪ್ರಸ್ತಾಪವಾಗಿದೆ.ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ಒಟ್ಟು ನಾಲ್ಕು ಸ್ಥಾನಗಳಿಗೆ ಚುನಾವಣೆ ಎದುರಾಗಲಿದ್ದು, ಈ ಪೈಕಿ ವಿಧಾನಸಭೆಯ ಸಂಖ್ಯಾಬಲದ ಆಧಾರದ ಮೇಲೆ ಬಿಜೆಪಿಗೆ ಸುಲಭವಾಗಿ ಒಂದು ಸ್ಥಾನ ದಕ್ಕಲಿದೆ. ಬಿಜೆಪಿ ಮತ್ತು ಜೆಡಿಎಸ್ ಸೇರಿದರೂ ಎರಡು ಸ್ಥಾನ ಗೆಲ್ಲುವುದು ಕಷ್ಟ. ಹೀಗಾಗಿ, ಸಿಗುವ ಒಂದು ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಯಾಕೆ ಎಂಬ ಪ್ರಶ್ನೆ ರಾಜ್ಯ ಬಿಜೆಪಿ ನಾಯಕರಲ್ಲಿ ಮೂಡಿದೆ.ಆದರೆ, ಪ್ರಧಾನಿ ಮೋದಿ ಅವರಿಗೆ ದೇವೇಗೌಡರ ಮೇಲೆ ಪ್ರೀತಿ ಜಾಸ್ತಿ. ತಮ್ಮ ಪರ ಮಾತನಾಡುವ ಹಾಗೂ ಕರ್ನಾಟಕ ರಾಜಕಾರಣದಲ್ಲಿ ಈಗಲೂ ಸಾಕಷ್ಟು ಪ್ರಭಾವ ಹೊಂದಿರುವ ದೇವೇಗೌಡರು ಮತ್ತೊಂದು ಅವಧಿಗೆ ರಾಜ್ಯಸಭೆಗೆ ಪ್ರವೇಶಿಸುವ ಬಯಕೆ ಇದ್ದರೆ ಅದನ್ನು ಈಡೇರಿಸೋಣ ಎಂಬ ಅಭಿಪ್ರಾಯವನ್ನು ಮೋದಿ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ, ಅಂತಿಮವಾಗಿ ಬಿಜೆಪಿ ಹೈಕಮಾಂಡ್ ರಾಜ್ಯಸಭೆಯಿಂದ ಯಾರು ಸ್ಪರ್ಧಿಸಬೇಕು ಎಂಬುದನ್ನು ನಿರ್ಧರಿಸಲಿದೆ ಎಂದು ಮೂಲಗಳು ತಿಳಿಸಿವೆ.
ಈಗಷ್ಟೇ ತಮ್ಮ 94ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ದೇವೇಗೌಡರು ಮತ್ತೊಂದು ಅವಧಿಗೆ ರಾಜ್ಯಸಭೆಗೆ ಪ್ರವೇಶಿಸುವ ಬಗ್ಗೆ ಈವರೆಗೆ ತಮ್ಮ ಗುಟ್ಟು ಬಿಟ್ಟುಕೊಟ್ಟಿಲ್ಲ. ಆದರೆ, ಅವರ ಮೊಮ್ಮಗನೂ ಆಗಿರುವ ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ದೇವೇಗೌಡರು ಮತ್ತೊಂದು ಅವಧಿಗೆ ರಾಜ್ಯಸಭೆ ಪ್ರವೇಶಿಸಬೇಕು ಎಂಬ ಕೂಗು ಇದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ನಿಲುವು ಹೊರಹಾಕಿದ್ದರು.ಪರಿಷತ್ತಿಗೆ ಹಲವರು ಹೆಸರು ಪ್ರಸ್ತಾಪ:
ಈ ನಡುವೆ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಗೆ ಸಂಖ್ಯಾ ಬಲದ ಆಧಾರದ ಮೇಲೆ ಎರಡು ಸ್ಥಾನಗಳು ಲಭಿಸಲಿವೆ. ಇದರ ಬಗ್ಗೆಯೂ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದೆ.ಮಾಜಿ ಸಚಿವ ಎನ್.ಮಹೇಶ್, ರಾಜ್ಯ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ, ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ರಾಜ್ಯ ಉಪಾಧ್ಯಕ್ಷೆ ಮಾಳವಿಕಾ ಅವಿನಾಶ್ ಮತ್ತಿತರ ಹೆಸರುಗಳು ಪ್ರಸ್ತಾಪವಾಗಿವೆ ಎಂದು ಮೂಲಗಳು ತಿಳಿಸಿವೆ.