ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ

| Published : Jan 30 2024, 02:01 AM IST

ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಪತಿಗಳನ್ನು ಏಕ ವಚನದಲ್ಲಿ ಸಂಬೋಧಿಸಿದ್ದನ್ನು ಖಂಡಿಸಿ ಸೋಮವಾರ ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಹನುಮ ಧ್ವಜ ತೆರವು ಹಾಗೂ ರಾಷ್ಷ್ರಪತಿಯನ್ನು ಏಕವಚನದಲ್ಲಿ ನಿಂಧಿಸಿದ ವಿಚಾರವಾಗಿ ಧರಣಿ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಷ್ಟ್ರಪತಿಗಳನ್ನು ಏಕ ವಚನದಲ್ಲಿ ಸಂಬೋಧಿಸಿದ್ದನ್ನು ಖಂಡಿಸಿ ಸೋಮವಾರ ನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್, ಎಸ್ಸಿ ಮೋರ್ಚಾ ಅಧ್ಯಕ್ಷ ಸಿಮೆಂಟ್ ಮಂಜು, ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನಕುಮಾರ್, ಇದೊಂದು ಹಿಂದೂ ವಿರೋಧಿ ಸರ್ಕಾರ, ಕೆರಗೋಡಿನಲ್ಲಿ ಹನುಮ ಧ್ವಜವನ್ನು ತೆರವು ಮಾಡುವ ಮೂಲಕ ಉದ್ದೇಶಪೂರ್ವಕವಾಗಿ ಹಿಂದುಗಳ ಭಾವನೆಗಳನ್ನು ಧಕ್ಕೆ ಉಂಟು ಮಾಡಿದ್ದಾರೆ. ಕೆರಗೋಡು ಗ್ರಾಮಸ್ಥರ ಪ್ರತಿಭಟನೆಗೆ ಬೆಂಬಲ ನೀಡಲು ಬಂದ ಬಿಜೆಪಿ ನಾಯಕರನ್ನು ಬಂಧಿಸುವ ಮೂಲಕ ಪೊಲೀಸರನ್ನು ಅಸ್ತ್ರ ಮಾಡಿಕೊಂಡಿದ್ದೀರಿ. ಇದರ ವಿರುದ್ದ ಪಕ್ಷ ನಿರಂತರ ಹೋರಾಟ ಮಾಡಲಿದೆ ಎಂದರು.

ಚಿತ್ರದುರ್ಗದಲ್ಲಿ ನಡೆದ ಶೋಷಿತರ ಸಮಾವೇಶದಲ್ಲಿ ಪರಿಶಿಷ್ಟ ವರ್ಗದ ಗೌರವಾನ್ವಿತ ದೇಶದ ಅತ್ಯುನ್ನತ ಪದವಿಯಲ್ಲಿರುವ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರನ್ನು ಏಕ ವಚನದಲ್ಲಿ ಸಂಭೋದಿಸುವ ಮೂಲಕ ಶೋಷಿತ ವರ್ಗಕ್ಕೆ ಮತ್ತು ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ, ಇದು ಅವರ ದುರಂಹಕಾರದ ಪರಮಾವಧಿ, ಆ ಮೂಲಕ ಸಿಎಂ ಸಿದ್ದರಾಮಯ್ಯ ತಮ್ಮ ವ್ಯಕ್ತಿತ್ವವನ್ನು ತೋರಿಸಿದ್ದಾರೆ. ಇದು ಕಾಂಗ್ರೆಸ್ ಸಂಸ್ಕೃತಿಯಾಗಿದೆ ಎಂದು ಕಿಡಿಕಾರಿದರು.

ಜಿಲ್ಲಾಡಳಿತ ಭವನ ಮುತ್ತಿಗೆ ಯತ್ನ: ಬಂಧನ, ಬಿಡುಗಡೆ

ಭುವನೇಶ್ವರಿ ವೃತ್ತದದಲ್ಲಿ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಡಳಿತ ಭವನಕ್ಕೆ ತೆರಳಿ ಒಳನುಗ್ಗಲು ಯತ್ನಿಸಿದ ನೂರಕ್ಕೂ ಹೆಚ್ಚು ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಪೋಲಿಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.

ಪೊಲೀಸರು ಪ್ರತಿಭಟನಾ ನಿರತ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಮಾಜಿ ಶಾಸಕ ಎಸ್.ಬಾಲರಾಜು, ವೆಂಕಟರಮಣಸ್ವಾಮಿ, ಪಾಪು, ಪ್ರಣಯ್, ಮೂಡ್ನಾಕೂಡ್ ಪ್ರಕಾಶ್, ಜನದ್ವನಿವೆಂಕಟೇಶ್, ದತ್ತೇಶ್, ಡಾ.ಎ.ಆರ್.ಬಾಬು, ಕೂಡ್ಲೂರು ಶ್ರೀಧರಮೂರ್ತಿ, ಅಯ್ಯನಪುರ ಶಿವಕುಮಾರ್, ಕೆರೆಹಳ್ಳಿ ಮಹದೇವಸ್ವಾಮಿ, ಶಾಂತಮೂರ್ತಿ, ಚಾಮುಲ್ ಅಧ್ಯಕ್ಷ ನಾಗೇಂದ್ರ, ಬಂಗಾರನಾಯಕ, ಶಿವರಾಜ್, ನಟರಾಜು, ಮಹೇಂದ್ರ, ಆಶಾನಟರಾಜು, ದ್ರಾಕ್ಷಯಿಣಿ, ಸರಸ್ವತಿ, ಸೂರ್ಯಬಾಲರಾಜು, ಲೋಕೇಶ್ ಕೆ.ಎಲ್.ವೃಷಬೇಂದ್ರ, ಕೂಸಣ್ಣ, ಸೇರಿದಂತೆ 100 ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೋಲಿಸರು ಪ್ರತಿಭಟನಾನಿರತರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.