ಬಿಜೆಪಿ ಕಾರ್ಯಕರ್ತ ಸೆರೆ, ಶಾಸಕ ವಿರುದ್ಧ ಪ್ರಕರಣ ವಿರೋಧಿಸಿ ಬಿಜೆಪಿ ಪ್ರತಿಭಟನೆ

| Published : May 21 2024, 12:33 AM IST

ಬಿಜೆಪಿ ಕಾರ್ಯಕರ್ತ ಸೆರೆ, ಶಾಸಕ ವಿರುದ್ಧ ಪ್ರಕರಣ ವಿರೋಧಿಸಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳ್ತಂಗಡಿಯಲ್ಲಿ ಬಿಜೆಪಿ ಕಾರ್ಯಕರ್ತ ಶಶಿರಾಜ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿರುವುದನ್ನು ವಿರೋಧಿಸಿ ಹಾಗು ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲೂ ಪ್ರಕರಣ ದಾಖಲಿಸಿರುವುದು ವಿರೋಧಿಸಿ, ತಾಲೂಕು ಕಚೇರಿ ಮುಂಭಾಗದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಬಿಜೆಪಿ ಕಾರ್ಯಕರ್ತ ಶಶಿರಾಜ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿರುವುದನ್ನು ವಿರೋಧಿಸಿ ಹಾಗು ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲೂ ಪ್ರಕರಣ ದಾಖಲಿಸಿರುವುದು ವಿರೋಧಿಸಿ, ಇಲ್ಲಿನ ತಾಲೂಕು ಕಚೇರಿ ಮುಂಭಾಗದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಅಮಾಯಕ ಕಾರ್ಯಕರ್ತನ ಹಾಗೂ ಶಾಸಕರ ಹರೀಶ್ ಪೂಂಜರ ವಿರುದ್ಧ ಪೊಲೀಸರು ಸುಳ್ಳು ಕೇಸು ದಾಖಲಿಸಿರುವುದು ಖಂಡನೀಯ. ಈ ಕೇಸನ್ನು ವಾಪಾಸು ತೆಗೆದುಕೊಳ್ಳದಿದ್ದರೆ ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ನ್ಯಾಯ ಕೇಳಿದವರ ವಿರುದ್ಧ ಪ್ರಕರಣ ದಾಖಲಿಸುವ ಪರಂಪರೆ ಇದುವರೆಗೆ ಕಂಡಿಲ್ಲ. ಸರ್ಕಾರಿ ಅಧಿಕಾರಿಗಳು ಯಾವುದೇ ಪಕ್ಷದ ಹಿಂದೆ ಹೋಗದೆ ನ್ಯಾಯಯುತವಾಗಿ ಕರ್ತವ್ಯ ನಿರ್ವಹಿಸಬೇಕಾದ ಅಗತ್ಯ ಇದೆ ಎಂದರು.ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಜೈಲಾಗಿ ಪರಿವರ್ತಿಸಲು ಮುಂದಾಗಿದೆ. ಎಲ್ಲರಿಗೂ ನ್ಯಾಯ ಒಂದೇ ರೀತಿ ಇರಬೇಕು. ಸಂವಿಧಾನಕ್ಕೆ ಅಪಚಾರ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ.ಮುಂದಿನ 24 ಗಂಟೆಗಳ ಒಳಗೆ ಸುಳ್ಳು ಕೇಸ್ ಪಾವಸ್‌ ಪಡೆಯದಿದ್ದರೆ ಈ ಹೋರಾಟ ನ್ಯಾಯ ದೊರಕುವವರೆಗೆ ನಡೆಯಲಿದೆ ಎಂದು ಹೇಳಿದರು.ಶಾಸಕ ಹರೀಶ್ ಪೂಂಜ ಮಾತನಾಡಿ, ವಾರದೊಳಗೆ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಅಕ್ರಮ ಮರಳುಗಾರಿಕೆ ನಿಲ್ಲಬೇಕು. ಕಾರ್ಯಕರ್ತರಿಗೆ ಅನ್ಯಾಯವಾದರೆ ಜೈಲು ವಾಸ ಎದುರಿಸಲು ಸಿದ್ಧ. ಭ್ರಷ್ಟ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸುವ ಅನಿವಾರ್ಯತೆ ಬಂದೊದಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದು ಸಹಜ. ಆದರೆ ಅಮಾಯಕರ ಮೇಲೆ ಕೇಸು ದಾಖಲಿಸಿರುವುದು ಪೂರ್ವಗ್ರಹ ಪೀಡಿತವಾಗಿದೆ ಎಂದರು.ವಿಧಾನ ಪರಿಷತ್‌ ಸದಸ್ಯ ಪ್ರತಾಪ ಸಿಂಹ ನಾಯಕ್ ಮಾತನಾಡಿದರು.ಮಂಗಳೂರು ಲೋಕಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಹರಿಕೃಷ್ಣ ಬಂಟ್ವಾಳ, ಶ್ರೀನಿವಾಸ ರಾವ್ ಹಾಗೂ ಪಕ್ಷದ ಪ್ರಮುಖರು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

ಪ್ರಕರಣದ ಹಿನ್ನೆಲೆ:

ಮೇಲಂತಬೆಟ್ಟುವಿನಲ್ಲಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆಯ ವಿರುದ್ಧ ಶಶಿರಾಜ ಶೆಟ್ಟಿ ಹಾಗೂ ಪ್ರಮೋದ್ ಎಂಬವರ ವಿರುದ್ಧ ದೂರು ದಾಖಲಾಗಿದ್ದು, ಇದರಲ್ಲಿ ಶಶಿರಾಜ್ ಶೆಟ್ಟಿಯನ್ನು ಈಗಾಗಲೇ ಬಂಧಿಸಿದ್ದು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇನ್ನೊಬ್ಬ ಆರೋಪಿ ಪ್ರಮೋದ್ ದಿಡುಪೆ ಎಂಬಾತ ತಲೆಮರೆಸಿಕೊಂಡಿದ್ದಾನೆ.

ಇದರಲ್ಲಿ ಶಶಿರಾಜ್ ಶೆಟ್ಟಿಯ ಪಾತ್ರ ಇಲ್ಲದಿದ್ದರೂ ಕೇಸು ದಾಖಲಿಸಿ ಬಂಧಿಸಲಾಗಿದೆ ಎಂದು ಹೇಳಲಾಗುತ್ತಿದ್ದು, ಇದರ ಬಗ್ಗೆ ಪೋಲಿಸ್ ಠಾಣೆಗೆ ನ್ಯಾಯ ಕೇಳಲು ಹೋದ ಶಾಸಕ ಹರೀಶ್ ಪೂಂಜ ಅವರು, ಪೊಲೀಸರಿಗೆ ಬೈದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಕುರಿತು ಬೆಳ್ತಂಗಡಿ ಠಾಣೆಯಲ್ಲಿ ಅವರ ವಿರುದ್ಧವು ಸುಮೊಟೋ ಕೇಸು ದಾಖಲಾಗಿದೆ.

................ತಾಲೂಕು ಕಚೇರಿಗೆ ಕಾಂಗ್ರೆಸ್‌ ನಾಮಫಲಕ! ಲಾಯಿಲದ ಸಂಗಮ ಸಭಾಭವನದಿಂದ ತಾಲೂಕು ಕಚೇರಿವರೆಗೆ ಒಂದು ಕಿಮೀ ಮೆರವಣಿಗೆಯಲ್ಲಿ ಪಕ್ಷದ ಕಾರ್ಯಕರ್ತರು ಸಾಗಿ ಬಂದರು. ತಾಲೂಕು ಕಚೇರಿಗೆ ‘ಬ್ಲಾಕ್ ಕಾಂಗ್ರೆಸ್ ಕಚೇರಿ’ ಎಂಬ ಫಲಕವನ್ನು ಅಂಟಿಸುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಲಾಯಿತು. ತಹಸೀಲ್ದಾರ್, ಪೋಲಿಸರ ವಿರುದ್ಧ ಪ್ರತಿಭಟನೆಕಾರರು ನಾನಾ ರೀತಿಯ ಫಲಕಗಳನ್ನು ಪ್ರದರ್ಶಿಸಿದರು.